ಒಮೈಕ್ರಾನ್ ಆತಂಕ: ವಿಶ್ವದಾದ್ಯಂತ 6,300 ವಿಮಾನ ಯಾನ ರದ್ದು

Update: 2021-12-26 16:27 GMT

ನ್ಯೂಯಾರ್ಕ್, ಡಿ.26: ಒಮೈಕ್ರಾನ್ ರೂಪಾಂತರಿ ಸೋಂಕು ವಿಶ್ವದೆಲ್ಲೆಡೆ ತೀವ್ರಗತಿಯಲ್ಲಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶ್ವದೆಲ್ಲೆಡೆ 6,300ಕ್ಕೂ ಅಧಿಕ ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದು ಹಲವು ವಿಮಾನಗಳ ಸಂಚಾರವನ್ನು ವಿಳಂಬಿಸಲಾಗಿದೆ. ಇದರಿಂದ ಕ್ರಿಸ್ಮಸ್ ರಜೆಯ ಸಂದರ್ಭ ತಮ್ಮ ಮನೆಗೆ ಮರಳುವ ಉತ್ಸಾಹದಲ್ಲಿದ್ದ ಹಲವರಿಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಶನಿವಾರ ವಿಶ್ವದಾದ್ಯಂತ ಸುಮಾರು 2,800 ವಿಮಾನ ಸಂಚಾರ ಮೊಟಕುಗೊಳಿಸಲಾಗಿದ್ದು ಇದರಲ್ಲಿ ಅಮೆರಿಕದಿಂದ ಹೊರಡುವ ಅಥವಾ ಅಮೆರಿಕದತ್ತ ಸಂಚರಿಸುವ 970 ವಿಮಾನಗಳೂ ಸೇರಿವೆ. 8000 ವಿಮಾನ ಯಾನವನ್ನು ವಿಳಂಬಿಸಲಾಗಿದೆ . ಶುಕ್ರವಾರ ಸುಮಾರು 2,400 ವಿಮಾನ ಸಂಚಾರ ರದ್ದುಗೊಂಡಿದ್ದು 11,000 ವಿಮಾನ ಸಂಚಾರ ವಿಳಂಬಿಸಲಾಗಿದೆ . 

ರವಿವಾರ ಬೆಳಗ್ಗಿನ ಹೊತ್ತಿಗೇ 1,100ಕ್ಕೂ ಅಧಿಕ ವಿಮಾನ ಸಂಚಾರ ರದ್ದುಗೊಂಡಿದೆ ಎಂದು ಫ್ಲೈಟ್‌ವೇರ್ ಡಾಟ್ ಕಾಮ್ ಹೇಳಿದೆ. ಕೊರೋನ ಸೋಂಕಿನ ಅಪಾಯ ಎದುರಿಸುತ್ತಿರುವ ಪೈಲಟ್ಗಳು, ವಿಮಾನದ ಪರಿಚಾರಕರು ಮತ್ತು ಇತರ ಸಿಬಂದಿಗಳು ಕ್ವಾರಂಟೈನ್‌ಗೆ ಒಳಪಡುವ ಸಂದರ್ಭ ಹೆಚ್ಚಿದ್ದರಿಂದ ಲುಫ್ತಾನ್ಸಾ, ಡೆಲ್ಟಾ, ಯುನೈಟೆಡ್ ಏರ್‌ಲೈನ್ಸ್, ಜೆಟ್ ಬ್ಲೂ, ಅಲಾಸ್ಕಾ ಏರ್‌ಲೈನ್ಸ್ ಹಾಗೂ ಇತರ ಹಲವು ವಿಮಾನ ಯಾನ ಸಂಸ್ಥೆಗಳು ವರ್ಷದಲ್ಲಿ ಗರಿಷ್ಟ ಪ್ರಯಾಣ ನಡೆಯುವ ಅವಧಿಯಲ್ಲಿ ವಿಮಾನಸೇವೆ ಸ್ಥಗಿತಗೊಳಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ದೇಶದಾದ್ಯಂತ ಒಮೈಕ್ರಾನ್ ಸೋಂಕು ಪ್ರಕರಣ ಹಠಾತ್ ಉಲ್ಬಣಗೊಂಡಿರುವುದು ನಮ್ಮ ವಿಮಾನ ಸಿಬಂದಿಗಳ ಮೇಲೆ ನೇರ ಪರಿಣಾಮ ಬೀರಿದ್ದು ದುರದೃಷ್ಟವಶಾತ್ ಕೆಲವು ವಿಮಾನ ಸಂಚಾರ ರದ್ದುಗೊಳಿಸಲಾಗಿದೆ. ಈ ಬಗ್ಗೆ ಸಂಬಂಧಿತ ಪ್ರಯಾಣಿಕರಿಗೆ ಸಾಕಷ್ಟು ಮುಂಚಿತವಾಗಿಯೇ ಸೂಚನೆ ನೀಡಲಾಗಿದೆ ಎಂದು ಯುನೈಟೆಡ್ ಏರ್‌ಲೈನ್ಸ್ ಹೇಳಿದೆ. ಈ ಸಂಸ್ಥೆ ಶನಿವಾರ 250 ಮತ್ತು ಶುಕ್ರವಾರ 200 ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ.

ಅಮೆರಿಕದ ಪಶ್ಚಿಮ ಭಾಗದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರಸ್ತೆ, ರೈಲು ಸಂಚಾರಕ್ಕೂ ಅಡ್ಡಿಯಾಗಿರುವುದರಿಂದ ಪ್ರಯಾಣಿಕರಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಜಾಗತಿಕ ಮಟ್ಟದಲ್ಲಿ ಚೀನಾದಲ್ಲಿ ಅತ್ಯಧಿಕ ವಿಮಾನಗಳ ಪ್ರಯಾಣ ರದ್ದುಗೊಂಡಿದೆ. ಚೀನಾ ಈಸ್ಟರ್ನ್ ಏರ್‌ಲೈನ್ಸ್ ನ 20%ಕ್ಕೂ ಅಧಿಕ ಅಂದರೆ 1000ಕ್ಕೂ ಹೆಚ್ಚು ವಿಮಾನ ಸಂಚಾರ ರದ್ದಾಗಿದೆ. ಏರ್ ಚೀನಾ ಸಂಸ್ಥೆಯ ಸುಮಾರು 20% ವಿಮಾನಗಳ ಸಂಚಾರ ರದ್ದಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News