ಪತ್ರಿಕೋದ್ಯಮ ಜನಪರ ಆಗಬೇಕೆಂದರೆ ಅದು ಜಾಹೀರಾತು ಮುಕ್ತವಾಗಬೇಕು: ಅತುಲ್ ಚೌರಾಸಿಯಾ

Update: 2021-12-30 12:02 GMT

ಅತುಲ್ ಚೌರಾಸಿಯಾ ಹಿಂದಿ ಭಾಷೆಯ ಖ್ಯಾತ ಪತ್ರಕರ್ತರು. ಒಂದೂವರೆ ದಶಕಗಳ ವೃತ್ತಿ ಜೀವನದಲ್ಲಿ ವರದಿಗಾರರಾಗಿ ಮುದ್ರಣ, ಡಿಜಿಟಲ್ ಹಾಗೂ ಟಿವಿ - ಈ ಮೂರೂ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತೆಹೆಲ್ಕಾ ಹಿಂದಿ ಮ್ಯಾಗಝಿನ್ ಹಾಗೂ ಕ್ಯಾಚ್ ನ್ಯೂಸ್ ಹಿಂದಿ ಸುದ್ದಿ ತಾಣದ ಸಂಪಾದಕರಾಗಿದ್ದರು. ಈಗ ಮಾಧ್ಯಮ ಕ್ಷೇತ್ರದ ಹುಳುಕುಗಳಿಗೆ ಕನ್ನಡಿ ಹಿಡಿಯುವ newslaundry.com ನ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ. ಅಲ್ಲಿ ಅವರು ಪ್ರತಿ ಬುಧವಾರ ನಡೆಸಿಕೊಡುವ ‘ಟಿಪ್ಪಣಿ’ ಹೆಸರಿನ ವಿಶಿಷ್ಟ ವೀಡಿಯೊ ಕಾರ್ಯಕ್ರಮ ವಿಡಂಬನೆ, ತಿಳಿ ಹಾಸ್ಯ, ಪ್ರಖರ ವಿಶ್ಲೇಷಣೆ ಹಾಗೂ ಸ್ಪಷ್ಟ ಅಭಿಪ್ರಾಯ-ಇವೆಲ್ಲವುಗಳ ಸಮ್ಮಿಲನವಾಗಿದ್ದು, ಬಹಳ ಖ್ಯಾತಿ ಪಡೆದಿದೆ. ಭಾರತದಲ್ಲಿ ಮಾಧ್ಯಮಗಳ ಅಧಃಪತನ ಹಾಗೂ ಅದಕ್ಕೆ ಪರಿಹಾರದ ಕುರಿತು ‘ವಾರ್ತಾಭಾರತಿ’ಯ ಪ್ರಶ್ನೆಗಳಿಗೆ ಅವರು ಇಲ್ಲಿ ಉತ್ತರಿಸಿದ್ದಾರೆ.

ನೀವು ನ್ಯೂಸ್ ಲಾಂಡ್ರಿ ಸೇರುವ ಮೊದಲು ‘ಮುಖ್ಯವಾಹಿನಿ’ ಮಾಧ್ಯಮದಲ್ಲಿ ಸಾಕಷ್ಟು ಸಮಯ ಕೆಲಸ ಮಾಡಿದವರು. ಮುದ್ರಣ, ಡಿಜಿಟಲ್ ಮತ್ತು ಟಿವಿ ಮಾಧ್ಯಮದಲ್ಲೂ ಸೇವೆ ಸಲ್ಲಿಸಿ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಪಡೆದಿದ್ದೀರಿ. ಮತ್ತೆ ನ್ಯೂಸ್ ಲಾಂಡ್ರಿಯಂತಹ ಭಿನ್ನ ಮಾಧ್ಯಮಕ್ಕೆ ಬರಲು ಕಾರಣವೇನು ? ಈ ಬದಲಾವಣೆಯನ್ನು ಸ್ವಲ್ಪವಿವರಿಸಿ.

