ವಡ್ಡರ್ಸೆ ಬಿತ್ತಿದ್ದ ಭರವಸೆಯ ಬೀಜ ‘ಮುಂಗಾರು’

Update: 2021-12-31 06:12 GMT

ಮೂಲತಃ ದಕ್ಷಿಣ ಕನ್ನಡದವರಾದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ನಾಡಿನ ಜೀವಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು. ಮುಂಗಾರು ಪತ್ರಿಕೆಯ ಮೂಲಕ ಪತ್ರಕರ್ತ, ಲೇಖಕರಾಗಿ ಬೆಳೆದ ಅಮೀನ್ ಮಟ್ಟು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿರುವ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ, ಅಂಕಣಕಾರರಾಗಿ ರಾಜ್ಯ, ದೇಶದ ರಾಜಕೀಯಗಳನ್ನು ವಿಶ್ಲೇಷಣೆ ಮಾಡಿದವರು. ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಭಾರತದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಅನೇಕ ಲೇಖನಗಳನ್ನು ಬರೆದಿದ್ದಾರೆ ಮತ್ತು ಬರೆಯುತ್ತಲೂ ಇದ್ದಾರೆ. ‘ಬೇರೆಯೇ ಮಾತು-ಓದುಗರ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳು’ ಅವರ ಸಂಪಾದನೆಯಲ್ಲಿ ಬಂದಿರುವ ಇತ್ತೀಚಿನ ಮಹತ್ವದ ಕೃತಿ.

ದಿನೇಶ್ ಅಮಿನ್ ಮಟ್ಟು

ಖಾಸಗಿ ಒಡೆತನದಲ್ಲಿದ್ದರೂ ಕರ್ನಾಟಕವೂ ಸೇರಿದಂತೆ ಅಂದಿನ ಮಾಧ್ಯಮ ಕ್ಷೇತ್ರ ಇಂದಿನ ದಿನಗಳ ಹಾಗೆ ಸಂಪೂರ್ಣ ಉದ್ಯಮವಾಗಿ ಪರಿವರ್ತನೆಗೊಂಡಿರಲಿಲ್ಲ. ದೇಶದ ಮಾಧ್ಯಮಕ್ಷೇತ್ರ ಅಂತಹ ಪರಿವರ್ತನೆಗೆ ಒಳಗಾಗಿದ್ದು 1991ರ ಹೊಸ ಆರ್ಥಿಕ ನೀತಿಯ ನಂತರದ ದಿನಗಳಲ್ಲಿ. ವಡ್ಡರ್ಸೆಯವರ ಮುನ್ನೋಟದ ಕಣ್ಣುಗಳಿಗೆ ಹೆಚ್ಚುಕಡಿಮೆ ಹತ್ತು ವರ್ಷಗಳಷ್ಟು ಹಿಂದೆಯೇ ಮಾಧ್ಯಮಕ್ಷೇತ್ರಕ್ಕೆ ಬಂದೊದಗಲಿರುವ ಅಪಾಯವನ್ನು ಕಂಡಿತ್ತು. ಈ ರೀತಿ ಉದ್ಯಮೀಕರಣಗೊಂಡ ಮಾಧ್ಯಮದ ಬಿಡುಗಡೆಗೆ ದಾರಿಯನ್ನೂ ಅವರು ಆ ಕಾಲದಲ್ಲಿಯೇ ಕಂಡಿದ್ದರು. ಸಂಪೂರ್ಣ ಉದ್ಯಮದ ರೂಪ ಪಡೆದಿರುವ ಇಂದಿನ ಮಾಧ್ಯಮಕ್ಕೆ ಪರ್ಯಾಯ ಏನೆಂದು ಯೋಚಿಸುವವರಿಗೆ ಈಗಲೂ ಎದುರಿಗೆ ಇರುವ ಸಿದ್ಧ ಪರ್ಯಾಯ ಮಾದರಿ- ಓದುಗರ ಒಡೆತನದಲ್ಲಿ ಕಟ್ಟಿದ್ದ ‘ಮುಂಗಾರು’.

