ಮ್ಯಾನ್ಮಾರ್: ಗಣಿ ದುರಂತದಲ್ಲಿ ನಾಪತ್ತೆಯಾದವರು ಬದುಕಿರುವ ಸಾಧ್ಯತೆ ಕ್ಷೀಣ; ಅಧಿಕಾರಿಗಳ ಹೇಳಿಕೆ
ಯಾಂಗಾನ್, ಡಿ.23: ಮ್ಯಾನ್ಮಾರ್‌ನ ಉತ್ತರದಲ್ಲಿರುವ ಹರಳಿನ (ದಟ್ಟ ಹಸಿರು ಬಣ್ಣದ ಬೆಲೆಬಾಳುವ ಶಿಲೆ) ಗಣಿಯೊಂದರಲ್ಲಿ ಸಂಭವಿಸಿದ ಭೂ ಕುಸಿತದಿಂದ ನಾಪತ್ತೆಯಾದವರು ಬದುಕಿ ಉಳಿದಿರುವ ಸಾಧ್ಯತೆ ಅತ್ಯಲ್ಪವಾಗಿದೆ ಎಂದು ರಕ್ಷಣಾ ಕಾರ್ಯಾಚರಣೆ ತಂಡದ ಅಧಿಕಾರಿಗಳು ಹೇಳಿದ್ದಾರೆ.
ಕಚಿನ್ ರಾಜ್ಯದ ಹಪಕಂತ್ ಗಣಿಯಲ್ಲಿ ದುರಂತ ಸಂಭವಿಸಿದೆ. ಭೂಕುಸಿತ ಸಂಭವಿಸಿದಾಗ ಗಣಿಯೊಳಗೆ ಸುಮಾರು 100 ಮಂದಿ ಇದ್ದರು. ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಕನಿಷ್ಟ 50 ಮಂದಿ ನಾಪತ್ತೆಯಾಗಿರುವುದಾಗಿ ಅಂದಾಜಿಸಲಾಗಿದೆ. ಇವರು ಬದುಕುಳಿದಿರುವ ಸಾಧ್ಯತೆ ಅತ್ಯಂತ ಕ್ಷೀಣವಾಗಿದ್ದು ಬುಧವಾರ ರಾತ್ರಿ ಭಾರೀ ಮಂಜು ಸುರಿದ ಕರಣ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು ಗುರುವಾರ ಮುಂದುವರಿದಿದೆ ಎಂದು ಅಗ್ನಿಶಾಮಕ ದಳದ ಕ್ಯಾಪ್ಟನ್ ಪೇ ನಿಯೆನ್ ಹೇಳಿದ್ದಾರೆ.
ಗಣಿಯೊಳಗೆ ಕಾರ್ಯ ನಿರ್ವಹಿಸುತ್ತಿದ್ದವರ ಮೇಲೆ ಬುಧವಾರ ತ್ಯಾಜ್ಯ ಮತ್ತು ಕಲ್ಲಿಮಣ್ಣಿನ ರಾಶಿ ಉರುಳಿಬಿದ್ದಾಗ ಕಾರ್ಮಿಕರು ಅದರಡಿ ಸಿಲುಕಿದ್ದರು. ಸುಮಾರು 70ರಿಂದ 100 ಮಂದಿ ನಾಪತ್ತೆಯಾಗಿರುವುದಾಗಿ ಪ್ರಾರಂಭಿಕ ಮಾಹಿತಿ ಹೇಳಿದ್ದರೂ ಬಳಿಕ ನಾಪತ್ತೆಯಾದವರ ಸಂಖ್ಯೆ ಕನಿಷ್ಟ 50 ಎಂದು ಅಧಿಕೃತವಾಗಿ ಹೇಳಿಕೆ ನೀಡಲಾಗಿದೆ.
ಕಚಿನ್ ರಾಜ್ಯದ ಹಪಕಂತ್ ಪ್ರಾಂತ ಹರಳಿನ ಗಣಿಗಾರಿಕೆಗೆ ಹೆಸರಾಗಿದ್ದು ಇಲ್ಲಿ ಸುರಕ್ಷಾ ಕ್ರಮಗಳನ್ನು ಗಾಳಿಗೆ ತೂರಿ, ಕಾರ್ಮಿಕರಿಗೆ ಮೂಲಭೂತ ರಕ್ಷಣಾ ವ್ಯವಸ್ಥೆ ಒದಗಿಸದೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಹಲವು ದೂರುಗಳು ಕೇಳಿ ಬಂದಿವೆ. ವಿರೋಧ ಪಕ್ಷ ನ್ಯಾಷನಲ್ ಯೂನಿಟಿ ಸರಕಾರವೂ ಈ ಪ್ರದೇಶದಲ್ಲಿ ಗಣಿಗಾರಿಕೆ ರದ್ದುಗೊಳಿಸುವಂತೆ ಆಗ್ರಹಿಸಿದೆ.