  • ನಾನು ತೆಹೆಲ್ಕಾ ಹಿಂದಿ ಮ್ಯಾಗಝಿನ್ ಸಂಪಾದಕನಾಗಿದ್ದೆ. ಬಳಿಕ ಕ್ಯಾಚ್ ನ್ಯೂಸ್ ಸೇರಿದೆ. ಮುದ್ರಣ ಮಾಧ್ಯಮದಿಂದ ಡಿಜಿಟಲ್‌ಗೆ ಬಂದಿದ್ದು ಒಂದು ಪ್ರಜ್ಞಾಪೂರ್ವಕ ನಿರ್ಧಾರ. ಏಕೆಂದರೆ ಕಳೆದೊಂದು ದಶಕದಲ್ಲಿ ಮೀಡಿಯಾ ಕ್ಷೇತ್ರ ಬಹಳ ವೇಗವಾಗಿ ಬದಲಾವಣೆಯಾಗಿದೆ. ಹಾಗಾಗಿ ಬದಲಾವಣೆಗೆ ತಕ್ಕಂತೆ ಅಪ್ಡೇಟ್ ಆಗಿರಬೇಕಾದ್ದು ಬಹಳ ಅಗತ್ಯ. ಡಿಜಿಟಲ್ ಮಾಧ್ಯಮ ಕ್ಷೇತ್ರದ ಭವಿಷ್ಯ ಎಂಬುದು ಸ್ಪಷ್ಟವಾಗಿತ್ತು. ಹಾಗಾಗಿ ಸಹಜವಾಗಿ ಇಲ್ಲಿಗೆ ಬಂದೆ. ನಾನು ಎರಡು ವರ್ಷ ಟಿವಿಯಲ್ಲಿದ್ದೆ. ಆದರೆ ನನ್ನ ಆಸಕ್ತಿ ಮತ್ತು ಅರ್ಹತೆಗೆ ಟಿವಿ ಸೂಕ್ತ ಮಾಧ್ಯಮ ಅಲ್ಲ ಎಂದು ಅರಿವಾಗಿದ್ದರಿಂದ ಬಹಳ ಬೇಗ ಅಲ್ಲಿಂದ ನಿರ್ಗಮಿಸಿದೆ.

ನೀವು ನ್ಯೂಸ್ ಲಾಂಡ್ರಿಯಲ್ಲಿ ನಡೆಸಿಕೊಡುವ ಟಿಪ್ಪಣಿ ಅತ್ಯಂತ ವಿಶಿಷ್ಟ ಕಾರ್ಯಕ್ರಮ. ಅದರಲ್ಲಿ ವ್ಯಂಗ್ಯ, ಹರಿತ ವಿಶ್ಲೇಷಣೆ ಹಾಗೂ ಅಭಿಪ್ರಾಯ ಎಲ್ಲವೂ ಇದೆ. ಈ ಕಾರ್ಯಕ್ರಮ ಹೇಗೆ ಸೃಷ್ಟಿಯಾಯಿತು? ಅದರ ಹಿಂದಿದ್ದ ಐಡಿಯಾ ಏನು?

  • ಟಿಪ್ಪಣಿ ಹಿಂದಿನ ಐಡಿಯಾ ಬಹಳ ಸರಳವಾಗಿತ್ತು. ನಾವು ನ್ಯೂಸ್ ಲಾಂಡ್ರಿಯಲ್ಲಿ ಒಂದು ಹಿಂದಿ ಕಾರ್ಯಕ್ರಮ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಸುಮ್ಮನೆ ಇನ್ನೊಂದು ಯೂಟ್ಯೂಬ್ ಶೋ ಮಾಡುವುದು ನಮಗೆ ಇಷ್ಟವಿರಲಿಲ್ಲ. ಹಾಗಾಗಿ ಜನರ ಮನಸ್ಸಿಗೆ ಆಪ್ತವಾಗುವ ಆಡುಮಾತಿನ, ಹಳ್ಳಿಗಾಡಿನ ಭಾಷೆಯಲ್ಲಿ ವಿಡಂಬನೆ ಹಾಗೂ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವ ಕಾರ್ಯಕ್ರಮವೊಂದನ್ನು ಮಾಡಬೇಕು ಎಂದು ನಿರ್ಧರಿಸಿದೆವು. ಹಾಗೆಯೇ ಶೋಗೆ ಬ್ಲಾಕ್ ಆ್ಯಂಡ್ ವೈಟ್ ಹಿನ್ನೆಲೆ ನೀಡಿದ್ದು ಅದಕ್ಕೆ ವಿಶಿಷ್ಟ ಗುರುತನ್ನು ನೀಡಿದೆ.               

