ಪ್ರಿಯಾಂಕಾ ಗಾಂಧಿ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಹ್ಯಾಕ್ ಮಾಡಲಾಗಿಲ್ಲ: ವರದಿ

Update: 2021-12-23 06:14 GMT

ಹೊಸದಿಲ್ಲಿ: ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಹ್ಯಾಕ್ ಮಾಡಲಾಗಿಲ್ಲ ಎಂದು ಅಧಿಕೃತ ಮೂಲಗಳು ಬುಧವಾರ NDTV ಗೆ ತಿಳಿಸಿವೆ.

ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸಿಇಆರ್‌ಟಿ-ಇನ್‌ನ ಆರಂಭಿಕ ತನಿಖೆಯು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಹ್ಯಾಕ್ ಮಾಡಿಲ್ಲ ಎಂದು ಕಂಡುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ತನ್ನ ಮಕ್ಕಳಾದ 18 ವರ್ಷದ ಮಿರಾಯಾ ವಾದ್ರಾ ಹಾಗೂ 20 ವರ್ಷದ ರೈಹಾನ್ ವಾದ್ರಾ ಅವರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸರಕಾರ ಹ್ಯಾಕ್ ಮಾಡಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಆರೋಪಿಸಿದ್ದರು.

"ಅವರು ಫೋನ್ ಟ್ಯಾಪಿಂಗ್ ಮಾಡುತ್ತಿರುವ ವಿಚಾರ ಬಿಡಿ ನನ್ನ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ. ಅವರಿಗೆ ಬೇರೆ ಕೆಲಸವಿಲ್ಲವೇ?" ಎಂದು ರಾಜಕೀಯ ವಿರೋಧಿಗಳ ಮೇಲೆ ಕೇಂದ್ರೀಯ ಏಜೆನ್ಸಿಗಳ ದಾಳಿಗಳು ಮತ್ತು ಅಕ್ರಮ ಫೋನ್ ಕಣ್ಗಾವಲು ಆರೋಪಗಳ ಕುರಿತ ಪ್ರಶ್ನೆಗೆ ಪ್ರಿಯಾಂಕಾ ಅವರು ಪ್ರತಿಕ್ರಿಯಿಸಿದ್ದರು.

ಪ್ರಿಯಾಂಕಾ ಗಾಂಧಿ ಅವರು ಈ ಕುರಿತು ಔಪಚಾರಿಕ ದೂರು ದಾಖಲಿಸಿಲ್ಲ. ಆದರೆ ಸರಕಾರ ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದ್ದು, ಸ್ವಯಂ ತನಿಖೆ ನಡೆಸಲು ನಿರ್ಧರಿಸಿತ್ತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News