ಬಿಸಿಸಿಐನಲ್ಲಿ ಜಟಿಲ ಸ್ಥಿತಿಯನ್ನು ಸೃಷ್ಟಿಸಿರುವ ಬೇಹುಗಾರಿಕೆ ಸಾಧನಗಳ ಖರೀದಿ ಪ್ರಸ್ತಾವ

Update: 2021-12-27 08:11 GMT

ಬೇಹುಗಾರಿಕೆ ಸಾಧನಗಳನ್ನು ಖರೀದಿಸುವ ಪ್ರಸ್ತಾವವೊಂದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐನಲ್ಲಿ ಜಟಿಲ ಸ್ಥಿತಿಯನ್ನು ಸೃಷ್ಟಿಸಿದೆ. ರಹಸ್ಯ ಆಡಿಯೊ ರೆಕಾರ್ಡರ್‌ಗಳು, ಹಿಡನ್ ಕ್ಯಾಮರಾಗಳು, ಮೊಬೈಲ್ ಫೊರೆನ್ಸಿಕ್ ಉಪಕರಣ, ಹೈ ರೆಸೊಲ್ಯೂಷನ್ ಬೈನಾಕ್ಯುಲರ್‌ಗಳು ಇವೆಲ್ಲ ಬಿಸಿಸಿಐನ ಖರೀದಿ ಪಟ್ಟಿಯಲ್ಲಿದ್ದು, ಮ್ಯಾಚ್ ಫಿಕ್ಸರ್‌ಗಳಿಗೆ ಕಡಿವಾಣ ಹಾಕಲು ಇವುಗಳನ್ನು ಖರೀದಿಸಲು ಮಂಡಳಿಯು ಸಜ್ಜಾಗುತ್ತಿರಬಹುದು ಅಥವಾ ಡಿ.4ರಂದು ಕೋಲ್ಕತಾದಲ್ಲಿ ನಡೆದಿದ್ದ ಬಿಸಿಸಿಐನ ವಾರ್ಷಿಕ ಮಹಾಸಭೆಯಲ್ಲಿ ಮಂಡಳಿಯ ಸಿಇಒ ಹೇಮಾಂಗ್ ಅಮೀನ್ ಅವರು ಈ ಪ್ರಸ್ತಾವವನ್ನು ಮಂಡಿಸಿದ ಬಳಿಕ ಹಾಗೆ ಕಂಡುಬರುತ್ತಿದೆ.

ಅಂದ ಹಾಗೆ ಅಮೀನ್ ತನ್ನ ಸ್ವಂತ ವರದಿಯನ್ನು ಸಭೆಯಲ್ಲಿ ಮಂಡಿಸಿರಲಿಲ್ಲ. ಮಾಜಿ ಗುಜರಾತ್ ಡಿಜಿಪಿ ಹಾಗೂ ಹಾಲಿ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಭದ್ರತಾ ಘಟಕ (ಎಸಿಎಸ್‌ಯು)ದ ಮುಖ್ಯಸ್ಥ ಶಬೀರ್ ಹುಸೇನ್ ಶೇಖಾದಮ್ ಖಾಂಡ್ವಾವಾಲಾ ಅವರು ಸೂಚಿಸಿದ್ದ ಅಥವಾ ಬೇಡಿಕೆಯಿಟ್ಟಿದ್ದ ಪ್ರಸ್ತಾವವನ್ನು ಮಾತ್ರ ಅವರು ಮಂಡಿಸಿದ್ದರು.

ಶಬೀರ್ ವರದಿಯು ಕಾರ್ಯದರ್ಶಿಗಳ ಕಚೇರಿಯಿಂದ ರವಾನಿಸಲಾಗಿದ್ದ ಅಜೆಂಡಾ ದಾಖಲೆಗಳ ಭಾಗವಾಗಿದ್ದು, ‘ಎಸಿಎಸ್‌ಯುದ ತಾಂತ್ರಿಕ ಸಾಮರ್ಥ್ಯಗಳ ವರ್ಧನೆ’ ಶೀರ್ಷಿಕೆಯಡಿ ತನ್ನ ಘಟಕವನ್ನು ಬಲಗೊಳಿಸಲು ಅವರು ವಿವಿಧ ಬೇಹುಗಾರಿಕೆ ಸಾಧನಗಳಿಗಾಗಿ ಕೋರಿದ್ದರು.