ಸಾಮಾಜಿಕ ಪರಿವರ್ತನೆಯ ಕನಸುಗಾರರನ್ನು ವೈದ್ಯರಿಗೆ ಹೋಲಿಸುತ್ತಾರೆ. ಮೊದಲ ಬಾರಿ ವಡ್ಡರ್ಸೆಯವರನ್ನು ಕಂದು ಬಣ್ಣದ ಸಪಾರಿಯಲ್ಲಿ ಕಂಡಾಗ ಇವರು ಯಾರೋ ಸೂಟುಬೂಟು ಪತ್ರಕರ್ತರಿರಬಹುದೆಂಬ ಅನುಮಾನ ಹುಟ್ಟಿತ್ತು. ಅವರ ನಡೆ-ನುಡಿಯನ್ನು ನೋಡುತ್ತಾ, ಕೇಳುತ್ತಾ ಹೋದ ಹಾಗೆ ಅವರೊಬ್ಬ ರೈತನಂತೆ ಕಾಣತೊಡಗಿದ್ದರು. ರೈತರ ನೇರಾನೇರ ನಡವಳಿಕೆ, ಸೋಲೊಪ್ಪದ ಹೋರಾಟದ ಛಲ, ಬತ್ತದ ಆಶಾವಾದ, ನಂಬಿ ಕೆಡುವ ಹುಂಬತನ, ಇತರರನ್ನು ಬೆಳೆಸುತ್ತಲೇ ಬೆಳೆಯುವ ಗುಣ ಎಲ್ಲವೂ ವಡ್ಡರ್ಸೆಯವರಲ್ಲಿತ್ತು. ತಮ್ಮ ಕನಸಿನ ಪತ್ರಿಕೆಗೆ ಶಿಷ್ಯ ಇಂದೂಧರ ಹೊನ್ನಾಪುರ ಸೂಚಿಸಿದ್ದ ‘ಮುಂಗಾರು’ ಎಂಬ ಹೆಸರು ವಡ್ಡರ್ಸೆಯವರಿಗೆ ಇಷ್ಟವಾಗಲು ಇವೆಲ್ಲವೂ ಕಾರಣವಿರಬಹುದು. ‘ಚಿಂತನೆಯ ಮಳೆ ಹರಿಸಿ ಜನಶಕ್ತಿಯ ಬೆಳೆ ತೆಗೆವ ಮುಂಗಾರು’ ಎನ್ನುವುದೇ ಪತ್ರಿಕೆಯ ಘೋಷವಾಕ್ಯವಾಗಿತ್ತು.

ಕೆಲವು ದಿನ ನೇಗಿಲು ಹಿಡಿದು ಸಾಗುವಳಿ ಮಾಡಿದ್ದ ವಡ್ಡರ್ಸೆಯವರಿಗೆ ಬೆಳೆ ತೆಗೆವ ರೈತರ ಕಷ್ಟಗಳು ಗೊತ್ತಿತ್ತು. ರೈತನ ಬದುಕು ಮುಂಗಾರು ಮಳೆಯ ಜೊತೆಯಲ್ಲಿನ ಜೂಜಾಟ ಎನ್ನುವುದೂ ತಿಳಿದಿತ್ತು. ನಾಲ್ಕು ದಶಕಗಳ ಹಿಂದೆ ‘ಮುಂಗಾರು’ ದಿನಪತ್ರಿಕೆಯ ಹುಟ್ಟು ಮಾಧ್ಯಮ ಕ್ಷೇತ್ರದಲ್ಲಿ ಒಂದು ರೀತಿಯಲ್ಲಿ ಜೂಜಾಟವೇ ಆಗಿತ್ತು.

