ʼಕೋರ್ಟ್ ತೀರ್ಪಿನಲ್ಲಿರುವ ದೋಷʼದಿಂದಾಗಿ ನಮಗೆ ಜಾಮೀನು ನಿರಾಕರಿಸಲಾಗಿದೆ: ಭೀಮಾ ಕೋರೆಗಾಂವ್‌ ಹೋರಾಟಗಾರರ ಆರೋಪ

Update: 2021-12-22 11:25 GMT
ಬಾಂಬೆ ಹೈಕೋರ್ಟ್‌ (Photo: Wikimedia commons)

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಪ್ರಸ್ತುತ ಜೈಲಿನಲ್ಲಿರುವ ಎಂಟು ಹೋರಾಟಗಾರರು ಮತ್ತು ಶಿಕ್ಷಣತಜ್ಞರು  ಮಂಗಳವಾರ ಬಾಂಬೆ ಹೈಕೋರ್ಟಿಗೆ ಅಪೀಲು ಸಲ್ಲಿಸಿ "ತೀರ್ಪಿನಲ್ಲಿನ ಒಂದು ದೋಷದಿಂದ" (ಫ್ಯಾಕ್ಚುವಲ್ ಎರರ್)  ತಮಗೆ ಡೀಫಾಲ್ಟ್ ಜಾಮೀನು ನಿರಾಕರಿಸಲಾಗಿದೆ ಎಂದಿದ್ದಾರೆ.

ಎಂಟು ಮಂದಿ ಆರೋಪಿಗಳಾದ ಸುಧೀರ್ ಧವಳೆ, ಪಿ ವರವರ ರಾವ್, ರೋನಾ ವಿಲ್ಸನ್, ಸುರೇಂದ್ರ ಗದ್ಲಿಂಗ್, ಶೋಮಾ ಸೇನ್, ಮಹೇಶ್ ರಾವತ್, ವೆರ್ನೊನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫೆರೇರಾ ಅವರಿಗೆ ಡೀಫಾಲ್ಟ್ ಜಾಮೀನು ನಿರಾಕರಿಸಿತ್ತು. ಅವರು ಸಕಾಲದಲ್ಲಿ ಜಾಮೀನು ಅರ್ಜಿ ಸಲ್ಲಿಸಿಲ್ಲ ಎಂದು  ಹೇಳಲಾಗಿತ್ತು.

ಅದೇ ದಿನ ಪ್ರಕರಣದಲ್ಲಿ ಬಂಧಿತ 16 ಮಂದಿಯಲ್ಲಿ ಒಬ್ಬರಾಗಿರುವ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಿಗೆ ನ್ಯಾಯಾಲಯ ಡೀಫಾಲ್ಟ್ ಜಾಮೀನು ಮಂಜೂರುಗೊಳಿಸಿತ್ತು. ಆಕೆ ಪುಣೆ ಕೋರ್ಟ್ ಮುಂದೆ ಜಾಮೀನು ಅರ್ಜಿಯನ್ನು, ಆಕೆಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗುವ ಮುಂಚೆಯೇ ಸಲ್ಲಿಸಿದ್ದಾರೆಂದು ನ್ಯಾಯಾಲಯ ಹೇಳಿತ್ತು.

ಆದರೆ ಧವಳೆ, ವಿಲ್ಸನ್, ಗದ್ಲಿಂಗ್, ರಾವತ್ ತಮ್ಮ ಅಪೀಲಿನಲ್ಲಿ ತಮ್ಮ ಬಂಧನದ 90 ದಿನಗಳ ನಂತರ ಹಾಗೂ ಚಾರ್ಜ್ ಶೀಟ್ ಸಲ್ಲಿಕೆಯ  ಆರು ವಾರಗಳಿಗೆ ಮುಂಚಿತವಾಗಿ ತಾವು ಜಾಮೀನು ಅರ್ಜಿ ಸಲ್ಲಿಸಿದ್ದಾಗಿ ಹೇಳಿದ್ದಾರೆ.

ತಾವು ಭಾರದ್ವಾಜ್ ಜಾಮೀನು ಅರ್ಜಿ ಸಲ್ಲಿಸಿದ ನಾಲ್ಕು ದಿನಗಳ ನಂತರ ಜಾಮೀನು ಅರ್ಜಿ ಸಲ್ಲಿಸಿದ್ದಾಗಿ ಗೊನ್ಸಾಲ್ವಿಸ್, ರಾವ್ ಮತ್ತು ಫೆರೇರಾ ಹೇಳಿದ್ದರು.

ಪುಣೆ ನ್ಯಾಯಾಲಯ ಐದು ಮಂದಿಯ ಜಾಮೀನು ಅರ್ಜಿಯನ್ನು ಸಾಮಾನ್ಯ ಅನುಕ್ರಮದಲ್ಲಿ ತಿರಸ್ಕರಿಸಿತ್ತು. ಆದರೆ ಬಾಂಬೆ ಹೈಕೋರ್ಟ್ ಮಾತ್ರ ಪುಣೆ ಕೋರ್ಟ್ ಆದೇಶ ಬದಿಗೆ ಸರಿಸಿ ಡಿಸೆಂಬರ್ 1ರಂದು ಭಾರದ್ವಾಜ್ ಅವರಿಗೆ ಜಾಮೀನು ನೀಡಿದೆ ಎಂದು ಬಂಧಿತರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

"ಆರೋಪಿ ಸಂಖ್ಯೆ 6 ರಿಂದ 9 (ಗೊನ್ಸಾಲ್ವಿಸ್, ರಾವ್, ಫೆರೇರಾ ಮತ್ತು ಭಾರದ್ವಾಜ್) ಅವರನ್ನು ಒಂದೇ ದಿನ ಬಂಧಿಸಲಾಗಿತ್ತು ಹಾಗೂ ಎಲ್ಲರೂ ಡೀಫಾಲ್ಟ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರಿಂದ ಅವರನ್ನು ಸಮಾನವಾಗಿ ಪರಿಗಣಿಸಬೇಕು, ಆದರೆ ಆರೋಪಿ ಸಂಖ್ಯೆ 6-8 (ಗೊನ್ಸಾಲ್ವಿಸ್, ರಾವ್ ಮತ್ತು ಫೆರೇರಾ) ಅವರಿಗೆ  ಭಾರದ್ವಾಜ್ ಅವರಿಗೆ ನೀಡಿದ ಹಾಗೆ ಜಾಮೀನು ನೀಡಲಾಗಿಲ್ಲ" ಎಂದು ವಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News