1973ರ ತಂಡದ ಐಪಿಎಸ್ ಅಧಿಕಾರಿಯಾದ ಶಬೀರ್ ಅವರು ಈ ವರ್ಷದ ಎ.19ರಂದು ಐಪಿಎಲ್ ಆರಂಭಕ್ಕೆ ಮುನ್ನ ಎಸಿಎಸ್‌ಯು ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಅವರ ನೇಮಕದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ ಶಾ (ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಪುತ್ರ) ಅವರ ಪ್ರಮುಖ ಪಾತ್ರವಿತ್ತು. ಭಾರತದ ಸರ್ವೋಚ್ಚ ನ್ಯಾಯಾಲಯವು ನಿಗದಿ ಪಡಿಸಿದ್ದ 70 ವರ್ಷ ವಯೋಮಾನ ಮಿತಿಯನ್ನು ಶಬೀರ್ ದಾಟಿದ್ದರೂ ಅವರನ್ನು ನೇಮಕಗೊಳಿಸಲಾಗಿತ್ತು.

ಹಿಂದೆಲ್ಲ ಎಸಿಎಸ್‌ಯು ಮುಖ್ಯಸ್ಥ ಸೇರಿದಂತೆ ಯಾವುದೇ ಹುದ್ದೆಗೆ ನೇಮಕಾತಿಗಾಗಿ ಬಿಸಿಸಿಐ ಜಾಹೀರಾತುಗಳನ್ನು ಪ್ರಕಟಿಸುತ್ತಿತ್ತು. ಆದರೆ ಬಿಸಿಸಿಐ ಮೇಲಿನ ಶಾ ಅವರ ಬಿಗಿಹಿಡಿತದಿಂದಾಗಿ ಯಾವುದೇ ರಾಜ್ಯ ಕ್ರಿಕೆಟ್ ಸಂಘದ ಸದಸ್ಯರಾಗಲೀ ಅಧಿಕಾರಿಗಳಾಗಲೀ ಈವರೆಗೆ ಯಾವುದೇ ಅಧಿಕೃತ ಸಭೆಯಲ್ಲಿ ಈ ಬಗ್ಗೆ ಚಕಾರವೆತ್ತಿಲ್ಲ.

ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಪಿಡುಗಿಗೆ ಕಡಿವಾಣ ಹಾಕಲು ಶಬೀರ್ ಪ್ರಸ್ತಾವಕ್ಕೆ ಬಿಸಿಸಿಐ ಸಮ್ಮತಿ ನೀಡಿದೆಯೇ ಅಥವಾ ಇಲ್ಲವೇ ಎನ್ನುವುದು ಈವರೆಗೆ ಸ್ಪಷ್ಟವಾಗಿಲ್ಲ. ಸ್ವತಂತ್ರ ಮಾಧ್ಯಮ ಸಂಸ್ಥೆಯೊಂದು ಬಹಿರಂಗಗೊಳಿಸಿದ್ದ ಪೆಗಾಸಸ್ ಸ್ಪೈವೇರ್ ಬಳಸಿ ಕಣ್ಗಾವಲಿಗೊಳಗಾಗಿದ್ದ ದೂರವಾಣಿ ಸಂಖ್ಯೆಗಳಲ್ಲಿ ಬಿಹಾರ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ)ನ ಹಾಲಿ ಮುಖ್ಯಸ್ಥ ರಾಕೇಶ ತಿವಾರಿಯವರ ಫೋನ್ ಸಂಖ್ಯೆಯೂ ಇತ್ತು ಮತ್ತು ಆ ಬಳಿಕ ತಾವು ಯಾವುದೇ ಕಚೇರಿ ವಿಷಯಗಳ ಕುರಿತು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿರುವುದಾಗಿ ಬಿಸಿಸಿಐನ ಕೆಲವು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಶಬೀರ್ ಅವರು ಪೊಲೀಸ್ ಆಯುಕ್ತರಾಗಿದ್ದಾಗ ದೂರವಾಣಿ ಕಣ್ಗಾವಲು ಅಥವಾ ಬೇಹುಗಾರಿಕೆ ಮಾಮೂಲು ವಿಷಯವಾಗಿತ್ತು. ಅದನ್ನೇ ಅವರು ಕ್ರಿಕೆಟ್‌ನಲ್ಲಿಯೂ ಅನ್ವಯಿಸಿದರೆ ಅಚ್ಚರಿಯೇನಿಲ್ಲ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೋರ್ವರು ತಿಳಿಸಿದರು.