‘ಮುಂಗಾರು’ ಪ್ರಕಾಶನ ಸಂಸ್ಥೆ ಓದುಗರೇ ಷೇರುದಾರರಾಗಿದ್ದ ಪಬ್ಲಿಕ್ ಲಿಮಿಟೆಡ್ ಕಂಪೆನಿ. ಆಡಳಿತ ನಿರ್ದೇಶಕ ಮತ್ತು ಸಂಪಾದಕರಾಗಿದ್ದ ವಡ್ಡರ್ಸೆಯವರೂ ಸೇರಿದಂತೆ ಏಳು ಮಂದಿ ನಿರ್ದೇಶಕರು ತಲಾ 15,000 ರೂ.ಗಳ ಷೇರು ಬಂಡವಾಳ ಹಾಕಿದ್ದರು. ಇದರ ಜೊತೆಗೆ ಒಂದರಿಂದ ಐದು ಸಾವಿರ ರೂ. ಮುಖಬೆಲೆಯ ಷೇರುಗಳನ್ನು ಓದುಗರಿಗೆ ಮಾರಾಟ ಮಾಡುವ ಮೂಲಕ ಹತ್ತು ಲಕ್ಷ ರೂ. ಸಂಗ್ರಹಿಸುವ ಯೋಜನೆ ವಡ್ಡರ್ಸೆಯವರದ್ದಾಗಿತ್ತು. ಈ ರೀತಿ 20 ಲಕ್ಷ ರೂ. ಬ್ಯಾಂಕ್ ಸಾಲ ಮತ್ತು 10 ಲಕ್ಷ ರೂ.ಗಳ ಮೂಲ ಬಂಡವಾಳದೊಡನೆ ‘ಮುಂಗಾರು’ ಪ್ರಕಾಶನ ಸಂಸ್ಥೆ ಪ್ರಾರಂಭಗೊಂಡಿತ್ತು. ವಿಶೇಷವೆಂದರೆ ಪಡೆದ ಷೇರುಗಳಿಗೆ ಡಿವಿಡೆಂಡ್ ಕೊಡುವುದಿಲ್ಲ ಎಂದು ಹೇಳಿಯೇ ಅವುಗಳನ್ನು ಮಾರಾಟ ಮಾಡಲಾಗಿತ್ತು.

ಕೆಲವು ಶ್ರೀಮಂತ ಕುಟುಂಬಗಳ ಒಡೆತನದಲ್ಲಿದ್ದ ಪತ್ರಿಕೆಗಳ ನಡುವೆ ಓದುಗರನ್ನೇ ಷೇರುದಾರರನ್ನಾಗಿ ಮಾಡಿ ಪಬ್ಲಿಕ್ ಲಿಮಿಟೆಡ್ ಕಂಪೆನಿ ಮೂಲಕ ‘ಓದುಗರ ಒಡೆತನ’ದ ಪತ್ರಿಕೆ ಪ್ರಾರಂಭಿಸುವುದು ಆ ಕಾಲಕ್ಕೆ ಮಾತ್ರವಲ್ಲ ಈ ಕಾಲಕ್ಕೂ ಜೂಜಾಟವೇ ಆಗಿದೆ. ತಮಿಳುನಾಡಿನಲ್ಲಿ ಇಂತಹ ಎರಡು ಪ್ರಯತ್ನಗಳು ನಡೆದಿರುವುದನ್ನು ಅವರು ನೆನಪು ಮಾಡಿಕೊಳ್ಳುತ್ತಿದ್ದರು. ಚೆನ್ನೈನ ಪತ್ರಕರ್ತರ ಒಂದು ತಂಡ ದೇಶದಲ್ಲಿಯೇ ಮೊದಲ ಬಾರಿ ಸಹಕಾರಿ ಸಂಘಟನೆಯ ಮೂಲಕ ಪತ್ರಿಕೆಯನ್ನು ಪ್ರಾರಂಭಿಸಿತ್ತು. ಕೆಲವು ವರ್ಷಗಳ ನಂತರ ಇನ್ನೊಂದು ಪತ್ರಕರ್ತರ ತಂಡ ಅದೇ ಚೆನ್ನೈನಲ್ಲಿ ಪಬ್ಲಿಕ್ ಲಿಮಿಟೆಡ್ ಕಂಪೆನಿ ಮೂಲಕ ಪತ್ರಿಕೆಯನ್ನು ಪ್ರಾರಂಭಿಸಿತ್ತು. ಈ ಎರಡೂ ಪ್ರಯತ್ನಗಳು ಅಲ್ಪಾಯುಷಿಯಾಗಿದ್ದವು.

