ಪ್ರವಾದಿ ನಿಂದನೆ ಧಾರ್ಮಿಕ ಸ್ವಾತಂತ್ರದ ಉಲ್ಲಂಘನೆಯಾಗಿದೆ: ರಷ್ಯಾ ಅಧ್ಯಕ್ಷ ಪುತಿನ್
ಮಾಸ್ಕೊ,ಡಿ.24: ಪ್ರವಾದಿಯವರ ನಿಂದನೆಯು ಧಾರ್ಮಿಕ ಸ್ವಾತಂತ್ರದ ಉಲ್ಲಂಘನೆಯಾಗಿದೆ ಹಾಗೂ ಇಸ್ಲಾಂ ಧರ್ಮದ ಅನುಯಾಯಿಗಳ ಪವಿತ್ರ ಭಾವನೆಗಳ ಉಲ್ಲಂಘನೆಯಾಗಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಶುಕ್ರವಾರ ತಿಳಿಸಿದ್ದಾರೆ.
ಮಾಸ್ಕೋದಲ್ಲಿ ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೆ ಜಾಗತಿಕ ಮಹಾಯುದ್ಧದಲ್ಲಿ ಮೃತಪಟ್ಟ ನಾಗರಿಕರಿಗಾಗಿ ಸಮರ್ಪಿಸಲಾದ ಸ್ಥಳಗಳಲ್ಲಿ ನಾಝಿ ಸೈನಿಕರಿರುವ ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಪೋಸ್ಟ್ ಮಾಡುತ್ತಿರುವ ಬಗ್ಗೆಯೂ ತೀವ್ರ ವಿರೋಧ ವ್ಯಕ್ತಪಡಿಸಿದರು. ಇಂತಹ ಕೃತ್ಯಗಳು ಪ್ರವಾದಿಯವರ ವ್ಯಂಗ್ಯಚಿತ್ರಗಳನ್ನು ಫ್ರಾನ್ಸ್ ನ ನಿಯತಕಾಲಿಕ ಚಾರ್ಲಿಹೆಬ್ಡೊ ಪ್ರಕಟಿಸಿದ ಬಳಿಕ ನಡೆದಂತಹ ಪ್ರತೀಕಾರಾತ್ಮಕ ಕೃತ್ಯಗಳಿಗೆ ಎಡೆ ಮಾಡಿಕೊಡುತ್ತದೆ ಎಂದವರು ಹೇಳಿದ್ದರು.
ಎಲ್ಲಾ ಧರ್ಮಗಳನ್ನು ರಶ್ಯನ್ನರು ಗೌರವಿಸುತ್ತಾರೆಂದು ಹೇಳಿದ ರಶ್ಯದ ಅಧ್ಯಕ್ಷರು, ಕಲಾತ್ಮಕ ಸ್ವಾತಂತ್ರವು ಇತರ ಸ್ವಾತಂತ್ರಗಳಿಗೆ ಧಕ್ಕೆ ಉಂಟು ಮಾಡಬಾರದೆಂದು ಪ್ರತಿಪಾದಿಸಿದರು.