ಬಿಜೆಪಿಯ ಆಂತರಿಕ ವಲಯಗಳಿಗೆ ನಿಕಟರಾಗಿರುವ ತಿವಾರಿ ಈ ವರ್ಷದ ಮಾ.20 ಮತ್ತು 26ರ ನಡುವೆ ‘ಅನಧಿಕೃತ’ ಟ್ವೆಂಟಿ-20 ಬಿಹಾರ ಕ್ರಿಕೆಟ್ ಲೀಗ್ ನಡೆಸಿದ್ದರು. ಈ ತಂಡದ ವಿರುದ್ಧ ಮ್ಯಾಚ್ ಫಿಕ್ಸಿಂಗ್‌ನ ಹಲವಾರು ಆರೋಪಗಳಿದ್ದು, ಲೀಗ್ ಅನ್ನು ರದ್ದುಗೊಳಿಸುವಂತೆ ಅಮೀನ್ ಬಿಸಿಎಗೆ ಪತ್ರಬರೆದಿದ್ದರೂ ಅದನ್ನು ಕಡೆಗಣಿಸಲಾಗಿತ್ತು. ಈವರೆಗೆ ತಿವಾರಿ ಅಥವಾ ಬಿಸಿಎ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ.

ಸಹಜವಾಗಿಯೇ ಪೆಗಾಸಸ್‌ನಂತಹ ಸ್ಪೈವೇರ್ ಬಿಸಿಸಿಐಗೆ ಲಭ್ಯವಾಗುವ ಸಾಧ್ಯತೆ ಖಂಡಿತವಾಗಿಯೂ ಇಲ್ಲ. ಏಕೆಂದರೆ ಪೆಗಾಸಸ್ ಸ್ಪೈವೇರ್‌ನ್ನು ತಯಾರಿಸುವ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ತಾನು ಸರಕಾರಗಳಿಗೆ ಮಾತ್ರ ಅದನ್ನು ಮಾರಾಟ ಮಾಡುತ್ತಿರುವುದಾಗಿ ಒತ್ತಿ ಹೇಳಿದೆ. ಹಾಲಿ ಆಡಳಿತಗಾರರೊಂದಿಗೆ (ಶಾ ಮತ್ತು ಕೇಂದ್ರ ಸಚಿವ ಅನುರಾಗ ಠಾಕೂರ್ ಗುಂಪು) ಸಹಮತವನ್ನು ಹೊಂದಿಲ್ಲದ ಬಿಸಿಸಿಐ ಅಧಿಕಾರಿಗಳು ಮಂಡಳಿಯಲ್ಲಿನ ವಿರೋಧವನ್ನು ಮಟ್ಟಹಾಕಲು ತಮ್ಮ ವಿರುದ್ಧವೂ ಕಣ್ಗಾವಲು ಸಾಧನಗಳ ಬಳಕೆಯಾಗಬಹುದು ಎಂಬ ಚಿಂತೆಯಲ್ಲಿದ್ದಾರೆ. ಅಧಿಕಾರಾವಧಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕಾರ್ಯದರ್ಶಿ ಜಯ ಶಾ ಮತ್ತು ಅಧ್ಯಕ್ಷ ಸೌರವ ಗಂಗುಲಿ ಅವರು ಹುದ್ದೆಗಳಲ್ಲಿ ಮುಂದುವರಿಯಲು ಎಂದೋ ಅನರ್ಹಗೊಳ್ಳಬೇಕಿತ್ತು ಎಂದು ಸುಪ್ರೀಂ ಕೋರ್ಟ್‌ನ 2016ರ ತೀರ್ಪಿನ ಬಳಿಕ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸುವಂತಾಗಿದ್ದ ರಾಜ್ಯ ಕ್ರಿಕೆಟ್ ಸಂಘವೊಂದರ ಮಾಜಿ ಅಧ್ಯಕ್ಷರೋರ್ವರು ಹೇಳಿದರು.