ಖಾಸಗಿ ಒಡೆತನದಲ್ಲಿದ್ದರೂ ಕರ್ನಾಟಕವೂ ಸೇರಿದಂತೆ ಅಂದಿನ ಮಾಧ್ಯಮ ಕ್ಷೇತ್ರ ಇಂದಿನ ದಿನಗಳ ಹಾಗೆ ಸಂಪೂರ್ಣ ಉದ್ಯಮವಾಗಿ ಪರಿವರ್ತನೆಗೊಂಡಿರಲಿಲ್ಲ. ದೇಶದ ಮಾಧ್ಯಮಕ್ಷೇತ್ರ ಅಂತಹ ಪರಿವರ್ತನೆಗೆ ಒಳಗಾಗಿದ್ದು 1991ರ ಹೊಸ ಆರ್ಥಿಕ ನೀತಿಯ ನಂತರದ ದಿನಗಳಲ್ಲಿ. ವಡ್ಡರ್ಸೆಯವರ ಮುನ್ನೋಟದ ಕಣ್ಣುಗಳಿಗೆ ಹೆಚ್ಚುಕಡಿಮೆ ಹತ್ತು ವರ್ಷಗಳಷ್ಟು ಹಿಂದೆಯೇ ಮಾಧ್ಯಮ ಕ್ಷೇತ್ರಕ್ಕೆ ಬಂದೊದಗಲಿರುವ ಅಪಾಯವನ್ನು ಕಂಡಿತ್ತು. ಈ ರೀತಿ ಉದ್ಯಮೀಕರಣಗೊಂಡ ಮಾಧ್ಯಮದ ಬಿಡುಗಡೆಗೆ ದಾರಿಯನ್ನೂ ಅವರು ಆ ಕಾಲದಲ್ಲಿಯೇ ಕಂಡಿದ್ದರು. ಸಂಪೂರ್ಣ ಉದ್ಯಮದ ರೂಪ ಪಡೆದಿರುವ ಇಂದಿನ ಮಾಧ್ಯಮಕ್ಕೆ ಪರ್ಯಾಯ ಏನೆಂದು ಯೋಚಿಸುವವರಿಗೆ ಈಗಲೂ ಎದುರಿಗೆ ಇರುವ ಸಿದ್ಧ ಪರ್ಯಾಯ ಮಾದರಿ- ಓದುಗರ ಒಡೆತನದಲ್ಲಿ ಕಟ್ಟಿದ್ದ ‘ಮುಂಗಾರು’.

