ಸಮುದ್ರಕ್ಕೆ ಬಿದ್ದ ಹೆಲಿಕಾಪ್ಟರ್: 12 ಗಂಟೆ ಈಜಿ ದಡ ಸೇರಿದ ಸಚಿವ
Update: 2021-12-22 22:07 IST
ಅಂಟಾನನಾರಿಯೊ, ಡಿ.22: ಮಡಗಾಸ್ಕರ್ ದೇಶದ ಈಶಾನ್ಯ ಕರಾವಳಿಯಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಸಮುದ್ರಕ್ಕೆ ಪತನಗೊಂಡಿದ್ದು ವಿಮಾನದಲ್ಲಿದ್ದ ಸಚಿವರು ಸಮುದ್ರದಲ್ಲಿ ಸುಮಾರು 12 ಗಂಟೆ ಈಜಿ ದಡ ಸೇರಿದ ಪ್ರಕರಣ ವರದಿಯಾಗಿದೆ.
ಪೊಲೀಸ್ ಇಲಾಖೆಯ ಸಹಾಯಕ ಸಚಿವ ಸೆರ್ಗೆ ಗೆಲೆ ಹಾಗೂ ಒಬ್ಬ ಪೊಲೀಸ್ ಸಿಬಂದಿ ಸಮುದ್ರದಲ್ಲಿ ಈಜಿ ದಡ ಸೇರಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ ಇತರ ಇಬ್ಬರು ಪ್ರಯಾಣಿಕರ ಶೋಧ ಕಾರ್ಯಾಚರಣೆ ಮುಂದುವರಿದಿದೆ . ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣ ಸ್ಫಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಹೆಲಿಕಾಪ್ಟರ್‌ನ ಸೀಟನ್ನು ಮುರಿದು ಅದನ್ನು ಈಜುಸಾಧನವಾಗಿ ಬಳಸಿಕೊಂಡು ಸಚಿವರು ಪಾರಾಗಿದ್ದಾರೆ . ಈಶಾನ್ಯ ತೀರದ ಬಳಿ ಹಡಗೊಂದು ಅಪಘಾತಕ್ಕೆ ಈಡಾಗಿದ್ದು ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಸಚಿವರು ಪೊಲೀಸರೊಂದಿಗೆ ತೆರಳುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.