► ಇತ್ತೀಚಿನ ಹಲವು ಬೆಳವಣಿಗೆಗಳಲ್ಲಿ ಸರಕಾರದ ಭಟ್ಟಂಗಿತನ ಮಾಡುವ ಗೋದಿ ಮೀಡಿಯಾಗಳು ಹಾಗೂ ಅವುಗಳ ಆ್ಯಂಕರ್‌ಗಳ ಬಣ್ಣ ಬಯಲಾಗಿದೆ. ಆದರೆ ಇನ್ನೂ ಈ ಟಿವಿ ಚಾನೆಲ್‌ಗಳನ್ನು ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ನೋಡುತ್ತಿದ್ದಾರೆ ಮತ್ತು ನಂಬುತ್ತಿದ್ದಾರೆ. ಇದು ಬದಲಾಗುವುದು ಸಾಧ್ಯವೇ?

  • ಟಿವಿ ಬಹಳ ಶಕ್ತಿಶಾಲಿ ಮಾಧ್ಯಮ. ಹಾಗಾಗಿ ಅದಕ್ಕೆ ಅಂತಹ ದೊಡ್ಡ ಖ್ಯಾತಿ, ಅಭಿಮಾನಿ ಬಳಗ ಸೃಷ್ಟಿಯಾಗುವುದು ಸಹಜ. ಈಗ ಸರಕಾರದ ಮಡಿಲಲ್ಲಿ ಕುಳಿತ ಸಾಕು ನಾಯಿಗಳಂತೆ ವರ್ತಿಸುತ್ತಿರುವ ಟಿವಿ ಆ್ಯಂಕರ್‌ಗಳು ಟಿವಿಯ ಪ್ರಭಾವವನ್ನುತಮ್ಮ ವೈಯಕ್ತಿಕ ಹಾಗೂ ರಾಜಕೀಯ ಗುರಿ ಸಾಧನೆಗೆ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ. ಪತ್ರಿಕೋದ್ಯಮದಲ್ಲಿ ಜನರಿಗೆ ಬಹಳ ಕಾಲದಿಂದ ನಂಬಿಕೆ ಬೆಳೆದು ಬಂದಿದೆ. ಆ ನಂಬಿಕೆಯೇ ಟಿವಿ ಮಾಧ್ಯಮದ ಬಂಡವಾಳ. ಅದೊಂದೇ ಕಾರಣಕ್ಕೆ ಸಾಮಾನ್ಯ ಜನರು ಟಿವಿ ಆ್ಯಂಕರ್ ಹೇಳಿದ್ದನ್ನು ನಂಬುತ್ತಾರೆ. ಅಷ್ಟು ಸುದೀರ್ಘ ಸಮಯದಿಂದ ಬೆಳೆದು ಬಂದಿದ್ದು ಹಠಾತ್ತನೆ ಹೋಗಿ ಬಿಡುವುದಿಲ್ಲ. ಇನ್ನು ನೀವು ಕೇಳುವ ಬದಲಾವಣೆಯ ವಿಷಯ. ಅದು ಈಗಿನ ರಾಜಕೀಯಕ್ಕೆ ಸಂಬಂಧಿಸಿದೆ. ರಾಜಕೀಯ ಬದಲಾದ ಹಾಗೆ ಅದರ ಜೊತೆ ಟಿವಿ ಮಾಧ್ಯಮ ಕ್ಷೇತ್ರ ಕೂಡ ಬದಲಾಗುತ್ತದೆ.

