ಕೋವಿಡ್ ರೂಪಾಂತರಿಗಳ ವಿರುದ್ಧ ಭಾರತದ ಹೋರಾಟಕ್ಕೆ ಬಲ: ಎರಡು ಹೊಸ ಲಸಿಕೆಗಳು, ಮಾತ್ರೆಯ ತುರ್ತು ಬಳಕೆಗೆ ಅನುಮತಿ
ಹೊಸದಿಲ್ಲಿ,ಡಿ.28: ಮಹತ್ವದ ಕ್ರಮವೊಂದರಲ್ಲಿ ಭಾರತವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವೊವ್ಯಾಕ್ಸ್, ಬಯಾಲಜಿಕಲ್ ಇ ತಯಾರಿಕೆಯ ಕೊರ್ಬೆವ್ಯಾಕ್ಸ್ ನೂತನ ಲಸಿಕೆಗಳು ಹಾಗೂ ವೈರಾಣು ನಿರೋಧಕ ಕೋವಿಡ್-19 ಮಾಲ್ನುಪಿರಾವಿರ್ ಮಾತ್ರೆಯ ತುರ್ತು ಬಳಕೆಗೆ ಅನುಮತಿಯನ್ನು ನೀಡಿದೆ.
ಮುಂಬರುವ ದಿನಗಳಲ್ಲಿ ನೂತನ ಲಸಿಕೆಗಳು ಬೂಸ್ಟರ್ ಡೋಸ್‌ಗಳಾಗಿ ಬಳಕೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ತುರ್ತು ಬಳಕೆ ಅನುಮತಿಯನ್ನು ಪಡೆದಿರುವ ಲಸಿಕೆಗಳ ಸಂಖ್ಯೆ ಎಂಟಕ್ಕೇರಿದೆ.
ಸೀರಮ್ ಇನ್‌ಸ್ಟಿಟ್ಯೂಟ್ ನ ಕೋವಿಶೀಲ್ಡ್, ಭಾರತ್ ಬಯೊಟೆಕ್ ನ ಕೋವ್ಯಾಕ್ಸಿನ್, ಝೈಡಸ್ ಕ್ಯಾಡಿಲಾದ ಝೈಕೋವ್-ಡಿ, ರಷ್ಯಾದ ಸ್ಪುಟ್ನಿಕ್, ಅಮೆರಿಕದ ಮೊಡೆರ್ನಾ ಹಾಗೂ ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗಳು ಈಗಾಗಲೇ ದೇಶದಲ್ಲಿ ಅನುಮೋದನೆ ಪಡೆದುಕೊಂಡಿರುವ ಲಸಿಕೆಗಳಾಗಿವೆ.
ಕೊವೊವ್ಯಾಕ್ಸ್ ಅಮೆರಿಕದ ನೊವೊವ್ಯಾಕ್ಸ್ ನ ಮರುಸಂಯೋಜಿತ ನ್ಯಾನೊಪಾರ್ಟಿಕಲ್ ಪ್ರೋಟಿನ್ ಆಧಾರಿತ ಕೋವಿಡ್-19 ಲಸಿಕೆಯ ಭಾರತೀಯ ಆವೃತ್ತಿಯಾಗಿದೆ. ನೊವೊವ್ಯಾಕ್ಸ್ ಮತ್ತು ಸೀರಮ್ ಈಗಾಗಲೇ ಫಿಲಿಪ್ಪೀನ್ಸ್ ನಲ್ಲಿ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿಯನ್ನು ಪಡೆದುಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆಯೂ ಇತ್ತೀಚಿಗೆ ಕೊವೊವ್ಯಾಕ್ಸ್ ಅನ್ನು ತುರ್ತು ಬಳಕೆಯ ಲಸಿಕೆಗಳ ಪಟ್ಟಿಗೆ ಸೇರಿಸಿದೆ.
