ರಫೇಲ್ ಒಪ್ಪಂದ ನಿಬಂಧನೆಗಳ ಉಲ್ಲಂಘನೆಗಳಿಗಾಗಿ ಎಂಬಿಡಿಎ ಗೆ ದಂಡ ವಿಧಿಸಿದ ರಕ್ಷಣಾ ಸಚಿವಾಲಯ
ಹೊಸದಿಲ್ಲಿ: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ನಿಬಂಧನೆಗಳು (ಆಫ್‍ಸೆಟ್ ಒಬ್ಲಿಗೇಶನ್ಸ್) ಪೂರೈಸಲು ವಿಳಂಬಕ್ಕಾಗಿ ಯುರೋಪಿಯನ್ ಕ್ಷಿಪಣಿ ತಯಾರಿಕಾ ಸಂಸ್ಥೆ ಎಂಬಿಡಿಎ ಮೇಲೆ ರಕ್ಷಣಾ ಸಚಿವಾಲಯ ಒಂದು ಮಿಲಿಯನ್ ಯುರೋಸ್‍ಗಿಂತ ಕಡಿಮೆ ದಂಡ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.
ರಫೇಲ್ ಯುದ್ಧವಿಮಾನಗಳನ್ನು ಫ್ರೆಂಚ್ ಸಂಸ್ಥೆ ಡಸ್ಸಾಲ್ಟ್ ಏವ್ಯೇಷನ್ ತಯಾರಿಸುತ್ತಿದ್ದರೆ ಅಗತ್ಯ ಕ್ಷಿಪಣಿ ವ್ಯವಸ್ಥೆಗಳನ್ನು ಎಂಬಿಡಿಎ ಒದಗಿಸುತ್ತಿದೆ
ಒಟ್ಟು 35 ರಫೇಲ್ ಯುದ್ಧವಿಮಾನಗಳನ್ನು ರೂ 59,000 ಕೋಟಿ ವೆಚ್ಚದಲ್ಲಿ ಖರೀದಿಸಿಲು ಭಾರತ ಮತ್ತು ಫ್ರಾನ್ಸ್ ಸರಕಾರಗಳು ಸೆಪ್ಟೆಂಬರ್ 2016ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು ಹಾಗೂ ಆಫ್‍ಸೆಟ್ ಒಬ್ಲಿಗೇಶನ್ಸ್ ಕೂಡ ಈ ಒಪ್ಪಂದದ ಒಂದು ಭಾಗವಾಗಿತ್ತು.
ಒಪ್ಪಂದದ ಪ್ರಕಾರ ಒಟ್ಟು ಮೊತ್ತದ ಶೇ 50ರಷ್ಟನ್ನು ಸೆಪ್ಟೆಂಬರ್ 2019 ಮತ್ತು ಸೆಪ್ಟೆಂಬರ್ 2022ರ ನಡುವೆ ಆಫ್‍ಸೆಟ್ಸ್ ಆಗಿ ಭಾರತದಲ್ಲಿ ಮರುಹೂಡಿಕೆ ಮಾಡಬೇಕಿದೆ.
ಈ ಅವಧಿಯಲ್ಲಿ ಒಪ್ಪಂದಾನುಸಾರ ಕಾರ್ಯನಿರ್ವಹಿಸದೇ ಇರುವುದರಿಂದ ದಂಡ ವಿಧಿಸಲಾಗಿದೆ. ಆದರೆ ಈ ಕುರಿತು ಸಂಸ್ಥೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಡಸ್ಸಾಲ್ಟ್ ಮತ್ತು ಎಂಬಿಡಿಎ ತಮ್ಮ ಆಫ್‍ಸೆಟ್ ಕಟ್ಟುಪಾಡುಗಳನ್ವಯ ಡಿಆರ್‍ಡಿಒಗೆ ಉನ್ನತ ತಂತ್ರಜ್ಞಾನ ಒದಗಿಸುವ ಕುರಿತಂತೆ ಸೆಪ್ಟೆಂಬರ್ 2015ರಲ್ಲಿ ಪ್ರಸ್ತಾಪಿಸಿದ್ದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬುಧವಾರ ಸಂಸತ್ತಿನ ಮುಂದಿರಿಸಲಾದ ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.