×
Ad

ಹಾಂಕಾಂಗ್: ಬಂಧಿತ ಸುದ್ಧಿಸಂಪಾದಕರ ವಿರುದ್ಧ ದೇಶದ್ರೋಹ ಆರೋಪ ದಾಖಲು

Update: 2021-12-30 22:40 IST
ಸಾಂದರ್ಭಿಕ ಚಿತ್ರ:PTI

ಹಾಂಕಾಂಗ್, ಡಿ.30: ಹಾಂಕಾಂಗ್‌ನಲ್ಲಿ ಬಂಧನದಲ್ಲಿರುವ ಪ್ರಜಾಪ್ರಭುತ್ವ ಪರ ಮಾಧ್ಯಮ ಸಂಸ್ಥೆ ‘ಸ್ಟ್ಯಾಂಡ್ ನ್ಯೂಸ್’ ನ ಇಬ್ಬರು ಮಾಜಿ ಸುದ್ಧಿಸಂಪಾದಕರ ವಿರುದ್ಧ ದೇಶದ್ರೋಹಿ ವಿಷಯಗಳನ್ನು ಪ್ರಕಟಿಸಲು ಸಂಚು ರೂಪಿಸಿದ ದೋಷಾರೋಪ ಹೊರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾಧ್ಯಮ ಸಂಸ್ಥೆಯ ಕಚೇರಿಗೆ ದಾಳಿ ನಡೆಸಿದ್ದ ಪೊಲೀಸರು ಹಾಲಿ ಮತ್ತು ಮಾಜಿ ಹಿರಿಯ ಉಪಸಂಪಾದಕರು, ಆಡಳಿತ ಮಂಡಳಿಯ ಮಾಜಿ ಸದಸ್ಯರ ಸಹಿತ 7 ಮಂದಿಯನ್ನು ಬಂಧಿಸಿದ್ದರು. ಸಂಸ್ಥೆಯ ಆಸ್ತಿಯನ್ನು ಸ್ಥಂಭನಗೊಳಿಸಿರುವುದಾಗಿ ಬುಧವಾರ ಅಧಿಕಾರಿಗಳು ಘೋಷಿಸಿದ್ದಾರೆ. ಪ್ರಧಾನ ಸಂಪಾದಕ ಪ್ಯಾಟ್ರಿಕ್ ಲ್ಯಾಮ್, ಖ್ಯಾತ ಗಾಯಕ, ಹೋರಾಟಗಾರ ಡೆನಿಸ್ ಹೊ, ಮಾಜಿ ಸಂಸದೆ ಮಾರ್ಗರೇಟ್ ಎನ್ಜಿ ಸಹಿತ ಆಡಳಿತ ಮಂಡಳಿಯ ಮಾಜಿ ಸದಸ್ಯರು ಬಂಧನದಲ್ಲಿದ್ದಾರೆ. ಆರೋಪ ಸಾಬೀತಾದರೆ 2 ವರ್ಷದವರೆಗೆ ಜೈಲುಶಿಕ್ಷೆ, 640 ಡಾಲರ್ ಮೊತ್ತದ ದಂಡ ವಿಧಿಸಲು ಅವಕಾಶವಿದೆ. 2014ರಲ್ಲಿ ಆರಂಭವಾದ ಸ್ಟ್ಯಾಂಡ್ ನ್ಯೂಸ್ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಧ್ವನಿ ಎತ್ತುವ ಪ್ರಮುಖ ಮಾಧ್ಯಮ ಸಂಸ್ಥೆಯಾಗಿದೆ.

ಹಾಂಕಾಂಗ್‌ನಲ್ಲಿ ಚೀನಾವು ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೊಳಿಸಿದಂದಿನಿಂದ ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಂಡಿರುವುದನ್ನು ಈ ಪ್ರಕರಣ ಸಂಕೇತಿಸುತ್ತದೆ ಎಂದು ಅಮೆರಿಕ, ಕೆನಡಾ, ಯುರೋಪಿಯನ್ ಯೂನಿಯನ್ ಸಹಿತ ಹಲವು ದೇಶಗಳು ಹಾಗೂ ಮಾಧ್ಯಮ ಸಂಘಟನೆಗಳು ಖಂಡಿಸಿವೆ.