ಪ್ರಜಾವಾಣಿಯಲ್ಲಿ ತನ್ನ ವರದಿಗಳಿಂದಾಗಿ ವಡ್ಡರ್ಸೆಯವರು ಸಾಕಷ್ಟು ಜನಪ್ರಿಯರಾಗಿದ್ದರು, ಉದ್ಯೋಗದ ಭದ್ರತೆಯೂ ಇತ್ತು. ಆಗಿನ್ನೂ ಅವರಿಗೆ 55 ವರ್ಷ. ಮೂವರು ಮಕ್ಕಳ ವಿದ್ಯಾಭ್ಯಾಸ ಮುಗಿದಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪತ್ನಿ ಪ್ರಪುಲ್ಲಾ ಶೆಟ್ಟಿಯವರ ಸಹಕಾರ-ಸಹಮತ ಇಲ್ಲದೇ ಹೋಗಿದ್ದರೆ ಇಂತಹದ್ದೊಂದು ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇನೋ? ಆದರೆ ಕುಟುಂಬದ ಬಗ್ಗೆ ವಡ್ಡರ್ಸೆಯವರು ಕೂಡಾ ಯಾರೊಡನೆಯೂ ಹೆಚ್ಚು ಚರ್ಚೆ ಮಾಡುತ್ತಿರಲಿಲ್ಲ. ವಡ್ಡರ್ಸೆಯವರಿಗೆ ವೈಯಕ್ತಿಕವಾಗಿ ಸ್ವಂತ ಪತ್ರಿಕೆಯನ್ನು ಪ್ರಾರಂಭಿಸುವ ಅನಿವಾರ್ಯತೆಯೂ ಇರಲಿಲ್ಲ. ಸಂಪಾದಕೀಯ ನೀತಿ, ಸಂಬಳ-ಸೌಲಭ್ಯಗಳು ಮತ್ತು ಆಡಳಿತ ವರ್ಗದ ಮನೋಧರ್ಮದ ದೃಷ್ಟಿಯಿಂದ ಉಳಿದೆಲ್ಲ ಪತ್ರಿಕೆಗಳಿಗಿಂತ ಪ್ರಜಾವಾಣಿ ಹೆಚ್ಚು ಓದುಗರ ಪರ ಮತ್ತು ನೌಕರಸ್ನೇಹಿಯಾಗಿತ್ತು. ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ 25 ವರ್ಷಗಳ ಅವಧಿಯಲ್ಲಿ ‘ಪತ್ರಿಕೆಯ ಮಾಲಕರು ಒಮ್ಮೆಯೂ ಅವರ ಮರ್ಜಿಯನ್ನು ನನ್ನ ಮೇಲೆ ಹೊರಿಸುವ ಕೆಲಸ ಮಾಡಿರಲಿಲ್ಲ’ ಎಂದು ವಡ್ಡರ್ಸೆಯವರು ಬಹಳ ಕೃತಜ್ಞತೆಯಿಂದ ತಮ್ಮ ಒಂದು ಅಂಕಣದಲ್ಲಿ ನೆನೆಸಿಕೊಂಡಿದ್ದರು.

ಬ್ರಾಹ್ಮಣ ಪತ್ರಕರ್ತರೇ ಹೆಚ್ಚಿನ ಸಂಖ್ಯೆ ಮತ್ತು ಆಯಕಟ್ಟಿನ ಜಾಗಗಳಲ್ಲಿದ್ದರೂ ಕೆ.ಎನ್.ಹರಿಕುಮಾರ್ ಸಾರಥ್ಯ ವಹಿಸಿಕೊಂಡ ನಂತರ ಅಲ್ಲಿಯವರೆಗೆ ಬ್ರಾಹ್ಮಣಮಯವಾಗಿದ್ದ ಪ್ರಜಾವಾಣಿಯಲ್ಲಿ ಬದಲಾವಣೆಯ ಪರ್ವ ಶುರುವಾಗಿತ್ತು. ಹಿಂದುಳಿದ ಜಾತಿ, ದಲಿತ ಮತ್ತು ಮುಸ್ಲಿಮ್ ಸಮುದಾಯದ ಪತ್ರಕರ್ತರು ಪ್ರಜಾವಾಣಿಗೆ ಪ್ರವೇಶ ಪಡೆದಿದ್ದರು. ಆದರೆ ವಡ್ಡರ್ಸೆಯವರು ಪತ್ರಿಕೆ ಎನ್ನುವುದು ಸಾಮಾಜಿಕ ಪರಿವರ್ತನೆಯ ಸಾಧನವಾಗಬೇಕೆಂದು ಬಯಸುತ್ತಿದ್ದವರು ಇದು ಸಾಧ್ಯವಾಗಬೇಕಾದರೆ ಪತ್ರಿಕೆಯ ನೀತಿ-ನಿರ್ಧಾರಗಳ ಸೂತ್ರ ತಮ್ಮ ಕೈಯಲ್ಲಿಯೇ ಇರಬೇಕೆಂಬುದು ಬಯಸಿದ್ದರು. ಇಪ್ಪತ್ತೊಂದನೇ ಶತಮಾನದಲ್ಲಿ ಹುಟ್ಟಿಕೊಂಡ ‘ಅಹಿಂದ’ ಎನ್ನುವ ಸಾಮಾಜಿಕ ಒಕ್ಕೂಟದ ಕನಸನ್ನು ವಡ್ಡರ್ಸೆಯವರು 20ನೇ ಶತಮಾನದಲ್ಲಿಯೇ ಕಂಡಿದ್ದರು. ಉದಯವಾಣಿ, ನವಭಾರತದಿಂದ ಬಂದಿದ್ದ ಮೂರು-ನಾಲ್ಕು ಬ್ರಾಹ್ಮಣರನ್ನು ಹೊರತುಪಡಿಸಿದರೆ ಮೊದಲ ಕೋಟಾದಲ್ಲಿಯೇ ಸೇರ್ಪಡೆಯಾಗಿದ್ದ ‘ಮುಂಗಾರು’ ಸಂಪಾದಕೀಯ ಬಳಗದಲ್ಲಿದ್ದ ಪತ್ರಕರ್ತರೆಲ್ಲರೂ ಅಬ್ರಾಹ್ಮಣರೇ ಆಗಿದ್ದರು .