► ನೀವು ಮಾಡುತ್ತಿರುವ ವಿಭಿನ್ನ ಪತ್ರಿಕೋದ್ಯಮ ಕೇವಲ ಉನ್ನತ ಶಿಕ್ಷಣ ಪಡೆದ, ಬುದ್ಧಿಜೀವಿ ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಮಾತ್ರ ತಲುಪುತ್ತಿದೆ. ಜನಸಾಮಾನ್ಯರು ಇನ್ನೂ ಟಿವಿ ಚಾನೆಲ್‌ಗಳ ಹಿಂದೆಯೇ ಇದ್ದಾರೆ ಎಂಬ ಅಭಿಪ್ರಾಯವಿದೆ. ಇದನ್ನು ನೀವು ಒಪ್ಪುತ್ತೀರಾ?

  • ಹೌದು. ನಾನು ಈ ಮಾತನ್ನು ಒಪ್ಪುತ್ತೇನೆ. ಆದರೆ ಇದು ಕೂಡ ತಪ್ಪುತಂತ್ರಗಾರಿಕೆ ಎಂದು ನನಗನಿಸುವುದಿಲ್ಲ. ಇತರರ ಮೇಲೆ ಪ್ರಭಾವ ಬೀರುವ ಪ್ರಭಾವೀ, ಸುಶಿಕ್ಷಿತ ಜನರ ಸಣ್ಣ ಗುಂಪನ್ನು ಒಪ್ಪಿಸುವಲ್ಲಿ ನೀವು ಯಶಸ್ವಿಯಾದರೆ ನೀವು ಅರ್ಧ ಯುದ್ಧ ಗೆದ್ದಂತೆ. ಸಮಾಜದ ಉಳಿದ ವರ್ಗ ಈ ಪ್ರಭಾವೀ ವರ್ಗವನ್ನು ಅನುಸರಿಸುತ್ತದೆ. ಅವರ ಮಾರ್ಗದರ್ಶನದಲ್ಲಿ ನಡೆಯುತ್ತದೆ.

 ಜನರು ಕೇವಲ ವಾಟ್ಸ್‌ಆ್ಯಪ್ ಫಾರ್ವರ್ಡ್‌ಗಳು, ಟಿವಿಯಲ್ಲಿ ಬರುವ ಬೊಬ್ಬಿಡುವ ಕಾರ್ಯಕ್ರಮಗಳಲ್ಲೇ ಹೆಚ್ಚು ಆಸಕ್ತರಂತೆ ಕಾಣುತ್ತಿದ್ದಾರೆ. ಅವರಿಗೆ ಗುಣಮಟ್ಟದ ಪತ್ರಿಕೋದ್ಯಮದಲ್ಲಿ ಆಸಕ್ತಿಯೇ ಇದ್ದಂತಿಲ್ಲ. ಅಲ್ಲವೇ? ಹೌದು ಎಂದಾದರೆ ಇದಕ್ಕೆ ಪರಿಹಾರವೇನು?     

