ಯೆಮನ್‌ಗೆ ಆಹಾರದ ನೆರವು ಕಡಿತ ಅನಿವಾರ್ಯ: ವಿಶ್ವಸಂಸ್ಥೆ

Update: 2021-12-22 16:29 GMT

ಸನಾ, ಡಿ.22: ನಿಧಿಯ ಕೊರತೆ ಇರುವುದರಿಂದ ಯೆಮನ್‌ಗೆ ಒದಗಿಸುವ ನೆರವನ್ನು ಕಡಿತಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ವಿಶ್ವಸಂಸ್ಥೆಯ ಸಹಘಟಕ ವಿಶ್ವ ಆಹಾರ ಯೋಜನೆ ಏಜೆನ್ಸಿ ಹೇಳಿದೆ.

ಜನವರಿಯಿಂದ 8 ಮಿಲಿಯನ್ ಜನತೆ ಕಡಿಮೆ ಆಹಾರ ಪಡಿತರ ಪಡೆಯುತ್ತಾರೆ. ಬರಗಾಲದ ಪರಿಸ್ಥಿತಿಗೆ ತುತ್ತಾಗುವ ಅಪಾಯದಲ್ಲಿರುವ 5 ಮಿಲಿಯನ್ ಜನತೆಗೆ ಸಂಪೂರ್ಣ ಆಹಾರ ಪಡಿತರ ಲಭ್ಯವಾಗಲಿದೆ. ಬಂಡವಾಳ ನಿಧಿಯ ಕೊರತೆಯಿದೆ ಎಂದು ವಿಶ್ವ ಆಹಾರ ಯೋಜನೆಯ ಅಧಿಕಾರಿ ಹೇಳಿದ್ದಾರೆ. ಯೆಮನ್‌ನಲ್ಲಿ ಸೌದಿ ಅರೆಬಿಯಾ ಬೆಂಬಲಿತ ಸರಕಾರಿ ಪಡೆ ಹಾಗೂ ಇರಾನ್ ಬೆಂಬಲಿತ ಹೌದಿ ಬಂಡುಗೋರ ಪಡೆಯ ಮಧ್ಯೆ 2014ರಿಂದಲೂ ಸಂಘರ್ಷ ಮುಂದುವರಿದಿದ್ದು ಲಕ್ಷಾಂತರ ಪ್ರಜೆಗಳು ತೀವ್ರ ಆಹಾರದ ಕೊರತೆ ಅನುಭವಿಸುತ್ತಿದ್ದಾರೆ. ಸಾವಿರಾರು ಮಂದಿ ಮೃತಪಟ್ಟಿದ್ದು ಲಕ್ಷಾಂತರ ಮಂದಿ ಸ್ಥಳಾಂತರಗೊಂಡಿದ್ದಾರೆ. ಇದರಿಂದ ಯೆಮನ್‌ನ 80% ಜನತೆ ವಿದೇಶಿ ನೆರವನ್ನು ಎದುರು ನೋಡುವಂತಾಗಿದೆ.

ಯೆಮನ್ ಜನತೆಗೆ ನೆರವು ಮುಂದುವರಿಸಲು 813 ಮಿಲಿಯನ್ ಡಾಲರ್ ಮೊತ್ತದ ಅಗತ್ಯವಿದೆ ಮತ್ತು ಬರಗಾಲದ ಅಪಾಯದ ಅಂಚಿನಲ್ಲಿರುವ ಕುಟುಂಬಗಳಿಗೆ 2022ರಲ್ಲೂ ಆಹಾರದ ನೆರವು ಮುಂದುವರಿಸಲು 1.97 ಬಿಲಿಯನ್ ಡಾಲರ್ ಮೊತ್ತ ಅಗತ್ಯವಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News