ಈ ಅಬ್ರಾಹ್ಮಣ ಪತ್ರಕರ್ತರ ಸೇರ್ಪಡೆ ವಡ್ಡರ್ಸೆಯವರು ಮತ್ತು ಬೆಂಗಳೂರಿನಿಂದ ಅವರು ಕರೆತಂದಿದ್ದ ಪತ್ರಕರ್ತರ ತಂಡದ ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಮೂರೇ ತಿಂಗಳುಗಳ ಅವಧಿಯಲ್ಲಿ ಬೆಂಗಳೂರು ಪತ್ರಕರ್ತರ ತಂಡ ನಿರ್ಗಮಿಸಿದಾಗ ‘ಬ್ರಾಹ್ಮಣರೇ ವಾಸಿ, ಹೇಳಿದಷ್ಟನ್ನು ಮಾಡಿಕೊಂಡು ಹೋಗುತ್ತಾರೆ. ಈ ಕ್ರಾಂತಿಕಾರಿ ಶೂದ್ರರನ್ನು ಕಟ್ಟಿಕೊಂಡರೆ ಕಷ್ಟ’ ಎಂದು ಖಾಸಗಿಯಾಗಿ ಅವರು ಗೊಣಗಾಡಿದ್ದು ಉಂಟು. ಆದರೆ, ಈ ಗೊಣಗಾಟ ‘ಮುಂಗಾರು’ವಿನ ಸಂಪಾದಕೀಯ ನೀತಿ ಮತ್ತು ಪತ್ರಕರ್ತರ ಆಯ್ಕೆಯ ಮೇಲೆ ಯಾವ ಪ್ರಭಾವವೂ ಬೀರಿರಲಿಲ್ಲ.

ಮೊದಲ ಸಂಪಾದಕೀಯ ತಂಡದ ನೇಮಕಾತಿಗೆ ಲಿಖಿತ ಪರೀಕ್ಷೆ-ಮೌಖಿಕ ಸಂದರ್ಶನಗಳಿದ್ದರೂ ನಂತರದ ದಿನಗಳಲ್ಲಿ ನೇರ ನೇಮಕಾತಿಗಳೇ ನಡೆದದ್ದು. ಈ ರೀತಿ ಸೇರಿಕೊಂಡವರೊಬ್ಬರು ಒಮ್ಮೆ ತಮಾಷೆಯಾಗಿ ತನ್ನ ಅನುಭವ ಹೇಳುತ್ತಿದ್ದರು. ಆತ ‘ಮುಂಗಾರು’ವಿನಲ್ಲಿ ಕೆಲಸ ಬೇಕೆಂದು ಫೋನ್ ಮಾಡಿದಾಗ ವಡ್ಡರ್ಸೆಯವರು ತಕ್ಷಣ ‘ಯಾರು ನೀನು ತಮ್ಮಾ?’ ಎಂದು ಕೇಳಿದ್ದಾರೆ. ಈತ ಕುಗ್ಗಿದ ದನಿಯಲ್ಲಿ ‘ನಾನು ಶತಶತಮಾನಗಳಿಂದ ಶೋಷಣೆಗೊಳಗಾದ ಜಾತಿಯವನು ಸಾರ್’ ಎಂದು ಹೇಳಿದ್ದಾನೆ. ತಕ್ಷಣ ಶೆಟ್ರು ‘ಆಯ್ತು, ನಾಳೆ ಬಂದು ಕೆಲಸಕ್ಕೆ ಸೇರಿಕೋ’ ಎಂದು ಹೇಳಿದ್ದರಂತೆ. ಇದು ಆತನ ಅನುಭವವೋ, ಆತನೇ ಹೆಣೆದ ಜೋಕೋ ಎನ್ನುವುದು ಗೊತ್ತಿಲ್ಲದಿದ್ದರೂ ನಂಬುವಂತಿತ್ತು. ಹಾಗಿಲ್ಲದಿದ್ದರೆ ಬಿ.ಕಾಮ್. ಓದಿದ್ದ, ಪತ್ರಿಕೆಯಲ್ಲಿ ಅನುಭವವೇ ಇಲ್ಲದ ನನ್ನಂತಹವರು ಪತ್ರಕರ್ತನಾಗಲು ಹೇಗೆ ಸಾಧ್ಯವಿತ್ತು?

