×
Ad

​ತಮ್ಮದೇ ಸರ್ಕಾರದ ವಿರುದ್ಧ ಧರಣಿ ಕುಳಿತ ಜಾರ್ಖಂಡ್ ಸಿಎಂ ಅತ್ತಿಗೆ !

Update: 2021-12-23 07:10 IST
ಮುಖ್ಯಮಂತ್ರಿ ಹೇಮಂತ್ ಸೊರೇನ್

ರಾಂಚಿ : ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಶಿಬು ಸೊರೆನ್ ಅವರ ಸೊಸೆ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅತ್ತಿಗೆ ಹಾಗೂ ಪಕ್ಷದ ಶಾಸಕಿ ಸೀತಾ ಸೊರೇನ್ ಬುಧವಾರ ತಮ್ಮ ಸರ್ಕಾರದ ವಿರುದ್ಧವೇ ವಿಧಾನಸಭೆಯ ಪ್ರವೇಶದ್ವಾರದ ಬಳಿ ಧರಣಿ ನಡೆಸಿ ಗಮನ ಸೆಳೆದರು.

ಇದು ಆಡಳಿತ ಪಕ್ಷಕ್ಕೆ ತೀವ್ರ ಇರಿಸು ಮುರಿಸಿಗೆ ಕಾರಣವಾಯಿತು.

ರಾಜ್ಯ ಸರ್ಕಾರದಿಂದ ತಮಗೆ ಸೂಕ್ತ ಉತ್ತರ ದೊರಕಿಲ್ಲ ಎಂದು ಆಪಾದಿಸಿ ಜಾಮಾ ಶಾಸಕಿಯಾದ ಸೀತಾ ಸೊರೆನ್ ಧರಣಿ ನಡೆಸಿದರು.

"ನೀರು, ಅರಣ್ಯ ಮತ್ತು ಭೂಮಿಯನ್ನು ರಕ್ಷಿಸುವ ಸಲುವಾಗಿ ನಾನು ಸದನಕ್ಕೆ ಬಂದಿದ್ದೇನೆ. ಸೆಂಟ್ರಲ್ ಕೋಲ್‌ ಫೀಲ್ಡ್ಸ್ ಲಿಮಿಟೆಡ್‌ನ ಅಮ್ರಪಾಲಿ ಯೋಜನೆಯಲ್ಲಿ ಅರಣ್ಯ ಹಾಗೂ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಕಲ್ಲಿದ್ದಲನ್ನು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದು, ಸರ್ಕಾರ ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಅವರು ಆಪಾದಿಸಿದರು.

ಸರ್ಕಾರ ತಪ್ಪು ಉತ್ತರಗಳನ್ನು ನೀಡುತ್ತಿದೆ ಎಂದು ಆಪಾದಿಸಿದ ಅವರು, ಸಿಸಿಎಲ್ ಒತ್ತುವರಿ ಮಾಡಿಕೊಂಡ ಭೂಮಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಮದ್ಯ ಮಾರಾಟಕ್ಕೆ ಯೋಚಿಸುತ್ತಿದೆಯೇ ಎಂದು ಪ್ರಶ್ನಿಸುವ ಮೂಲಕ ಮತ್ತೊಬ್ಬ ಜೆಎಂಎಂ ಶಾಸಕ ಲೊಬಿನ್ ಹೆಬ್ರಮ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು.

"ಶಿಬು ಸೊರೆನ್ ಅವರು ಮದ್ಯ ನಿಷೇಧದ ಬಗ್ಗೆ ಮಾತನಾಡಿದರೆ, ಹೇಮಂತ್ ಸೊರೆನ್ ಇದಕ್ಕೆ ವಿರುದ್ಧ ಕ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡು ಬೇರೇನೂ ಇಲ್ಲ" ಎಂದು ಅವರು ವಾಗ್ದಾಳಿ ನಡೆಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News