ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ವಿದ್ಯುತ್ ಆಘಾತಕ್ಕೆ 600 ಆನೆಗಳು ಬಲಿ, ಕರ್ನಾಟಕದಲ್ಲಿ 116 ಆನೆಗಳ ಸಾವು

Update: 2021-12-20 12:04 GMT

ಹೊಸದಿಲ್ಲಿ : ದೇಶದಲ್ಲಿ 2009 ಹಾಗೂ 2019ರ ನಡುವೆ  600 ಆನೆಗಳು ವಿದ್ಯುತ್ ಆಘಾತಕ್ಕೆ ಬಲಿಯಾಗಿವೆ ಎಂದು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಒದಗಿಸಿದ ಅಂಕಿಅಂಶಗಳು ತಿಳಿಸುತ್ತವೆ.  ಈ 600 ಆನೆಗಳ ಪೈಕಿ 116 ಆನೆಗಳು ಕರ್ನಾಟಕದಲ್ಲಿ ಸಾವನ್ನಪ್ಪಿವೆ. ಉಳಿದಂತೆ ಒಡಿಶಾದಲ್ಲಿ 117 ಹಾಗೂ ಅಸ್ಸಾಂನಲ್ಲಿ 105 ಆನೆಗಳು ದುರಂತ ಅಂತ್ಯ ಕಂಡಿವೆ. ಈ ಅವಧಿಯಲ್ಲಿ ಅರುಣಾಚಲ ಪ್ರದೇಶ, ತ್ರಿಪುರಾ ಮತ್ತು ಮಹಾರಾಷ್ಟ್ರಗಳಲ್ಲಿ ಯಾವುದೇ ಆನೆಗಳ ಸಾವು ವಿದ್ಯುತ್ ಶಾಕ್‍ನಿಂದ ಸಂಭವಿಸಿಲ್ಲ.

ಕೊಡಗು ಜಿಲ್ಲೆಯಲ್ಲಿ ಈ ವರ್ಷದ ಜುಲೈ ತಿಂಗಳಿನಲ್ಲಿ ನಾಲ್ಕು ಆನೆಗಳು  ಮೃತಪಟ್ಟಿದ್ದರೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಗಂಡಾನೆಗಳು ಮೃತಪಟ್ಟಿವೆ. ಕಳೆದ ವರ್ಷ ಸೆಪ್ಟೆಂಬರಿನಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಾಲ್ಕು ಆನೆಗಳು ವಿದ್ಯುತ್ ಆಘಾತಕ್ಕೆ ಬಲಿಯಾಗಿವೆ.

ಹೆಚ್ಚಿನ ಸಂದರ್ಭಗಳಲ್ಲಿ ಖಾಸಗಿ ಭೂಮಾಲೀಕರು ಅಳವಡಿಸಿರುವ ವಿದ್ಯುತ್ ಬೇಲಿಗಳನ್ನು ಮುಟ್ಟಿ ಆನೆಗಳು ಸಾವನ್ನಪ್ಪಿವೆ. ಈ ಬೇಲಿಗಳನ್ನು ಅಕ್ರಮವಾಗಿ ಅಳವಡಿಸಿರುವುದರಿಂದ ಸಂಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News