ಬಿಸಿಸಿಐ ಸಂವಿಧಾನದಂತೆ ಆಟಕ್ಕೆ ಬೆದರಿಕೆಗಳನ್ನು ಒಳಗೊಂಡಿರುವ ಪ್ರಕರಣಗಳನ್ನು ಪರಿಶೀಲಿಸುವುದು ಎಸಿಎಸ್‌ಯುನ ಹೊಣೆಗಾರಿಕೆಯಾಗಿದೆ ಮೇಲ್ವಿಚಾರಣೆ, ತನಿಖೆ, ವಿವಿಧ ರಾಜ್ಯಗಳ ಪೊಲೀಸರೊಂದಿಗೆ ಕಾರ್ಯ ನಿರ್ವಹಣೆ ಮತ್ತು ಭಾರತದಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ಸುರಕ್ಷಿತವಾಗಿ ನಡೆಯುವಂತೆ ನೋಡಿಕೊಳ್ಳುವುದು ಈ ಹೊಣೆಗಾರಿಕೆಯಲ್ಲಿ ಸೇರಿವೆ.

ಕ್ರಿಕೆಟ್ ಬೆಟ್ಟಿಂಗ್‌ನ್ನು ಭಾರತದಲ್ಲಿ ಕಾನೂನು ಬದ್ಧಗೊಳಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದಿಂದ ನೇಮಕಗೊಂಡಿರುವ ನ್ಯಾ.ಲೋಧಾ ಸಮಿತಿಯು ಶಿಫಾರಸು ಮಾಡಿದ್ದರೂ, ಶಬೀರ್ ಇದಕ್ಕೆ ವಿರುದ್ಧವಾಗಿದ್ದಾರೆ. ಬಿಸಿಸಿಐಗೆ ಸೇರಿದ ಬೆನ್ನಿಗೆ ಶಬೀರ್, ಬೆಟ್ಟಿಂಗ್‌ನ್ನು ಕಾನೂನುಬದ್ಧಗೊಳಿಸುವುದನ್ನು ತಾನು ಬಯಸುವುದಿಲ್ಲ ಎಂದು ಒತ್ತಿ ಹೇಳಿದ್ದರು.

ಶಬೀರ್ ಮುಂದಿಟ್ಟಿರುವ ಬೇಡಿಕೆಯ ಬಗ್ಗೆ ಮಂಡಳಿಯಲ್ಲಿಯ ಯಾರೂ ತುಟಿ ಬಿಚ್ಚುತ್ತಿಲ್ಲ. ಕಾರ್ಯದರ್ಶಿಗಳ ಕಚೇರಿಯಿಂದ ಈಗ ಯಾವುದೇ ಮಾಹಿತಿ ಸೋರಿಕೆಯಾಗುತ್ತಿಲ್ಲವಾದ್ದರಿಂದ ಬಿಸಿಸಿಐ ಬಾಸ್‌ಗಳು ಈ ಬೇಡಿಕೆಯನ್ನು ಒಪ್ಪಿಕೊಂಡಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಯಾರಿಗೂ ಸುಳಿವಿಲ್ಲ.

ಅಲ್ಲದೆ ಲೆಕ್ಕಪತ್ರಗಳನ್ನು ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಮುನ್ನಾದಿನವೇ ಅಂಗೀಕರಿಸಿದ್ದರೂ ವಾರ್ಷಿಕ ಮಹಾಸಭೆ ಆರಂಭಗೊಳ್ಳುವುದಕ್ಕೆ ಕೇವಲ ಮೂರು ಗಂಟೆಗಳ ಮೊದಲು ಅವುಗಳನ್ನು ಮಂಡಳಿಯ ಸದಸ್ಯರಿಗೆ ಲಭ್ಯವಾಗಿಸಲಾಗಿತ್ತು ಎಂಬ ಮಾಹಿತಿಯೂ ಇದೆ. ಈ ಹಿಂದೆ ಹಣಕಾಸು ಸಮಿತಿಯ ಸಭೆಯ ಬಳಿಕ ವಾರ್ಷಿಕ ಮಹಾಸಭೆಗೆ ಕನಿಷ್ಠ 15 ದಿನಗಳ ಮೊದಲು ಹಣಕಾಸು ವರದಿಯನ್ನು ಎಲ್ಲ ಸದಸ್ಯರಿಗೆ ವಿತರಿಸಲಾಗುತ್ತಿತ್ತು.

ಕೃಪೆ : newslaundry.com

Writer - ಚಂದ್ರ ಶೇಖರ ಲೂಥ್ರಾ

contributor

Editor - ಚಂದ್ರ ಶೇಖರ ಲೂಥ್ರಾ

contributor

Similar News