ಇಬ್ಬರು ವ್ಯಕ್ತಿಗಳು ಹಾಗೂ ಆನ್‌ಲೈನ್ ಮಾಧ್ಯಮ ಸಂಸ್ಥೆಯ ವಿರುದ್ಧ ದೇಶದ್ರೋಹಿ ವಿಷಯಗಳನ್ನು ಪ್ರಕಟಿಸಲು ಸಂಚು ಹೂಡಿದ ಪ್ರಕರಣ ದಾಖಲಿಸಲಾಗಿದೆ. ಇತರ ಕೆಲವರನ್ನು ಇನ್ನಷ್ಟು ವಿಚಾರಣೆ ನಡೆಸುವ ಉದ್ದೇಶದಿಂದ ಬಂಧಿಸಲಾಗಿದೆ ಎಂದು ನ್ಯಾಷನಲ್ ಸೆಕ್ಯುರಿಟಿ ಡಿಪಾರ್ಟ್‌ಮೆಂಟ್ ಆಫ್ ಪೊಲೀಸ್ ಹೇಳಿದೆ.

ಬಂಧಿತ ಪತ್ರಕರ್ತರ ಬಿಡುಗಡೆಗೆ ಅಮೆರಿಕ ಆಗ್ರಹ

ಸ್ಟ್ಯಾಂಡ್ ನ್ಯೂಸ್ ಮಾಧ್ಯಮ ಸಂಸ್ಥೆಯ ಬಂಧಿತ ಸಿಬಂದಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಹಾಂಕಾಂಗ್ ಅಧಿಕಾರಿಗಳನ್ನು ಅಮೆರಿಕ ಆಗ್ರಹಿಸಿದೆ.

ಹಾಂಕಾಂಗ್‌ನ ಮುಕ್ತ ಮತ್ತು ಸ್ವತಂತ್ರ ಮಾಧ್ಯಮಗಳನ್ನು ಗುರಿಯಾಗಿಸಿ ನಡೆಸುವ ದಾಳಿಯನ್ನು ಸ್ಥಗಿತಗೊಳಿಸುವಂತೆ ಹಾಗೂ ಪೊಲೀಸರ ದಾಳಿಯಲ್ಲಿ ಅನ್ಯಾಯವಾಗಿ ಬಂಧಿಸಲ್ಪಟ್ಟು ಆರೋಪಕ್ಕೆ ಗುರಿಯಾಗಿರುವ ಪತ್ರಕರ್ತರು ಹಾಗೂ ಮಾಧ್ಯಮ ಅಧಿಕಾರಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಚೀನಾ ಮತ್ತು ಹಾಂಕಾಂಗ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಸ್ವತಂತ್ರ ಮಾಧ್ಯಮದ ಧ್ವನಿಯನ್ನು ಹತ್ತಿಕ್ಕುವ ಮೂಲಕ ಚೀನಾ ಹಾಗೂ ಸ್ಥಳೀಯ ಆಡಳಿತವು ಹಾಂಕಾಂಗ್ನ ವಿಶ್ವಾಸಾರ್ಹತೆ ಮತ್ತು ಕಾರ್ಯಸಾಧ್ಯತೆಯನ್ನು ದುರ್ಬಲಗೊಳಿಸಿದೆ. ಸತ್ಯಕ್ಕೆ ಹೆದರದ ಆತ್ಮವಿಶ್ವಾಸದ ಸರಕಾರವು ಮುಕ್ತ ಮಾಧ್ಯಮ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತದೆ. ಪತ್ರಿಕೋದ್ಯಮವು ದೇಶದ್ರೋಹವಲ್ಲ ಎಂದು ಬ್ಲಿಂಕೆನ್ ಹೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಹಾಂಕಾಂಗ್ ಮುಖಂಡ ಕೆರೀ ಲ್ಯಾಮ್, ದಾಳಿ ಮತ್ತು ಬಂಧನ ಮಾಧ್ಯಮ ಉದ್ಯಮವನ್ನು ಗುರಿಯಾಗಿಸಿಕೊಂಡಿರಲಿಲ್ಲ. ಬಂಧಿತ ವ್ಯಕ್ತಿಗಳನ್ನು ಬಿಡುಗಡೆಗೊಳಿಸುವಂತೆ ವಿದೇಶಿ ಸರಕಾರಗಳ ಆಗ್ರಹ ಕಾನೂನಿಗೆ ವಿರುದ್ಧವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News