ನಾನು ಪತ್ರಿಕೆಯೊಂದರಲ್ಲಿ ಎರಡು ಬಾರಿ ಪತ್ರಕರ್ತರ ನೇಮಕಾತಿ ನಡೆಸುವ ಸಂಪಾದಕೀಯ ತಂಡದಲ್ಲಿದ್ದೆ. ಮೊದಲ ಹಂತದಲ್ಲಿ ಅರ್ಜಿಗಳ ಪರಿಶೀಲಿಸಿ ಅಭ್ಯರ್ಥಿಗಳ ಆಯ್ಕೆ, ನಂತರ ಲಿಖಿತ ಪರೀಕ್ಷೆ, ಕೊನೆಗೆ ಸಂದರ್ಶನ. ಇಷ್ಟೆಲ್ಲ ಆರಿಸಿ, ಗಾಳಿಸಿ ಆಯ್ಕೆ ಮಾಡಿದ 25-30 ಮಂದಿಯಲ್ಲಿ ಗಟ್ಟಿಕಾಳುಗಳಾಗಿ ಉಳಿಯುತ್ತಿದ್ದುದು 10-15 ಮಂದಿ ಮಾತ್ರ. ವಡ್ಡರ್ಸೆಯವರ ಆಯ್ಕೆಯಲ್ಲಿ ಜೊಳ್ಳುಗಳೇ ಇರಲಿಲ್ಲ ಎನ್ನುವುದು ಅಲ್ಲಿ ಕೆಲಸ ಮಾಡಿದ್ದವರ ಪಟ್ಟಿ ನೋಡಿದರೆ ಅಂದಾಜು ಆಗಬಹುದು.

