×
Ad

ಮ.ಪ್ರ.: ಆಸ್ತಿಹಾನಿಗೆ ಪ್ರತಿಭಟನಕಾರರಿಂದಲೇ ಪರಿಹಾರ ವಸೂಲಿ ಮಾಡುವ ವಿಧೇಯಕ ಅಂಗೀಕಾರ

Update: 2021-12-23 23:47 IST
ಸಾಂದರ್ಭಿಕ ಚಿತ್ರ:PTI

ಭೋಪಾಲ್,ಡಿ.23: ಮುಷ್ಕರ, ಪ್ರತಿಭಟನೆ ಹಾಗೂ ಕೋಮುಗಲಭೆ ಸಂದರ್ಭಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗಾಗುವ ಹಾನಿಗೆ ಪ್ರತಿಭಟನಕಾರರಿಂದಲೇ ಪರಿಹಾರಧನವನ್ನು ವಸೂಲಿ ಮಾಡುವ ವಿಧೇಯಕವನ್ನು ಮಧ್ಯಪ್ರದೇಶ ವಿಧಾನಸಭೆಯಲ್ಲಿ ಗುರುವಾರ ಅಂಗೀಕರಿಸಲಾಯಿತು.

ಯಾವುದೇ ಚರ್ಚೆಯಿಲ್ಲದೆ ಈ ವಿಧೇಯಕವನ್ನು ಸದನದಲ್ಲಿ ಅಂಗೀಕರಿಸಲಾಯಿತು. ಆದರೆ ರಾಜ್ಯದಲ್ಲಿ ಒಬಿಸಿ ಮೀಸಲಾತಿಗೆ ಸಂಬಂಧಿಸಿದ ನಿರ್ಣಯದ ಬಗ್ಗೆ ಮಾತನಾಡಲು ಅವಕಾಶ ನೀಡಬೇಕೆಂದು ಕೋರಿ ಸದನದಲ್ಲಿ ಪ್ರತಿಪಕ್ಷ ನಾಯಕ ಕಮಲ್‌ನಾಥ್ ಅವರಿಗೆ ಅವಕಾಶ ನೀಡದೇ ಇರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು.

ಪ್ರತಿಭಟನೆಗಳ ಸಂದರ್ಭದಲ್ಲಿ ಖಾಸಗಿ ಅಥವಾ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾದಲ್ಲಿ ಅವುಗಳಿಗೆ ಕಾರಣವಾದ ಜನರು ಅಥವಾ ಸಂಘಟನೆಗಳು ಪರಿಹಾರಧನವನ್ನು ನೀಡುವುದನ್ನು ಈ ವಿಧೇಯಕವು ಕಡ್ಡಾಯಗೊಳಿಸುತ್ತದೆ. ಇದೀಗ ಈ ವಿಧೇಯಕವನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ.

ಸಾರ್ವಜನಿಕ,ಖಾಸಗಿ ಸೊತ್ತುಗಳಿಗಾಗುವ ಹಾನಿಗೆ ಪ್ರತಿಭಟನಕಾರರಿಂದ ಪರಿಹಾರಧನವನ್ನು ವಸೂಲಿ ಮಾಡುವ ಕಾನೂನು ಜಾರಿಗೊಳಿಸಿರುವ ಬಿಜೆಪಿ ಆಳ್ವಿಕೆಯ ಮೂರನೆ ರಾಜ್ಯ ಮಧ್ಯಪ್ರದೇಶ ಆಗಿದೆ. ಈ ಮೊದಲು ಉತ್ತರಪ್ರದೇಶ ಹಾಗೂ ಹರ್ಯಾಣ ರಾಜ್ಯಗಳು ಇದೇ ರೀತಿಯ ಕಾನೂನನ್ನು ಜಾರಿಗೆ ತಂದಿವೆ.

ಈ ವಿಧೇಯಕದ ಪ್ರಕಾರ, ಗಲಭೆ ಪೀಡಿತ ಪ್ರದೇಶಗಳಿಗಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಅಥವಾ ರಾಜ್ಯ ಸರಕಾರದ ನಿವೃತ್ತ ಕಾರ್ಯದರ್ಶಿ ಅವರನ್ನು ಒಳಗೊಂಡ ರಾಜ್ಯ ಸರಕಾರವು ದಾವೆ ಟ್ರಿಬ್ಯೂನಲನ್ನು ರಚಿಸಲಿದೆ. ಸಂತ್ರಸ್ತ ಕಕ್ಷಿಗಳು ಪರಿಹಾರ ಕೋರಿ ಒಂದು ತಿಂಗೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ದಾವೆಗಳ ಕುರಿತು ತನಿಖೆಗಾಗಿ ನೆರವಾಗಲು ನ್ಯಾಯಾಧೀಕರಣವು ಕ್ಲೇಮುಗಳ ಆಯುಕ್ತರನ್ನು ನೇಮಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News