×
Ad

ಸ್ವಾತಂತ್ರ್ಯದತ್ತ ಸಾಗಿದರೆ ಕಠಿಣ ಕ್ರಮ: ತೈವಾನ್ ಗೆ ಚೀನಾ ಎಚ್ಚರಿಕೆ

Update: 2021-12-29 22:40 IST

ಬೀಜಿಂಗ್, ಡಿ.29: ತೈವಾನ್‌ನ ಪ್ರಚೋದನೆ ಮತ್ತು ಹೊರಗಿನವರ ಮಧ್ಯಸ್ಥಿಕೆ ಮುಂದಿನ ವರ್ಷ ತೀವ್ರಗೊಳ್ಳಬಹುದು. ಸ್ವಾತಂತ್ರ್ಯದತ್ತ ಸಾಗುವ ಪ್ರಯತ್ನವನ್ನು ತೈವಾನ್ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಚೀನಾ ಬುಧವಾರ ತೀಕ್ಷ್ಣ ಎಚ್ಚರಿಕೆ ನೀಡಿದೆ. ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯ ತೈವಾನ್ ತನ್ನ ಭೂಪ್ರದೇಶದ ವ್ಯಾಪ್ತಿಯಲ್ಲಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ ಕಳೆದ 2 ವರ್ಷಗಳಿಂದ ತೈವಾನ್‌ನ ಸಾರ್ವಭೌಮತ್ವದ ಹಕ್ಕು ಪ್ರತಿಪಾದನೆಯನ್ನು ಹತ್ತಿಕ್ಕಲು ಮಿಲಿಟರಿ ಹಾಗೂ ರಾಜತಾಂತ್ರಿಕ ಒತ್ತಡ ತೀವ್ರಗೊಳಿಸಿದೆ. ಇದು ತೈವಾನ್ ಹಾಗೂ ಅಮೆರಿಕದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ತೈವಾನ್‌ನೊಂದಿಗೆ ಪುನರ್‌ಏಕೀಕರಣ ಶಾಂತ ರೀತಿಯಲ್ಲಿ ನಡೆಯುವುದಕ್ಕೆ ಚೀನಾ ಗರಿಷ್ಟ ಪ್ರಯತ್ನ ಮಾಡಲಿದೆ. ಆದರೆ ಸ್ವಾತಂತ್ರ್ಯದ ಕುರಿತ ಕೆಂಪು ಗೆರೆಯನ್ನು ದಾಟುವ ಯಾವುದೇ ಪ್ರಯತ್ನ ನಡೆದರೆ ಕ್ರಮ ಕೈಗೊಳ್ಳಲಿದೆ ಎಂದು ತೈವಾನ್ ವ್ಯವಹಾರಕ್ಕೆ ಸಂಬಂಧಿಸಿದ ಕಚೇರಿಯ ವಕ್ತಾರ ಮಾ ಕ್ಸಿಯೊಗಾಂಗ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಸ್ವಾತಂತ್ರ್ಯ ಪರ ಶಕ್ತಿಗಳ ಪ್ರಚೋದನೆ ಮತ್ತು ಬಾಹ್ಯ ಹಸ್ತಕ್ಷೇಪ ಮುಂಬರುವ ದಿನಗಳಲ್ಲಿ ತೀವ್ರಗೊಳ್ಳಬಹುದು. ತೈವಾನ್ ಜಲಸಂಧಿಯಲ್ಲಿನ ಪರಿಸ್ಥಿತಿ ಇನ್ನಷ್ಟು ಸಂಕೀರ್ಣಗೊಳ್ಳಬಹುದು. ತೈವಾನ್‌ನಲ್ಲಿನ ಪ್ರತ್ಯೇಕತವಾದಿ ಶಕ್ತಿಗಳು ಸ್ವಾತಂತ್ರ್ಯವನ್ನು ಬಯಸಿ ಕೆರಳಿಸಲು, ಬಲಪ್ರಯೋಗಿಸಲು ಅಥವಾ ಕೆಂಪು ಗೆರೆಯನ್ನು ದಾಟಲು ಪ್ರಯತ್ನಿಸಿದರೆ ನಾವು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಕ್ಸಿಯೊಗಾಂಗ್ ಹೇಳಿದ್ದಾರೆ.

ಚೀನಾ ಮತ್ತು ಅಮೆರಿಕದ ನಡುವಿನ ಸಂಬಂಧ ಹದಗೆಡಲು ತೈವಾನ್ ವಿಷಯ ಪ್ರಮುಖ ಕಾರಣವಾಗಿದೆ. ತೈವಾನ್-ಅಮೆರಿಕದ ಮಧ್ಯೆ ಯಾವುದೇ ಅಧಿಕೃತ ಸಹಕಾರ ಸಂಬಂಧ ಇರದಿದ್ದರೂ ಅಮೆರಿಕ ಆ ದೇಶಕ್ಕೆ ಶಸ್ತ್ರಾಸ್ತ್ರ ಒದಗಿಸುತ್ತಿದೆ ಮತ್ತು ಬೆಂಬಲಿಸುತ್ತಿದೆ. ಇದನ್ನು ತೀವ್ರವಾಗಿ ವಿರೋಧಿಸಿರುವ ಚೀನಾ, ತೈವಾನ್ ಜಲಸಂಧಿಯ ಪ್ರದೇಶದಲ್ಲಿ ತನ್ನ ಯುದ್ಧವಿಮಾನಗಳ ಹಾರಾಟ ನಡೆಸುವ ಮೂಲಕ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ಚೀನಾದಲ್ಲಿ 1949ರಲ್ಲಿ ರಿಪಬ್ಲಿಕ್ ಆಫ್ ಚೀನಾ ಪಕ್ಷದ ಬೆಂಬಲಿಗರು ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ(ಕಮ್ಯುನಿಸ್ಟ್ ಪಕ್ಷ)ದ ಬೆಂಬಲಿಗರ ನಡುವೆ ಭುಗಿಲೆದ್ದ ಅಂತರ್ಯುದ್ಧದಲ್ಲಿ ಸೋತ ರಿಪಬ್ಲಿಕ್ ಆಫ್ ಚೀನಾ ಪಕ್ಷದ ಸರಕಾರ ತೈವಾನ್‌ಗೆ ಪಲಾಯನ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News