ವಿಪಕ್ಷಗಳ ಪ್ರತಿರೋಧದ ನಡುವೆ ಚುನಾವಣೆ ಕಾನೂನುಗಳ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ
ಹೊಸದಿಲ್ಲಿ: ಆಧಾರ್ ಕಾರ್ಡ್ ಅನ್ನು ಮತದಾರರ ಗುರುತು ಪತ್ರಕ್ಕೆ ಜೋಡಿಸಲು ಅನುಮತಿಸುವ ಚುನಾವಣೆ ಕಾನೂನುಗಳ (ತಿದ್ದುಪಡಿ) ಮಸೂದೆ ಇಂದು ಲೋಕಸಭೆಯಲ್ಲಿ ವಿಪಕ್ಷಗಳ ವ್ಯಾಪಕ ಪ್ರತಿರೋಧದ ನಡುವೆ ಅಂಗೀಕಾರಗೊಂಡಿದೆ. ಈ ರೀತಿ ಆಧಾರ್ ಕಾರ್ಡ್ ಅನ್ನು ಒಬ್ಬರ ಮತದಾರರ ಗುರುತು ಪತ್ರದೊಂದಿಗೆ ಜೋಡಿಸುವುದರಿಂದ ದೇಶದಲ್ಲಿ ನಾಗರಿಕರಲ್ಲದವರಲ್ಲಿ ಹೆಚ್ಚಿನವರು ಮತದಾನ ಮಾಡುವಂತಾಗುತ್ತದೆ ಎಂದು ವಿಪಕ್ಷಗಳು ವಾದಿಸುತ್ತಿವೆ.
"ಆಧಾರ್ ಕಾರ್ಡ್ ವಾಸ್ತವ್ಯದ ಪುರಾವೆಯಾಗಿದೆಯೇ ಹೊರತು ಪೌರತ್ವದ ಪುರಾವೆಯಲ್ಲ. ನೀವು ಮತದಾನಕ್ಕೆ ಆಧಾರ್ ಕಾರ್ಡ್ ಕೇಳಿದರೆ, ಒಬ್ಬರ ವಾಸದ ಮಾಹಿತಿ ದೊರಕುತ್ತದೆ. ಇದು ಮುಂದೆ ನಾಗರಿಕರಲ್ಲದವರಿಗೆ ಮತದಾನ ಹಕ್ಕು ನೀಡಿದಂತಾಗುತ್ತದೆ,'' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು.
"ಮತದಾನ ಒಂದು ಕಾನೂನಾತ್ಮಕ ಹಕ್ಕು. ಆಧಾರ್ ಕಾರ್ಡ್ ಅನ್ನು ಮತದಾರರ ಗುರುತಪತ್ರದೊಂದಿಗೆ ಜೋಡಿಸುವುದು ಸರಿಯಲ್ಲ,'' ಎಂದು ಇನ್ನೊಬ್ಬ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದರು.
"ಸರಕಾರ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ನಾನು ಈ ಮಸೂದೆಯನ್ನು ವಿರೋಧಿಸುತ್ತೇನೆ,'' ಎಂದುಇ ಟಿಎಂಸಿಯ ಸೌಗತೊ ರಾಯ್ ಹೇಳಿದರು.
ವಿಪಕ್ಷಗಳ ಆಕ್ಷೇಪಣೆಗಳು ಆಧಾರರಹಿತ ಎಂದು ಹೇಳಿದ ಕೇಂದ್ರ ಸಚಿವ ಕಿರೆಣ್ ರಿಜಿಜು, "ಸರಕಾರವು ಬೋಗಸ್ ಮತ್ತು ನಕಲಿ ಮತದಾನಕ್ಕೆ ಅಂತ್ಯ ಹಾಡಲು ಬಯಸುತ್ತಿದೆ. ಇಂತಹ ಒಂದು ಕ್ರಮಕ್ಕೆ ವಿಪಕ್ಷಗಳು ಸರಕಾರಕ್ಕೆ ಬೆಂಬಲಿಸಬೇಕು.'' ಎಂದು ಹೇಳಿದರು.
ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾತನಾಡಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತುಪತ್ರ ಜೋಡಿಸುವುದು ದೊಡ್ಡ ತಪ್ಪಾಗುತ್ತದೆ ಎಂದು ಹೇಳಿದರು.