  • ಇಲ್ಲ, ಈ ವಾದ ಸಂಪೂರ್ಣ ಸರಿಯಲ್ಲ. ಹೆಚ್ಚಿನ ಜನರು ವಾಟ್ಸ್‌ಆ್ಯಪ್ ಫಾರ್ವರ್ಡ್‌ಗಳು, ಟಿವಿಯಲ್ಲಿ ಬರುವ ಅರ್ಥಹೀನ ಕಾರ್ಯಕ್ರಮಗಳನ್ನೇ ಹೆಚ್ಚು ನೋಡೋದು ಯಾಕೆಂದರೆ ಅವರಿಗೆ ಅವು ಬಹಳ ಸುಲಭವಾಗಿ ಸಿಗುತ್ತವೆ. ಇನ್ನು ನಮ್ಮ ದೇಶದ ಜನರಿಗೆ ಮಾಧ್ಯಮ ಸಾಕ್ಷರತೆ ಕಡಿಮೆಯಿದೆ. ಹಾಗಾಗಿ ವಾಟ್ಸ್‌ಆ್ಯಪ್ ಫಾರ್ವರ್ಡ್‌ಗಳು, ಟಿವಿ ಕಾರ್ಯಕ್ರಮಗಳಲ್ಲಿ ಸಿಗುವ ತಪ್ಪುಮಾಹಿತಿಗಳ ಕಡೆ ಸುಲಭವಾಗಿ ಆಕರ್ಷಿತರಾಗುತ್ತಾರೆ. ಈ ಗಂಭೀರ ಸಮಸ್ಯೆ ಪರಿಹರಿಸಲು ಹಲವು ಆಯಾಮಗಳಲ್ಲಿ ತಿದ್ದುಪಡಿ ಕ್ರಮ ತೆಗೆದುಕೊಳ್ಳಬೇಕಿದೆ.

 2013ರಿಂದ ಪ್ರಾರಂಭವಾದ ಭಾರತೀಯ ಮಾಧ್ಯಮಗಳ ಅಧಃಪತನದ ವೇಗ ಈಗ ಬಹಳ ಹೆಚ್ಚಾಗಿದೆ. ಇದು ಕೊನೆಗೆ ಹೋಗಿ ತಲುಪುವುದು ಎಲ್ಲಿಗೆ? ಭಾರತೀಯರನ್ನು ಇದು ಎಲ್ಲಿಗೆ ತಲುಪಿಸಲಿದೆ? ಇದು ಸರಿಯಾಗುವುದು ಹೇಗೆ? ಯಾವಾಗ?

  • ಮಾಧ್ಯಮಗಳು ಬಹಳ ವೇಗವಾಗಿ ಅಧಃಪತನದ ದಾರಿ ಹಿಡಿದಿವೆ ಎಂಬುದನ್ನು ನಾನು ಭಾಗಶಃ ಒಪ್ಪುತ್ತೇನೆ. ಆದರೆ ಇದರ ಪರಿಣಾಮ ಏನಾಗಲಿದೆ, ಎಲ್ಲಿಗೆ ತಲುಪಲಿದೆ ಎಂಬುದಕ್ಕೆ ಉತ್ತರಿಸಲು ನನಗೆ ಅಸಾಧ್ಯ. ಇವೆಲ್ಲ ಧನಾತ್ಮಕವಾಗಿ ಕೊನೆಯಾಗಲಿ ಎಂದಷ್ಟೇ ಆಶಿಸುತ್ತೇನೆ.

► ಭಾರತೀಯ ಮಾಧ್ಯಮ ಇಷ್ಟು ಬೇಗ ಇಷ್ಟು ಟೊಳ್ಳಾಗಿದ್ದು ಹೇಗೆ ? ಕೇವಲ ದುಡ್ಡಿನಿಂದಲೇ ಇಷ್ಟು ಹಾಳಾಯಿತೇ? ಈ ಅಧಃಪತನಕ್ಕೆ ಮೂಲ ಕಾರಣವೇನು?

  • ಆದಾಯದ ಮೂಲವೇ ಇದಕ್ಕೆ ಮುಖ್ಯ ಕಾರಣ. ಜಾಹೀರಾತು ಆಧಾರಿತ ಆದಾಯ ಮಾದರಿಯಿಂದಾಗಿ ಮಾಧ್ಯಮ ಸಂಸ್ಥೆಗಳು ಸರಕಾರ ಹಾಗೂ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಮುಲಾಜಿಗೆ ಬೀಳುತ್ತವೆ. ಈ ಮಾಧ್ಯಮಗಳು ಆದಾಯಕ್ಕೆ ಸರಕಾರ ಮತ್ತು ಕಂಪೆನಿಗಳನ್ನು ಅವಲಂಬಿಸಿರುವುದರಿಂದ ಜಾಹೀರಾತುದಾರರು ಅವುಗಳನ್ನು ತಮಗೆ ಬೇಕಾದಂತೆ ಬಳಸುತ್ತಾರೆ. ಇನ್ನೊಂದು ಮುಖ್ಯ ಕಾರಣ ಜಾತಿ ಮನಸ್ಥಿತಿ. ಆ್ಯಂಕರ್‌ಗಳು ಹಾಗೂ ಪತ್ರಕರ್ತರೊಳಗಿನ ಕೋಮುವಾದ, ಆಡಳಿತ ಮಂಡಳಿಯ ಸಂಕುಚಿತ ಯೋಚನೆಗಳೂ ಈ ಅಧಃಪತನಕ್ಕೆ ಕಾರಣವಾಗಿವೆ.

