ಮ್ಯಾನ್ಮಾರ್ ಮೇಲೆ ಇನ್ನಷ್ಟು ನಿರ್ಬಂಧಕ್ಕೆ ಸಿದ್ಧ: ಯುರೋಪಿಯನ್ ಯೂನಿಯನ್ ಘೋಷಣೆ

Update: 2021-12-30 16:58 GMT
ಮ್ಯಾನ್ಮಾರ್‌ನ ಸೇನಾ ಮುಖಂಡ ಮಿನ್ ಆಂಗ್ 

ಬ್ರಸೆಲ್ಸ್, ಡಿ.30: ಡಿಸೆಂಬರ್ 24ರಂದು ಮ್ಯಾನ್ಮಾರ್ ನ ಕಯಾಹ್ ರಾಜ್ಯದಲ್ಲಿ ಸೇನಾಪಡೆಯ ಕಾರ್ಯಾಚರಣೆಯಲ್ಲಿ ಕನಿಷ್ಟ 35 ಮಂದಿ ಮೃತಪಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಮ್ಯಾನ್ಮಾರ್ ನ ಮೇಲೆ ಇನ್ನಷ್ಟು ನಿರ್ಬಂಧ ವಿಧಿಸಲು ಸಿದ್ಧವಿರುವುದಾಗಿ ಯುರೋಪಿಯನ್ ಯೂನಿಯನ್ ಘೋಷಿಸಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ಮ್ಯಾನ್ಮಾರ್ ಗೆ ಅಂತರಾಷ್ಟ್ರೀಯ ಶಸ್ತ್ರಾಸ್ತ್ರ ನಿರ್ಬಂಧವನ್ನೂ ವಿಧಿಸಬೇಕು ಎಂದು ಯುರೋಪಿಯನ್ ಯೂನಿಯನ್ನ ವಿದೇಶ ವ್ಯವಹಾರ ಇಲಾಖೆಯ ಉನ್ನತ ಪ್ರತಿನಿಧಿ ಜೋಸೆಫ್ ಬೊರೆಲ್ ಆಗ್ರಹಿಸಿದ್ದಾರೆ. ಪೂರ್ವದ ಕಯಾಹ್ ರಾಜ್ಯದಲ್ಲಿ ಸೇನೆಯ ಕಾರ್ಯಾಚರಣೆಯಲ್ಲಿ ಮಕ್ಕಳು, ಮಹಿಳೆಯರ ಸಹಿತ ಕನಿಷ್ಟ 35 ಮಂದಿ ಮೃತರಾಗಿದ್ದರು. ಬಳಿಕ ಮೃತದೇಹಗಳನ್ನು ಸೇನೆ ಸುಟ್ಟುಹಾಕಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಹಾಗೂ ಮ್ಯಾನ್ಮಾರ್ ಸಾಕ್ಷಿಗಳ ಮೇಲ್ವಿಚಾರಣಾ ಗುಂಪು ಆರೋಪಿಸಿತ್ತು. ಆದರೆ ಇದನ್ನು ನಿರಾಕರಿಸಿರುವ ಸೇನೆ , ವಿಪಕ್ಷಗಳ ಬೆಂಬಲಿತ ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಹತ್ಯೆಗೈದಿರುವುದಾಗಿ ಹೇಳಿದೆ.

ಮ್ಯಾನ್ಮಾರ್‌ನಲ್ಲಿ ಸೇನೆಯ ಪ್ರಚೋದನೆಯಿಂದ ನಡೆದ ಭಯಾನಕ ಹಿಂಸಾಚಾರ ಇದಾಗಿದೆ. ಈ ಪ್ರಕರಣಕ್ಕೆ ಹೊಣೆಗಾರರನ್ನು ಗುರುತಿಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಮ್ಯಾನ್ಮಾರ್‌ನಲ್ಲಿ ಹಿಂಸಾಚಾರ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ, ಶಸ್ತ್ರಾಸ್ತ್ರ ನಿರ್ಬಂಧ ಸಹಿತ ಅಂತರಾಷ್ಟ್ರೀಯ ನಿರ್ಬಂಧ ಕ್ರಮವನ್ನು ಹೆಚ್ಚಿಸುವ ಅಗತ್ಯವಿದೆ. ಸೇನಾಡಳಿತದ ವಿರುದ್ಧ ಇನ್ನಷ್ಟು ನಿರ್ಬಂಧ ಜಾರಿಗೊಳಿಸಲು ಯುರೋಪಿಯನ್ ಯೂನಿಯನ್ ಕೂಡಾ ಸಿದ್ಧವಿದೆ ಎಂದು ಬೊರೆಲ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಹಾಗೂ ಅಮೆರಿಕವೂ ಮ್ಯಾನ್ಮಾರ್ ನ ಸೇನಾಡಳಿತವನ್ನು ಖಂಡಿಸಿದೆ. ಫೆಬ್ರವರಿ 1ರಂದು ಮ್ಯಾನ್ಮಾರ್ ನ ಸೇನೆ ಕ್ಷಿಪ್ರಕ್ರಾಂತಿ ನಡೆಸಿ ಮಾಜಿ ನಾಯಕಿ ಆಂಗ್‌ಸಾನ್ ಸೂಕಿ  ಅವರ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾದ ಸರಕಾರವನ್ನು ಪದಚ್ಯುತಗೊಳಿಸಿದೆ. ಅಂದಿನಿಂದಲೇ 27 ಸದಸ್ಯರ ಯುರೋಪಿಯನ್ ಯೂನಿಯನ್ ಮ್ಯಾನ್ಮಾರ್ ನ  ಸೇನೆಯ ವಿರುದ್ಧ ಉದ್ದೇಶಿತ ನಿರ್ಬಂಧ ವಿಧಿಸಿದೆ. ಅಲ್ಲದೆ, ಮ್ಯಾನ್ಮಾರ್ ನ  ಅಭಿವೃದ್ಧಿ ಯೋಜನೆಗಳಿಗೆ ಘೋಷಿಸಿದ ಆರ್ಥಿಕ ನೆರವನ್ನೂ ಸ್ಥಗಿತಗೊಳಿಸಿದೆ.

ಕ್ಷಿಪ್ರಕ್ರಾಂತಿ ನಡೆದಂದಿನಿಂದ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 1,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು 11000ಕ್ಕೂ ಅಧಿಕ ಜನರನ್ನು ಜೈಲಿನಲ್ಲಿರಿಸಲಾಗಿದೆ ಎಂದು ರಾಜಕೀಯ ಕೈದಿಗಳ ಹಕ್ಕುಗಳಿಗೆ ನೆರವಾಗುವ ಸಂಸ್ಥೆಯ ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News