ಬ್ರಿಟನ್: ಒಂದೇ ದಿನ 91,743 ಕೊರೋನ ಸೋಂಕು ಪ್ರಕರಣ; ಕಠಿಣ ಲಾಕ್‌ಡೌನ್ ಜಾರಿಯ ಮುನ್ಸೂಚನೆ ನೀಡಿದ ಪ್ರಧಾನಿ
ಲಂಡನ್, ಡಿ.21: ಬ್ರಿಟನ್‌ನಲ್ಲಿ ಸೋಮವಾರ ದಾಖಲೆಯ 91,743 ಕೊರೋನ ಸೋಂಕು ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ, ಕೊರೋನ ಸೋಂಕಿಗೆ ಸಂಬಂಧಿಸಿದ ಅಂಕಿ ಅಂಶದ ಮೇಲೆ ಪ್ರತೀ ಗಂಟೆಗೊಮ್ಮೆ ನಿಗಾ ಇರಿಸಲಾಗುವುದು ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಸುದೀರ್ಘ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಂಕು ಪ್ರಕರಣ ಉಲ್ಬಣಗೊಂಡಿರುವುದರಿಂದ ಕ್ರಿಸ್‌ಮಸ್‌ಗೂ ಮುನ್ನ ಕಠಿಣ ಲಾಕ್‌ಡೌನ್ ಕ್ರಮಗಳ ಜಾರಿಗೆ ಹಿಂಜರಿಯುವುದಿಲ್ಲ . ಆದರೆ ಕ್ರಮ ಕೈಗೊಳ್ಳುವ ಮುನ್ನ ಒಮೈಕ್ರಾನ್ ರೂಪಾಂತರದ ಕುರಿತ ಕೆಲವು ವಿಷಯಗಳು ಸ್ಪಷ್ಟವಾಗಬೇಕಿದೆ ಎಂದರು.
ಸಾರ್ವಜನಿಕರ , ಸಾರ್ವಜನಿಕರ ರಕ್ಷಣೆಯ, ನಮ್ಮ ರಾಷ್ಟ್ರೀಯ ಆರೋಗ್ಯ ಕಾರ್ಯಕರ್ತರ ರಕ್ಷಣೆಯ ಉದ್ದೇಶದಿಂದ ದುರದೃಷ್ಟವಶಾತ್ ಕೆಲವೊಂದು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ಆದರೆ ಇಂತಹ ಕ್ರಮಕ್ಕೂ ಮುನ್ನ ಕೆಲವು ವಿಷಯಗಳ ಬಗ್ಗೆ ಸ್ಪಷ್ಟಪಡಿಸಿಕೊಳ್ಳಬೇಕಿದೆ. ಈಗಿನ ಪರಿಸ್ಥಿತಿಯಲ್ಲಿ ಜನತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು, ಗಾಳಿ ಬೆಳಕಿನ ವ್ಯವಸ್ಥೆ ಸುಸೂತ್ರಗೊಳಿಸುವುದು, ಆಗಾಗ ಕೈಗಳನ್ನು ತೊಳೆದುಕೊಳ್ಳುವುದು ಮುಂತಾದ ಕ್ರಮಗಳನ್ನು ಪಾಲಿಸಲು ಮರೆಯಬಾರದು ಎಂದವರು ಹೇಳಿದ್ದಾರೆ.
ಕೊರೋನ ಪ್ರಕರಣಗಳ ಅಂಕಿಅಂಶಗಳನ್ನು ನಿರಂತರ ಪರಿಶೀಲಿಸಲಾಗುತ್ತಿದೆ . ಆಸ್ಪತ್ರೆಗಳಲ್ಲಿ ದಾಖಲಾಗುವವರ ಪ್ರಮಾಣ ಹೆಚ್ಚಿದ್ದು ಲಾಕ್‌ಡೌನ್ ಜಾರಿಯ ಪರ ಮತ್ತು ವಿರೋಧ ಇರುವ ಅಭಿಪ್ರಾಯ ಸಮತೋಲಿತವಾಗಿದೆ. ಲಸಿಕೆ ಪಡೆಯದವರು ತಮ್ಮ ಮತ್ತು ಕುಟುಂಬದವರ ಸುರಕ್ಷತೆಗಾಗಿ ಲಸಿಕೆ ಪಡೆಯಬೇಕು. ಈಗಾಗಲೇ ಲಸಿಕೆ ಪಡೆದವರೂ ಬೂಸ್ಟರ್ ಲಸಿಕೆ ಪಡೆಯಲು ಹಿಂಜರಿಯಬಾರದು ಎಂದವರು ಸಲಹೆ ನೀಡಿದರು.