 ನ್ಯೂಸ್ ಲಾಂಡ್ರಿ ಮೇಲೆ ಕೇಸ್‌ಗಳು, ಯೂಟ್ಯೂಬ್ ನಿರ್ಬಂಧಗಳು ಇತ್ಯಾದಿಗಳ ಮೂಲಕ ಹಲವು ರೀತಿಯಲ್ಲಿ ದಾಳಿಯಾಗುತ್ತಿವೆ. ಇದನ್ನು ನೀವು ಹೇಗೆ ಎದುರಿಸುತ್ತೀರಿ ?

  • ನಾವು ಕಾನೂನು ಬಾಹಿರವಾಗಿ ಏನನ್ನೂ ಮಾಡುತ್ತಿಲ್ಲ. ಪತ್ರಿಕೋದ್ಯಮ ಅಪರಾಧವಲ್ಲ. ನಮಗೆ ಹೇಗೆ ತಡೆಯೊಡ್ಡಿದರೂ ನಾವು ಅದನ್ನು ಕಾನೂನು ಪ್ರಕಾರ ಎದುರಿಸುತ್ತೇವೆ. ಭಾರತದಲ್ಲಿ ಸದೃಢ ನ್ಯಾಯಾಂಗ ವ್ಯವಸ್ಥೆಯಿದೆ. ಅದರ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ.

► ವಸ್ತುನಿಷ್ಠ ಪತ್ರಕರ್ತರಿಗೆ ಮತ್ತು ಮಾಧ್ಯಮ ಸಂಸ್ಥೆಗಳಿಗೆ ಯೂಟ್ಯೂಬ್ ಹಾಗೂ ಫೇಸ್‌ಬುಕ್ ನಂತಹ ಬೇರೆ ಪರ್ಯಾಯ ಸ್ವತಂತ್ರ ವೇದಿಕೆಗಳ ಅಗತ್ಯವಿದೆಯೇ? ಯಾವುದೇ ರಾಜಕೀಯ ಮತ್ತು ಇತರ ಪ್ರಭಾವಕ್ಕೆ ಮಣಿಯದ ಅಂತಹದೊಂದು ವೇದಿಕೆಯನ್ನು ನಿರ್ಮಿಸುವುದು ತಾಂತ್ರಿಕವಾಗಿ, ಆರ್ಥಿಕವಾಗಿ ಸಾಧ್ಯವೇ?

  • ವೈಯಕ್ತಿಕವಾಗಿ ಅಂತಹದೊಂದು ಬೃಹತ್ ಹೊಸ ಪರ್ಯಾಯವೇದಿಕೆ ನಿರ್ಮಾಣ ಸಾಧ್ಯ ಎಂದು ನನಗನಿಸುವುದಿಲ್ಲ. ಕೇವಲ ಸರಕಾರ ಅಥವಾ ದೊಡ್ಡ ಕಾರ್ಪೊರೇಷನ್‌ಗಳು ಮಾತ್ರ ಇದನ್ನು ಮಾಡಲು ಸಾಧ್ಯ. ಹಾಗೆಯೇ ಇದನ್ನು ಒಂದು ನಿರ್ದಿಷ್ಟ ವರ್ಗಕ್ಕೆ ಅಥವಾ ಕ್ಷೇತ್ರಕ್ಕೆ ಎಂದು ಸ್ಥಾಪಿಸುವುದೂ ಅಸಾಧ್ಯ. ಅದರ ಬದಲು ಈಗಿರುವ ವೇದಿಕೆಗಳಲ್ಲಿ ಸುಧಾರಣೆ ತರುವುದು, ಅವುಗಳ ಉತ್ತರದಾಯಿತ್ವ ಹೆಚ್ಚಿಸುವುದು ನಮ್ಮ ಆದ್ಯತೆಯಾಗಬೇಕು.