ಕೊರ್ಬೆವ್ಯಾಕ್ಸ್ ತುರ್ತು ಬಳಕೆ ಅನುಮತಿಯನ್ನು ಪಡದಿರುವ ಇನ್ನೊಂದು ಪ್ರೋಟಿನ್ ಆಧಾರಿತ ಲಸಿಕೆಯಾಗಿದೆ. ಕೊರ್ಬೆವ್ಯಾಕ್ಸ್ ನ 300 ಮಿಲಿಯನ್ ಡೋಸ್ ಗಳನ್ನು ಕಾಯ್ದಿರಿಸಲು ಕೇಂದ್ರವು ಈಗಾಗಲೇ ಬಯಾಲಜಿಕಲ್ ಇ ಲಿ.ಗೆ 1500 ಕೋ.ರೂ.ಗಳ ಮುಂಗಡವನ್ನು ಪಾವತಿಸಿದೆ.
ತುರ್ತು ಬಳಕೆಗೆ ಅನುಮತಿ ಪಡೆದಿರುವ ವೈರಾಣು ನಿರೋಧಕ ಕೋವಿಡ್-19 ಮಾತ್ರೆ ಮಾಲ್ನುಪಿರಾವಿರ್ ಅನ್ನು ಎಂಎಸ್‌ಡಿ (ಮರ್ಕ್) ಮತ್ತು ರಿಡ್ಜ್ ಬ್ಯಾಕ್ ಬಯೊಥೆರಪ್ಯುಟಿಕ್ಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಿದ್ದು, ಇದು ಸಾರ್ಸ್-ಕೋವ್-2 ವೈರಸ್ ನ ಜೆನೆಟಿಕ್ ಕೋಡ್ ನಲ್ಲಿ ದೋಷಗಳನ್ನು ನುಸುಳಿಸುವ ಮೂಲಕ ವೈರಸ್ ಇನ್ನಷ್ಟು ಪುನರಾವರ್ತನೆಗೊಳ್ಳುವುದನ್ನು ತಡೆಯುತ್ತದೆ. ಪ್ರತಿ 12 ಗಂಟೆಗಳಿಗೆ ತಲಾ 200 ಎಂಜಿಯ ನಾಲ್ಕು ಮಾತ್ರೆಗಳಂತೆ ಐದು ದಿನಗಳ ಕಾಲ ಒಟ್ಟು 40 ಮಾಲ್ನುಪಿರಾವಿರ್ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಸತತ ಐದಕ್ಕಿಂತ ಹೆಚ್ಚಿನ ದಿನಗಳಿಗೆ ಮಾಲ್ನುಪಿರಾವಿರ್ ಬಳಕೆಗೆ ಅನುಮತಿಯನ್ನು ನೀಡಲಾಗಿಲ್ಲ.
ಸೌಮ್ಯದಿಂದ ಮಧ್ಯಮ ಪ್ರಮಾಣದ ಕೊರೋನವೈರಸ್ ಕಾಯಲೆಯುಳ್ಳ ಮತ್ತು ಅದು ಗಂಭೀರ ಕೋವಿಡ್-19ಗೆ ತಿರುಗುವ ಅಪಾಯದಲ್ಲಿರುವ ವಯಸ್ಕರಿಗೆ ಮಾಲ್ನುಪಿರಾವಿರ್‌ನ ತುರ್ತು ಬಳಕೆಗೆ ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತ (ಯುಎಸ್‌ಎಫ್‌ಡಿಎ)ವು ಕಳೆದ ವಾರ ಅನುಮತಿಯನ್ನು ನೀಡಿದೆ. ಭಾರತದಲ್ಲಿ ಮಾಲ್ನುಪಿರಾವಿರ್‌ನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಸಿಪ್ಲಾ, ಡಾ.ರೆಡ್ಡೀಸ್ ಲ್ಯಾಬರೇಟರೀಸ್, ಎಮ್ ಕ್ಯೂರ್ ಫಾರ್ಮಾಸ್ಯೂಟಿಕಲ್ಸ್, ಹೆಟಿರೊ ಲ್ಯಾಬ್ಸ್ ಮತ್ತು ಸನ್ ಫಾರ್ಮಾಸ್ಯೂಟಿಕಲ್ ಇಂಡಸ್ಟ್ರೀಸ್ ಮರ್ಕ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿವೆ.