ಟ್ಯುನೀಷಿಯಾದ ಮಾಜಿ ಅಧ್ಯಕ್ಷರಿಗೆ 4 ವರ್ಷ ಜೈಲು
ಟ್ಯೂನಿಸ್, ಡಿ.23: ದೇಶದ ಭದ್ರತೆಗೆ ಹಾನಿ ಎಸಗಿದ ಅಪರಾಧಕ್ಕಾಗಿ ಟ್ಯುನೀಷಿಯಾದ ಮಾಜಿ ಅಧ್ಯಕ್ಷ ಮಾನ್ಸೆಫ್ ಮರ್ಝಕಿ ಅವರಿಗೆ ಅಲ್ಲಿನ ನ್ಯಾಯಾಲಯ 4 ವರ್ಷದ ಜೈಲುಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ.
ದೇಶ ಬಿಟ್ಟು ತೆರಳಿರುವ 76 ವರ್ಷದ ಮರ್ಝಕಿ ಈಗ ಫ್ರಾನ್ಸ್ ನಲ್ಲಿ ನೆಲೆಸಿದ್ದು ಅವರ ಗೈರುಹಾಜರಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತೀರ್ಪು ಪ್ರಕಟಿಸಲಾಗಿದೆ. ಹಾಲಿ ಅಧ್ಯಕ್ಷ ಕಯೀಸ್ ಸಯೀದ್ ರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಮರ್ಝಕಿ, ಸರಕಾರವನ್ನು ವಿರೋಧಿಸಿ ಪ್ರತಿಭಟಿುವಂತೆ ಜನತೆಗೆ ಕರೆ ನೀಡಿದ್ದರು.
ಮರ್ಝಕಿ ವಿರುದ್ಧ ದಾಖಲಿಸಿದ್ದ ವಿದೇಶದಲ್ಲಿದ್ದುಕೊಂಡು ದೇಶದ ಭದ್ರತೆಯನ್ನು ದುರ್ಬಲಗೊಳಿಸುವ ಮತ್ತು ರಾಜತಾಂತ್ರಿಕ ಹಾನಿ ಎಸಗಿರುವ ಅಪರಾಧ ಸಾಬೀತಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ತೀರ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಮರ್ಝಕಿ, ಇದು ಸಂವಿಧಾನವನ್ನು ಕಡೆಗಣಿಸಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಅಧ್ಯಕ್ಷರ ತೀರ್ಪು ಆಗಿದೆ. ವಾಸ್ತವವಾಗಿ ಈ ತೀರ್ಪು ಸಯೀದ್ ಗೆ ಅನ್ವಯಿಸಬೇಕು. ಅವರನ್ನು ಜೈಲಿಗೆ ದೂಡಬೇಕು ಎಂದಿದ್ದಾರೆ.
ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ, ಆದರೆ ದೇಶದಲ್ಲಿ ಇರುವ ಸರ್ವಾಧಿಕಾರವನ್ನು ವಿರೋಧಿಸಿ ಉಸಿರು ಇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಮರ್ಝಕಿ ಹೇಳಿದ್ದಾರೆ.