×
Ad

ಇಸ್ರೇಲ್ ಜೈಲಿನಲ್ಲಿರುವ ಪೆಲೆಸ್ತೀನ್ ಕೈದಿಗಳಿಗೆ ಸಾಮೂಹಿಕ ಶಿಕ್ಷೆಯ ಸಾಧ್ಯತೆ: ವರದಿ

Update: 2021-12-30 23:08 IST
ಸಾಂದರ್ಭಿಕ ಚಿತ್ರ:PTI

ರಮಲ್ಲಾ, ಡಿ.30: ಇಸ್ರೇಲ್ ನ ಹಲವು ಜೈಲುಗಳಲ್ಲಿ ಪೆಲೆಸ್ತೀನ್ ಕೈದಿಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಇವರು ಸಾಮೂಹಿಕ ಶಿಕ್ಷೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು ಕೈದಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುವ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಬಂಧಿತರಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದು ಇವರು ಯಾವ ಜೈಲಿನಲ್ಲಿದ್ದಾರೆ ಎಂಬ ಮಾಹಿತಿಯಿಲ್ಲ. ಪೆಲೆಸ್ತೀನ್ ಕೈದಿಗಳು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದಾರೆ ಎಂದು ರಮಲ್ಲಾ ಮೂಲದ ಅದ್ದಾಮಿರ್(ಕೈದಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುವ ಸಂಘಟನೆ)ನ ಅಂತರಾಷ್ಟ್ರೀಯ ವಕಾಲತ್ತು ಅಧಿಕಾರಿ ಮಿಲೆನಾ ಅನ್ಸಾರಿ ಹೇಳಿದ್ದಾರೆ. ಸಾಮೂಹಿಕ ಶಿಕ್ಷೆಯ ಕ್ರಮದಿಂದಾಗಿ ಇಸ್ರೇಲ್ ಜೈಲಿನ ಹಮಾಸ್ ಕೈದಿಗಳ ವಿಭಾಗದಲ್ಲಿರುವ ಕೈದಿಗಳ ಸಂಖ್ಯೆ ನಿರಂತರ ಕಡಿಮೆಯಾಗುತ್ತಿದೆ ಎಂದವರು ಹೇಳಿದ್ದಾರೆ.

ಡಿ.14ರಂದು ರಮಲ್ಲಾದ ಉತ್ತರದಲ್ಲಿರುವ ದಮಾನ್ ಜೈಲಿನಲ್ಲಿ ಸಂಜೆ ವೇಳೆ 3 ಮಹಿಳಾ ಕೈದಿಗಳ ಜತೆ ಕೊಠಡಿಯಲ್ಲಿದ್ದ ಇತರ ಕೈದಿಗಳ ಪ್ರತಿನಿಧಿಗಳನ್ನು ಕೊಠಡಿ ಬಿಟ್ಟು ತೆರಳುವಂತೆ ಅಧಿಕಾರಿಗಳು ಸೂಚಿಸಿದಾಗ ಹೊರಗೆ ತೀವ್ರ ಚಳಿ ಇರುವುದರಿಂದ ಹೊರಗೆ ಹೋಗಲು ಅವರು ನಿರಾಕರಿಸಿದರು. ಆಗ ಆ ಕೊಠಡಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು ಮತ್ತು ಅವರನ್ನು ಥಳಿಸಿ ಓರ್ವ ಕೈದಿಯನ್ನು ಅಲ್ಲಿಂದ ಬಲವಂತವಾಗಿ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದನ್ನು ಪ್ರತಿಭಟಿಸಿದ ಇತರ ಇಬ್ಬರನ್ನು ದಿನವಿಡೀ ಏಕಾಂತ ವಾಸಕ್ಕೆ ಒಳಪಡಿಸಲಾಗಿದೆ ಎಂದು ಅದ್ದಾಮಿರ್ ಹೇಳಿದೆ.

ತಮ್ಮನ್ನು ಮತ್ತೆ ಮೊದಲಿನ ಕೊಠಡಿಗೆ ಮರಳಿಸುವವರೆಗೆ ಉಪವಾಸ ಕೂರುವುದಾಗಿ ಮಹಿಳಾ ಕೈದಿಗಳು ಹೇಳಿದ್ದಾರೆ. ಬಳಿಕ ಜೈಲಿನ ವಿವಿಧ ಕೊಠಡಿಗೆ ದಾಳಿ ನಡೆಸಿದ ಇಸ್ರೇಲ್‌ನ ವಿಶೇಷ ಪಡೆ ಈ ಕಾರ್ಯಾಚರಣೆ ಸಂದರ್ಭ ಹಲವು ಮಹಿಳಾ ಕೈದಿಗಳನ್ನು ಥಳಿಸಿದಾಗ ಕೆಲವರು ಪ್ರಜ್ಞೆ ತಪ್ಪಿ ಬಿದ್ದರು. ಕೆಲವರ ಶಿರೋವಸ್ತ್ರವನ್ನು ಬಲವಂತವಾಗಿ ತೆಗೆಸಲಾಗಿದೆ ಎಂದು ಪೆಲೆಸ್ತೀನ್ ಕೈದಿಗಳ ಸಂಸ್ಥೆ(ಪಿಪಿಎಸ್) ಹೇಳಿದೆ.

ಈ ಮಾಹಿತಿ ದಕ್ಷಿಣ ಇಸ್ರೇಲ್ ನ ನಫಾ ಜೈಲಿನ ಕೈದಿಗಳಿಗೆ ತಲುಪಿದ ಬಳಿಕ, ಹಮಾಸ್ನೊಂದಿಗೆ ಗುರುತಿಸಿಕೊಂಡಿದ್ದ ಪೆಲೆಸ್ತೀನ್ ಕೈದಿಯೊಬ್ಬ ಕೃತಕವಾಗಿ ತಯಾರಿಸಿದ ಚೂರಿಯಿಂದ ಇಸ್ರೇಲ್ ಜೈಲು ಅಧಿಕಾರಿಯ ಮುಖಕ್ಕೆ ತಿವಿದಿದ್ದಾನೆ ಎಂದು ಇಸ್ರೇಲ್ ಬಂಧೀಖಾನೆ ಇಲಾಖೆ ಹೇಳಿದೆ. ಮಹಿಳಾ ಕೈದಿಗಳ ದುಸ್ಥಿತಿಯ ಕುರಿತ ಮಾಹಿತಿ ಕೇಳಿದ ಬಳಿಕದ ಸಹಜ ಪ್ರತಿಕ್ರಿಯೆ ಇದಾಗಿದೆ ಎಂದು ಹಮಾಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News