×
Ad

ಪಂಜಾಬ್ ಚುನಾವಣೆಗಳಲ್ಲಿ ಸ್ಪರ್ಧಿಸಲು 22 ರೈತ ಸಂಘಟನೆಗಳಿಂದ ರಾಜಕೀಯ ಪಕ್ಷ ಸ್ಥಾಪನೆ‌

Update: 2021-12-25 22:42 IST
ಸಾಂದರ್ಭಿಕ ಚಿತ್ರ:PTI

ಚಂಡಿಗಡ,ಡಿ.25: ಮೂರು ವಿವಾದಾಸ್ಪದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ದ ಭಾಗವಾಗಿದ್ದ ಪಂಜಾಬಿನಲ್ಲಿಯ 22 ರೈತ ಸಂಘಟನೆಗಳು ಶನಿವಾರ ಸಂಯುಕ್ತ ಸಮಾಜ ಮೋರ್ಚಾ (ಎಸ್ಎಸ್ಎಂ) ಹೆಸರಿನಲ್ಲಿ ರಾಜಕೀಯ ರಂಗವೊಂದನ್ನು ಹುಟ್ಟುಹಾಕಿದ್ದು,ರಾಜಕೀಯ ಬದಲಾವಣೆಯನ್ನು ತರಲು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿವೆ. ಭಾರತೀಯ ಕಿಸಾನ ಯೂನಿಯನ್(ರಾಜೇವಾಲ್)ನ ಬಲಬೀರ್ ಸಿಂಗ್ ರಾಜೇವಾಲ್ ಅವರು ಎಸ್ಎಸ್ಎಂ ಅನ್ನು ಮುನ್ನಡೆಸಲಿದ್ದಾರೆ.

ಆದಾಗ್ಯೂ ಚುನಾವಣೆಗಳಲ್ಲಿ ಸ್ಪರ್ಧಿಸದಿರುವ ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ಎಸ್‌ಕೆಎಂ ಸಂಯುಕ್ತ ಸಮಾಜ ಮೋರ್ಚಾದಿಂದ ಅಂತರವನ್ನು ಕಾಯ್ದುಕೊಂಡಿದ್ದು,ಚುನಾವಣಾ ಪ್ರಚಾರದಲ್ಲಿ ತನ್ನ ಹೆಸರನ್ನು ಬಳಸಕೂಡದು ಎಂದು ಹೇಳಿದೆ.

ಬಿಕೆಯು (ದಾಕೌಂಡಾ) ಮತ್ತು ಬಿಕೆಯು (ಲಾಖೋವಾಲ್) ಸೇರಿದಂತೆ ಮೂರು ರೈತ ಸಂಘಟನೆಗಳು ಎಸ್‌ಎಸ್‌ಎಮ್‌ನಲ್ಲಿ ಸೇರಬೇಕೇ ಎಂಬ ಬಗ್ಗೆ ಶೀಘ್ರವೇ ನಿರ್ಧರಿಸಲಿವೆ. ನೂತನ ಪಕ್ಷವು ಎಲ್ಲ 117 ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂದು ರೈತನಾಯಕರು ಶನಿವಾರ ದೃಢಪಡಿಸಿದರು.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೇಂದ್ರವು ಹಿಂದೆಗೆದುಕೊಳ್ಳುವಂತೆ ಮಾಡುವಲ್ಲಿ ರೈತರು ಜಯ ಸಾಧಿಸಿದ ಬಳಿಕ ಚುನಾವಣೆಗಳಲ್ಲಿ ಸ್ಪರ್ಧಿಸುವಂತೆ ತನ್ನ ಮೇಲೆ ಪಂಜಾಬ್ ಜನತೆಯ ಭಾರೀ ಒತ್ತಡವಿತ್ತು. ಮಾದಕದ್ರವ್ಯಗಳು,ನಿರುದ್ಯೋಗ ಮತ್ತು ರಾಜ್ಯದಿಂದ ಯುವಜನರ ವಲಸೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪಂಜಾಬ್ ಎದುರಿಸುತ್ತಿದ್ದು,ಇವುಗಳಿಗೆ ಪರಿಹಾರವನ್ನು ಜನತೆ ಬಯಸಿದ್ದಾರೆ ಎಂದು ರಾಜೇವಾಲ್ ಹೇಳಿದರು.

ಕೃಷಿ ಕಾಯ್ದೆಗಳು,ಒಂದು ವರ್ಷದಷ್ಟು ಸುದೀರ್ಘ ಪ್ರತಿಭಟನೆ ಮತ್ತು ಅಂತಿಮವಾಗಿ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಕಟಣೆ ಇವೆಲ್ಲ ಪಂಜಾಬ್ ವಿಧಾನಸಭಾ ಚುನಾವಣೆಗೆ ರಂಗವನ್ನು ಸಜ್ಜುಗೊಳಿಸಿವೆ. ಈ ನಿರ್ಣಾಯಕ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಮುಖ ನಿರ್ಧಾರವನ್ನು ಕೈಗೊಂಡಿರುವ ರೈತ ಸಂಘಟನೆಗಳು ಆಮ್ ಆದ್ಮಿ ಪಾರ್ಟಿಯ ಮೈತ್ರಿಯನ್ನು ಕೋರಬಹುದೆಂಬ ವದಂತಿಗಳು ಕೇಳಿ ಬರುತ್ತಿವೆ. ಇಂತಹ ಯಾವುದೇ ಮೈತ್ರಿಯನ್ನು ನಂತರ ಪ್ರಕಟಿಸಲಾಗುವುದು ಎಂದು ರೈತ ನಾಯಕರು ಹೇಳಿದರು. ‌

ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರುವ ಕೀರ್ತಿ ಕಿಸಾನ್ ಯೂನಿಯನ್,‌ ಕ್ರಾಂತಿಕಾರಿ ಕಿಸಾನ್ ಯೂನಿಯನ್,‌ ಬಿಕೆಯು-ಕ್ರಾಂತಿಕಾರಿ, ದೋಆಬಾ ಸಂಘರ್ಷ ಸಮಿತಿ, ಬಿಕೆಯು-ಸಿಧುಪುರ, ಕಿಸಾನ್ ಸಂಘರ್ಷ ಸಮಿತಿ ಮತ್ತು ಜೈಕಿಸಾನ್ ಅಂದೋಲನ ಚುನಾವಣಾ ರಂಗಕ್ಕೆ ಧುಮುಕುವುದನ್ನು ವಿರೋಧಿಸಿವೆ. ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವಂತೆ ಮಾಡುವುದಕ್ಕೆ ತನ್ನ ಹೋರಾಟವು ಸೀಮಿತವಾಗಿತ್ತು ಎಂದು ಎಸ್‌ಕೆಎಂ ಹೇಳಿದೆ.

ಎಸ್‌ಕೆಎಂ ಕೋರ್ ಕಮಿಟಿಯ ಸದಸ್ಯ ಗುರ್ನಾಮ್ ಸಿಂಗ್ ಚಾದುನಿ ಅವರೂ ಈಗಾಗಲೇ ಸಂಯುಕ್ತ ಸಂಘರ್ಷ ಪಾರ್ಟಿ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ದು,ಅದು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News