► ಟಿವಿ ಚಾನೆಲ್‌ಗಳಲ್ಲಿ ದ್ವೇಷ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡುವ ಬಗ್ಗೆ ಎಷ್ಟು ಟೀಕಿಸಿದರೂ ಕಾರ್ಪೊರೇಟ್ ಕಂಪೆನಿಗಳು ಜಾಹೀರಾತು ನೀಡುವುದನ್ನು ನಿಲ್ಲಿಸುತ್ತಿಲ್ಲ. ಮಾನವೀಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧವಾಗಿರುವ ಚಾನೆಲ್ ಗಳಲ್ಲಿ ಮಾತ್ರ ಜಾಹೀರಾತು ನೀಡಬೇಕು ಎಂದು ಅರಿವು ಮೂಡಿಸುವುದು ಸಾಧ್ಯವೇ?

  • ನಾವು ನ್ಯೂಸ್ ಲಾಂಡ್ರಿಯಲ್ಲಿ ಇಂತಹ ದ್ವೇಷ ಹರಡುವ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಅದನ್ನು ನೋಡಿ ಜಾಹೀರಾತು ನೀಡುವವರು ಜಾಗೃತರಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶ. ಅದು ಶೇ.100 ಪರಿಣಾಮ ಬೀರಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅದಕ್ಕೆ ಪ್ರತಿಕ್ರಿಯೆಯಂತೂ ಇದೆ. ಕೆಲವು ಪ್ರಾಯೋಜಕರು ತಮ್ಮ ಪ್ರಾಯೋಜಕತ್ವ ಹಿಂಪಡೆದಿದ್ದಾರೆ. ಜಾಹೀರಾತು ಒಪ್ಪಂದ ಸಂಪೂರ್ಣ ರದ್ದಾಗದಿದ್ದರೂ ಈ ಬಗ್ಗೆ ಮಾಧ್ಯಮಗಳ ಮೇಲೆ ಸ್ವಲ್ಪ ಒತ್ತಡವಂತೂ ಬೀಳುತ್ತದೆ.

► ನ್ಯೂಸ್ ಲಾಂಡ್ರಿಯಂತಹ ಮಾಧ್ಯಮ ಸಂಸ್ಥೆಯನ್ನು ಕೇವಲ ವೀಕ್ಷಕರ, ಓದುಗರ ಚಂದಾ ಪಡೆದು ನಡೆಸುವುದು ಸಾಧ್ಯವೇ? ನಿಮ್ಮ ಅನುಭವ ತಿಳಿಸಿ.

  • ನ್ಯೂಸ್ ಲಾಂಡ್ರಿಯ ಯಶಸ್ಸು ಎಲ್ಲರಿಗೂ ಮಾದರಿಯಾಗಿದೆ.ಮಾಧ್ಯಮಗಳನ್ನು ಓದುಗರ, ವೀಕ್ಷಕರ ಚಂದಾ ಹಣದಿಂದ ಮಾತ್ರ ಭವಿಷ್ಯದಲ್ಲಿ ನಡೆಸಲು ಸಾಧ್ಯ. ಪತ್ರಿಕೋದ್ಯಮ ಜನಪರ ಆಗಬೇಕೆಂದರೆ ಅದು ಜಾಹೀರಾತು ಮುಕ್ತವಾಗಬೇಕು. ಅದೊಂದೇ ದಾರಿ.

