ಸುಡಾನ್: ವಿಶ್ವಸಂಸ್ಥೆಯ ಆಹಾರನಿಧಿ ಉಗ್ರಾಣ ಲೂಟಿ; ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿ

Update: 2021-12-30 17:52 GMT

ಖರ್ಟೌಮ್, ಡಿ.30: ಸುಡಾನ್‌ನ ನಾರ್ಥ್ ದರ್ಫೂರ್ ರಾಜ್ಯದಲ್ಲಿರುವ ವಿಶ್ವ ಆಹಾರ ನಿಧಿಯ ಉಗ್ರಾಣಕ್ಕೆ ಮತ್ತು ಈ ಹಿಂದೆ ಶಾಂತಿಪಾಲನಾ ತಂಡ ಬಳಸುತ್ತಿದ್ದ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿದ್ದ ಆಹಾರಧಾನ್ಯಗಳನ್ನು ಲೂಟಿ ಮಾಡಿದ್ದು, ಈ ಘಟನೆಯ ಬಳಿಕ ಅಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ನಾರ್ಥ್ ದರ್ಫೂರ್ ರಾಜ್ಯದ ರಾಜಧಾನಿ ಎಲ್ ಫಾಶೆರ್‌ನಲ್ಲಿನ ಉಗ್ರಾಣಕ್ಕೆ ನುಗ್ಗಿದ ಅಪರಿಚಿತ ಬಂದೂಕುಧಾರಿಗಳು 1,700 ಟನ್‌ಗೂ ಅಧಿಕ ಆಹಾರ ಧಾನ್ಯವನ್ನು ಲೂಟಿ ಮಾಡಿದ್ದಾರೆ. ಈ ಪ್ರದೇಶದ 7,30,000 ಬಡ ಜನರಿಗೆ ಒಂದು ತಿಂಗಳ ಬಳಕೆಗೆ ಈ ಆಹಾರ ಧಾನ್ಯ ಬಳಕೆಯಾಗಬೇಕಿತ್ತು ಎಂದು ವಿಶ್ವಸಂಸ್ಥೆ ಹೇಳಿದೆ. ಸುಡಾನ್‌ನ ಪ್ರತೀ 3 ಪ್ರಜೆಗಳಲ್ಲಿ ಒಬ್ಬನಿಗೆ ಆಹಾರದ ಕೊರತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ದಾಸ್ತಾನಿಟ್ಟ ಆಹಾರ ಧಾನ್ಯಗಳು ಲೂಟಿಯಾಗಿರುವುದು ಅಗತ್ಯವುಳ್ಳವರಿಗೆ ನೆರವು ಒದಗಿಸುವ ನಮ್ಮ ಉದ್ದೇಶಕ್ಕೆ ತೊಡಕುಂಟು ಮಾಡಿದೆ. ಸುಡಾನ್ ಆದ್ಯಂತ ಮಾನವೀಯ ನೆರವಿನ ಕಚೇರಿಯ ಆವರಣಗಳಲ್ಲಿ ಭದ್ರತೆ ಬಿಗಿಗೊಳಿಸುವಂತೆ ಸರಕಾರವನ್ನು ಆಗ್ರಹಿಸುವುದಾಗಿ ವಿಶ್ವಸಂಸ್ಥೆ ಮಾನವೀಯ ನೆರವಿನ ಸಂಯೋಜಕಿ ಖರ್ಡಿಯಾಟ್ ಲೊನಾಡಿಯೆ ಹೇಳಿದ್ದಾರೆ.

ಉಗ್ರಾಣದ ಬಳಿ ಭೀಕರ ಗುಂಡಿನ ಚಕಮಕಿ ಕೇಳಿಸಿದೆ ಎಂದು ಸ್ಥಳೀಯರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಇದೊಂದು ಬರ್ಬರ ಕೃತ್ಯವಾಗಿದ್ದು ಇದಕ್ಕೆ ಜವಾಬ್ದಾರರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದಾರ್ಫುರ್ ಗವರ್ನರ್ ಮಿನಿ ಮಿನಾವಿ ಟ್ವೀಟ್ ಮಾಡಿದ್ದಾರೆ. ಆಹಾರ ಧಾನ್ಯ ಲೂಟಿ ಮಾಡಿರುವುದನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಖಂಡಿಸಿದ್ದಾರೆ. 1,700 ಟನ್‌ಗಳಷ್ಟು ಆಹಾರ ಧಾನ್ಯಗಳನ್ನು ಲೂಟಿ ಮಾಡಲಾಗಿದೆ. ಈ ಧಾನ್ಯವನ್ನು ಕಡುಬಡವರಿಗೆ ನೀಡಲೆಂದು ದೇಣಿಗೆ ನೀಡಲಾಗಿತ್ತು ಎಂದು ಹೇಳಿರುವ ಅವರು, ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಿ, ವಿಶ್ವಸಂಸ್ಥೆಯ ಮಾನವೀಯ ನೆರವಿನ ಯೋಜನೆ ಸುಸೂತ್ರವಾಗಿ ಮತ್ತು ಸುರಕ್ಷಿತ ರೀತಿಯಲ್ಲಿ ಮುಂದುವರಿಯಲು ವ್ಯವಸ್ಥೆ ಮಾಡುವಂತೆ ಸುಡಾನ್ ಸರಕಾರಕ್ಕೆ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News