ಕಾಬೂಲ್: ಪಾಸ್ ಪೋರ್ಟ್ ಕಚೇರಿ ಸ್ಫೋಟಕ್ಕೆ ಯತ್ನಿಸಿದ ಆತ್ಮಹತ್ಯಾ ಬಾಂಬರ್ ಹತ್ಯೆ
ಕಾಬೂಲ್, ಡಿ.23: ಅಫ್ಘಾನ್ ನ ರಾಜಧಾನಿ ಕಾಬೂಲ್ ನ ಪಾಸ್ ಪೋರ್ಟ್ ಕಚೇರಿಯೊಳಗೆ ನುಗ್ಗಲು ಯತ್ನಿಸಿದ ಆತ್ಮಹತ್ಯಾ ಬಾಂಬರ್ ನನ್ನು ಕಚೇರಿಯ ಗೇಟಿನಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಸಂದರ್ಭ ಬಾಂಬ್ ಸ್ಪೋಟಿಸಿ ಹಲವು ಮಂದಿ ಗಾಯಗೊಂಡಿದ್ದಾರೆ. ಆತ್ಮಹತ್ಯಾ ಬಾಂಬ್ ದಾಳಿಗೆ ಯತ್ನಿಸಿದವನನ್ನು ಕಚೇರಿಯ ಬಾಗಿಲಲ್ಲೇ ಹತ್ಯೆ ಮಾಡಲಾಗಿದೆ ಎಂದು ಸರಕಾರದ ವಕ್ತಾರರು ಹೇಳಿದ್ದಾರೆ. ಬಾಂಬ್ ಸ್ಫೋಟವಾದ ತಕ್ಷಣ ತಾಲಿಬಾನ್ ಭದ್ರತಾ ಪಡೆ ಕಟ್ಟಡ ಹಾಗೂ ಸುತ್ತಮುತ್ತಲಿನ ರಸ್ತೆಯಲ್ಲಿ ಬಿಗಿ ಭದ್ರತೆ ವ್ಯವಸ್ಥೆಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಹಲವು ವಾರ ಸ್ಥಗಿತಗೊಂಡಿದ್ದ ಕಾಬೂಲ್ ಪಾಸ್ ಪೋರ್ಟ್ ಕಚೇರಿ ಕೆಲ ದಿನಗಳಿಂದ ಮತ್ತೆ ಕಾರ್ಯಾರಂಭ ಮಾಡಿದ್ದು ಕಚೇರಿಯಲ್ಲಿ ದಿನಾ ಜನಗಂಗುಳಿ ಸಾಮಾನ್ಯವಾಗಿದೆ. ತಾಲಿಬಾನ್ ಅಧಿಕಾರಿಗಳಿಗೆ ಪಾಸ್ ಪೋರ್ಟ್ ಕಚೇರಿಯ ಕೆಲಸಕ್ಕೆ ಗುರುವಾರವನ್ನು ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.