ಸ್ವ ಸಹಾಯ ಗುಂಪುಗಳಿಗೆ 1,000 ಕೋ.ರೂ. ವರ್ಗಾಯಿಸಿದ ಪ್ರಧಾನಿ

Update: 2021-12-21 17:16 GMT

ಪ್ರಯಾಗ್‌ರಾಜ್ (ಉ.ಪ್ರ.), ಡಿ. 21: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸ್ವ ಸಹಾಯ ಗುಂಪು (ಎಸ್‌ಎಚ್‌ಜಿ)ಗಳ ಬ್ಯಾಂಕ್ ಖಾತೆಗಳಿಗೆ ಸುಮಾರು 1,000 ಕೋಟಿ ರೂಪಾಯಿ ವರ್ಗಾಯಿಸಿದ್ದಾರೆ. ಇದು ಸ್ವಸಹಾಯ ಗುಂಪಿನ 16 ಲಕ್ಷ ಮಹಿಳೆಯರಿಗೆ ಪ್ರಯೋಜನವಾಗಲಿದೆ.

ಪ್ರಯಾಗ್‌ರಾಜ್‌ನಲ್ಲಿ 2 ಲಕ್ಷ ಮಹಿಳೆಯರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುವ ಮುಖ್ಯಮಂತ್ರಿ ಕನ್ಯಾ ಸುಮಂಗಳಾ ಯೋಜನೆಯ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ 20 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕೂಡ ವರ್ಗಾವಣೆ ಮಾಡಿದರು. ದೀನದಯಾಳ್ ಅಂತ್ಯೋದಯ ಯೋಜನೆ-ನ್ಯಾಶನಲ್ ಲೈವ್ಲಿಹುಡ್ ಮಿಷನ್ (ಡಿಎವೈ-ಎನ್‌ಆರ್‌ಎಲ್‌ಎಂ) ಅಡಿಯಲ್ಲಿ ಈ ಹಣ ವರ್ಗಾಯಿಸಲಾಗುವುದು. 80 ಸಾವಿರ ಸ್ವಸಹಾಯ ಗುಂಪುಗಳು ತಲಾ 1.10 ಲಕ್ಷ ರೂಪಾಯಿ ಸಮುದಾಯ ಹೂಡಿಕೆ ನಿಧಿ (ಸಿಐಎಫ್ ) ಹಾಗೂ 60 ಸಾವಿರ ಸ್ವ ಸಹಾಯ ಸಂಘಗಳು ತಲಾ 15 ಸಾವಿರ ರೂಪಾಯಿ ಆವರ್ತನ ನಿಧಿ(ಸಿಐಎಫ್) ಯನ್ನು ಸ್ವೀಕರಿಸಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಹೇಳಿಕೆ ತಿಳಿಸಿದೆ.

20 ಸಾವಿರ ವ್ಯವಹಾರ ಬಾತ್ಮಿದಾರರು-ಸಖಿ (ಬಿಸಿ-ಸಖಿ)ಗಳ ಬ್ಯಾಂಕ್ ಖಾತೆಗಳಿಗೆ ಮೊದಲ ತಿಂಗಳ ಶಿಷ್ಯ ವೇತನ 4,000 ರೂಪಾಯಿಯನ್ನು ವರ್ಗಾಯಿಸುವ ಮೂಲಕ ಬಿಸಿ-ಸಖಿಗಳಿಗೆ ಪ್ರಧಾನಿ ಮೋದಿ ಅವರು ಉತ್ತೇಜನ ನೀಡಿರುವುದಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು. ಬಿಸಿ-ಸಖಿಗಳು ತಳಮಟ್ಟದಲ್ಲಿ ಮನೆ ಬಾಗಿಲಿಗೆ ಹಣಕಾಸು ಸೇವೆಗಳನ್ನು ಪೂರೈಸುವ ತಮ್ಮ ಕೆಲಸವನ್ನು ಆರಂಭಿಸಿದ ಬಳಿಕ ಅವರಿಗೆ 6 ತಿಂಗಳ ವರೆಗೆ 4,000 ಶಿಷ್ಯವೇತನ ನೀಡಲಾಗುತ್ತದೆ. ಇದರಿಂದ ಅವರು ತಮ್ಮ ಕೆಲಸದಲ್ಲಿ ಸ್ಥಿರತೆ ಪಡೆಯುತ್ತಾರೆ. ಅಲ್ಲದೆ, ವ್ಯವಹಾರದ ಕಮಿಷನ್ ಮೂಲಕ ಗಳಿಸಲು ಪ್ರಾರಂಭಿಸುತ್ತಾರೆ ಎಂದು ಪಿಎಂಒನ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News