ಎಸ್ಡಿಪಿಐ ಮುಖಂಡ ಹತ್ಯೆ ಪ್ರಕರಣ: ಇಬ್ಬರು ಆರೆಸ್ಸೆಸ್‌ ಕಾರ್ಯಕರ್ತರ ಸೆರೆ

Update: 2021-12-20 12:20 GMT
Photo: Twitter

ಆಲಪ್ಪುಳ: ಶನಿವಾರ ರಾತ್ರಿ ಅಲಪ್ಪುಳದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಕಾರ್ಯದರ್ಶಿ ಕೆ ಎಸ್ ಶಾನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಸೋಮವಾರ ಇಬ್ಬರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಬಂಧಿತ ಆರೆಸ್ಸೆಸ್ ಕಾರ್ಯಕರ್ತರಾದ ಪ್ರಸಾದ್ ಮತ್ತು ರತೀಶ್ ಕೊಲೆಯಾದ ಶಾನ್‌ ರ ಗ್ರಾಮ ಮನ್ನಂಚೇರಿ ಮೂಲದವರಾಗಿದ್ದು, ಕೊಲೆಯ ಹಿಂದಿನ ಸಂಚಿನಲ್ಲಿ ಅವರ ಪಾತ್ರವಿದೆ ಎಂದು ಅಲಪ್ಪುಳ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಜಿ ಜೈದೇವ್ ಹೇಳಿದ್ದಾರೆ. 

ಎಸ್‌ಡಿಪಿಐ ಮುಖಂಡನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ಬಂಧಿತ ಆರೋಪಿಗಳು ವಾಹನ ವ್ಯವಸ್ಥೆ ಮಾಡಿದ್ದರು ಎಂದು ಎಸ್‌ಪಿ ತಿಳಿಸಿದ್ದಾರೆ. ಹತ್ಯೆ ಮಾಡಿದವರು ಸೇರಿದಂತೆ ಎಂಟು ಮಂದಿಯನ್ನು ಇನ್ನೂ ಬಂಧಿಸಬೇಕಾಗಿದೆ ಎಂದು ಅವರು ಹೇಳಿದರು.

ಅಲ್ಲದೆ, ಶಾನ್ ಹತ್ಯೆಗೆ ಪ್ರತೀಕಾರವಾಗಿ ರವಿವಾರ ಬೆಳಿಗ್ಗೆ ಹತ್ಯೆಗೀಡಾದ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ.

ಆಲಪ್ಪುಳ ನಗರದ ರಂಜಿತ್ ಅವರ ಮನೆಯ ಬಳಿಯಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ 12 ಜನರು ಆರು ದ್ವಿಚಕ್ರ ವಾಹನಗಳಲ್ಲಿ ಅವರ ಲೇನ್‌ಗೆ ಪ್ರವೇಶಿಸುವುದನ್ನು ತೋರಿಸಿದೆ. ರಾಜಕೀಯ ಎದುರಾಳಿಗಳ ಹಿಟ್ ಲಿಸ್ಟ್‌ನಲ್ಲಿ ರಂಜಿತ್ ಎಂದಿಗೂ ಸ್ಥಾನ ಪಡೆಯದ ಕಾರಣ ರಂಜಿತ್ ಮೇಲಿನ ದಾಳಿ ಅನಿರೀಕ್ಷಿತವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News