 ಚಂದಾ ಪಡೆದು ಮಾಧ್ಯಮ ನಡೆಸುವ ಮಾದರಿ ದೀರ್ಘಾವಧಿ ನಡೆಯಲು ಸಾಧ್ಯವೇ ?

  • ಖಂಡಿತ. ಇರುವುದು ಅದೊಂದೇ ದಾರಿ.

► ನಿಮ್ಮ ವೆಬ್‌ಸೈಟ್ ಹಾಗೂ ಯೂಟ್ಯೂಬ್ ಚಾನೆಲ್‌ನ ಸುದ್ದಿ, ಮಾಹಿತಿಗಳನ್ನು ಓದುತ್ತಾ, ನೋಡುತ್ತಾ ಇದ್ದರೂ ನಿಮಗೆ ಒಂದು ಪೈಸೆಯೂ ಕೊಡದ ಬಹಳ ದೊಡ್ಡ ಸಂಖ್ಯೆಯ ಜನರಿದ್ದಾರೆ. ಭಾರತದ ಓದುಗರು, ವೀಕ್ಷಕರಲ್ಲಿ ಸುದ್ದಿಗೆ ಹಣ ಪಾವತಿಸುವ ಸಂಸ್ಕೃತಿ ಬೆಳೆಸುವುದು ಹೇಗೆ?

  • ನಮ್ಮಲ್ಲಿ ಮೂರು ಸ್ತರದ ವ್ಯವಸ್ಥೆಯಿದೆ. ಎಲ್ಲಕ್ಕಿಂತ ಮೇಲೆ ಇರುವುದು ಎಲ್ಲರಿಗೂ ಉಚಿತವಾಗಿ ಸಿಗುವ ಮಾಹಿತಿ, ವೀಡಿಯೊಗಳು. ಅಲ್ಲಿಂದ ಕೆಲವರಾದರೂ ಇನ್ನೊಂದು ಹಂತಕ್ಕೆ ಬಂದು ಹಣ ಪಾವತಿಸುತ್ತಾರೆ ಎಂಬುದು ನಮ್ಮ ನಿರೀಕ್ಷೆ. ಹಾಗೆ ಹಣ ಪಾವತಿಸುವವರಿಗೆ ನಾವು ವಿಶೇಷ ಸುದ್ದಿ, ಮಾಹಿತಿ, ವಿಶ್ಲೇಷಣೆ ಒದಗಿಸುತ್ತೇವೆ.

ಈಗ ಪತ್ರಿಕೋದ್ಯಮಕ್ಕೆ ಬರುತ್ತಿರುವ ಯುವಜನತೆಗೆ ಈಗಿನ ಮಾಧ್ಯಮದಲ್ಲಿರುವ ಟೊಳ್ಳುತನದ ಅರಿವಿದೆಯೇ?

  • ಮಾಧ್ಯಮಕ್ಕೆ ಒಳ್ಳೆಯ ಉದ್ದೇಶ ಇಟ್ಟುಕೊಂಡು ಬರುವವರೂ ಇದ್ದಾರೆ. ಇಲ್ಲಿನ ಮಾರುಕಟ್ಟೆಯೂ ಬಹಳ ಪಾಠ ಕಲಿಸುತ್ತದೆ. ಕೊನೆಗೆ ಕೆಲವು ಒಳ್ಳೆಯವರು ಖಂಡಿತ ಉಳಿಯುತ್ತಾರೆ.

ಭಾರತೀಯ ಓದುಗರು ಹಾೂ ವೀಕ್ಷಕರಿಗೆ ನಿಮ್ಮ ಸಲಹೆಯೇನು?

  • ಸದಾ ವಿಮರ್ಶಾತ್ಮಕ ಚಿಂತನೆ ಬೆಳೆಸಿಕೊಳ್ಳಿ.

Writer - ಸಂದರ್ಶನ: ಡಾ. ಕೌಸರ್ ಬಾನು

contributor

Editor - ಸಂದರ್ಶನ: ಡಾ. ಕೌಸರ್ ಬಾನು

contributor

Similar News

ಬೀಗ