ಈ ಮಧ್ಯೆ, ಕ್ರಿಸ್‌ಮಸ್ ಸಂಭ್ರಮಾಚರಣೆಗೆ ಜನ ಹಿಂಜರಿಯುತ್ತಿರುವುದರಿಂದ ತಮಗೆ ಭಾರೀ ನಷ್ಟವಾಗಿದ್ದು ಸರಕಾರ ಆರ್ಥಿಕ ಪ್ಯಾಕೇಜ್‌ನ ನೆರವು ಘೋಷಿಸಬೇಕು ಎಂದು ಬ್ರಿಟನ್‌ನ ಆತಿಥ್ಯ ಉದ್ಯಮ ಆಗ್ರಹಿಸಿದೆ. ಈ ಬಗ್ಗೆ ಗಮನ ನೀಡುವುದಾಗಿ ಪ್ರಧಾನಿ ಜಾನ್ಸನ್ ಭರವಸೆ ನೀಡಿದ್ದಾರೆ. ಕೊರೋನ ಸೋಂಕು ಪ್ರಕರಣ ಉಲ್ಬಣಿಸಿರುವುದು ಮತ್ತು ಬಳಲಿಕೆಯಿಂದ ವೈದ್ಯಕೀಯ ಸಿಬಂದಿಗಳು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಬ್ರಿಟನ್‌ನ ಪ್ರಮುಖ ನರ್ಸ್‌ಗಳ ಯೂನಿಯನ್ ಸೋಮವಾರ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ವೈದ್ಯಕೀಯ ಸಿಬಂದಿಗಳು ಅನಾರೋಗ್ಯಕ್ಕೆ ಒಳಗಾಗಿರುವುದು ಮತ್ತು ಸ್ವಯಂ ಪ್ರತ್ಯೇಕತೆ(ಐಸೊಲೇಷನ್)ಯಿಂದಾಗಿ ಆಸ್ಪತ್ರೆಗಳಲ್ಲಿ ಸಮಸ್ಯೆ ಎದುರಾಗಿದೆ. ಕೊರೋನ ಸೋಂಕಿನ ಪ್ರಕರಣ ನಿರಂತರ ಹೆಚ್ಚುತ್ತಿರುವುದರಿಂದ ಮಾನಸಿಕ ಮತ್ತು ದೈಹಿಕ ಬಳಲಿಕೆಗೆ ಒಳಗಾಗಿದ್ದಾರೆ ಎಂದು ರಾಯಲ್ ಕಾಲೇಜ್ ಆಫ್ ನರ್ಸಿಂಗ್ ಯೂನಿಯನ್‌ನ ನಿರ್ದೇಶಕಿ ಪೆಟ್ರೀಷಿಯಾ ಮಾರ್ಕ್ವಿಸ್ ಹೇಳಿದ್ದಾರೆ.
ಒಮೈಕ್ರಾನ್ ಕುರಿತ ಗೊಂದಲ ಮುಂದುವರಿಕೆ
ಈ ಮಧ್ಯೆ, ಒಮೈಕ್ರಾನ್ ರೂಪಾಂತರದ ಕುರಿತು ವಿಶ್ವದಾದ್ಯಂತ ಗೊಂದಲ ಮುಂದುವರಿದಿದೆ. ಇದು ಡೆಲ್ಟಾ ಪ್ರಬೇಧಕ್ಕಿಂತ ಸೌಮ್ಯ ಸೋಂಕು ಎಂದು ಕೆಲವು ವರದಿ ಹೇಳಿದ್ದರೂ, ಅತ್ಯಧಿಕ ವೇಗದಲ್ಲಿ ಪ್ರಸರಣಗೊಳ್ಳುವುದರಿಂದ ಒಮೈಕ್ರಾನ್ ನಿಯಂತ್ರಣ ಕ್ರಮದ ಬಗ್ಗೆ ಯುರೋಪ್ ಹಾಗೂ ಅಮೆರಿಕದ ದೇಶಗಳಲ್ಲಿ ಅಸ್ಪಷ್ಟತೆಯಿದೆ. ಆರಂಭಿಕ ಮಾಹಿತಿಯಂತೆ ಒಮೈಕ್ರಾನ್‌ನಿಂದ ಗಂಭೀರ ಪ್ರಮಾಣದ ಅನಾರೋಗ್ಯ ಸಂಭವಿಸುವುದಿಲ್ಲ. ಆದರೆ, ಇದು ಲಸಿಕೆಯ ರೋಗನಿರೋಧಕ ಶಕ್ತಿಯಿಂದ ನುಣುಚಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಈಗಲೇ ಏನನ್ನೂ ಹೇಳಲಾಗದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಇದು ಸಾಮಾನ್ಯವಾಗಿ ಕಡಿಮೆ ಗಂಭೀರ ಪ್ರಕರಣಗಳಿಗೆ ಕಾರಣವಾಗಿದ್ದರೂ, ಸೋಂಕಿನ ವ್ಯಾಪಕ ಪ್ರಮಾಣವು ಆರೋಗ್ಯ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.