 ಇಂದೂಧರ ಹೊನ್ನಾಪುರ, ಎನ್.ಎಸ್.ಶಂಕರ್, ಕೆ.ಪುಟ್ಟಸ್ವಾಮಿ, ದಿವಂಗತ ಮಹಾಬಲೇಶ್ವರ ಕಾಟ್ರಹಳ್ಳಿ, ಕೆ.ರಾಮಯ್ಯ, ಮಂಗ್ಳೂರ ವಿಜಯ, ಹಸನ್ ನಯೀಂ ಸುರಕೋಡ್, ಕೃಪಾಕರ(ಸೇನಾನಿ), ವಿ.ಮನೋಹರ, ಎಂ.ಬಿ.ಕೋಟಿ, ದಿವಂಗತ ಕೇಶವಪ್ರಸಾದ್, ರಾಮಮೂರ್ತಿ, ದಿವಂಗತ ಯಲಗುಡಿಗೆ ಮಂಜಯ್ಯ, ಜಿ.ಕೆ.ಮಧ್ಯಸ್ತ, ಅತ್ರಾಡಿ ಸಂತೋಷ್ ಹೆಗ್ಡೆ, ಪಂಜು ಗಂಗೊಳ್ಳಿ, ಪಿ.ಮಹಮ್ಮದ್, ಪ್ರಕಾಶ್ ಶೆಟ್ಟಿ, ಕೆ.ಮಕಾಳಿ, ಎಚ್. ನಾಗವೇಣಿ, ಜೈನುಲ್ಲಾ ಬಳ್ಳಾರಿ, ಸುಧಾಕರ ಬನ್ನಂಜೆ, ಯಶವಂತ ಬೋಳೂರು, ಬಿ.ಎಂ.ಹನೀಫ್, ಮಂಜುನಾಥ್ ಚಾಂದ್ ತ್ರಾಸಿ, ಬಿ.ಬಿ. ಶೆಟ್ಟಿಗಾರ್, ದಾಮೋದರ ಶೆಟ್ಟಿಗಾರ್, ಹಿಲರಿ ಕ್ರಾಸ್ತಾ, ಅತ್ರಾಡಿ ಸಂತೋಷ್ ಹೆಗ್ಡೆ, ಬಿ.ಟಿ. ರಂಜನ್, ವಿಶ್ವ ಕುಂದಾಪುರ, ಪ್ರಕಾಶ್ ಅಬ್ಬೂರು, ಬಿ.ಗಣಪತಿ, ಮಂಜುನಾಥ್ ಭಟ್, ಚಿದಂಬರ ಬೈಕಂಪಾಡಿ, ದಿವಂಗತ ರವಿ ರಾ ಅಂಚನ್, ವಿಜು ಪೂಣಚ್ಚ, ಗಂಗಾಧರ ಹಿರೇಗುತ್ತಿ, ಟಿ.ಕೆ.ರಮೇಶ್ ಶೆಟ್ಟಿ, ಲೋಲಾಕ್ಷ, ನೆತ್ತರಕೆರೆ ಉದಯಶಂಕರ್, ಜೆ.ಎ.ಪ್ರಸನ್ನಕುಮಾರ್, ಪರಮಾನಂದ ಸಾಲ್ಯಾನ್, ಭೀಮ ಭಟ್, ದಿವಂಗತ ಪ್ರಭಾಕರ್ ಕಿಣಿ, ರಾಜಾರಾಂ ತಲ್ಲೂರು, ನಿಕಿಲ್ ಕೊಲ್ಪೆ, ಶಿವಸುಬ್ರಹ್ಮಣ್ಯ... ಹೀಗೆ ಸಾಗುತ್ತದೆ ಪಟ್ಟಿ. ಇವರಲ್ಲಿ ಕೆಲವರು ತಮ್ಮ ವೃತ್ತಿ ಬದಲಾಯಿಸಿಕೊಂಡಿರಬಹುದು, ಆದರೆ ಈ ಹೆಸರುಗಳನ್ನು ಬಲ್ಲವರು ಯಾರೂ ಈ ಪಟ್ಟಿಯಲ್ಲಿ ಜೊಳ್ಳುಗಳಿವೆ ಎಂದು ಹೇಳಲಾರರು. ಮೂರು ದಶಕಗಳ ನಂತರವೂ ಇವರೆಲ್ಲ ಗಟ್ಟಿಕಾಳುಗಳಾಗಿಯೇ ಉಳಿದಿದ್ದಾರೆ.

‘ಮುಂಗಾರು’ ಪತ್ರಿಕೆಯ ವೈಫಲ್ಯಕ್ಕೆ ಮೂಲ ಕಾರಣ ಅವರು ಆಯ್ಕೆ ಮಾಡಿಕೊಂಡ ಸ್ಥಳ ಎನ್ನುವ ಆಭಿಪ್ರಾಯವೂ ಇದೆ. ಪತ್ರಿಕೆ ಮತ್ತು ವಡ್ಡರ್ಸೆಯವರನ್ನು ಬಲ್ಲ ಬಹುತೇಕ ಮಂದಿಯ ಅಭಿಪ್ರಾಯವನ್ನು ತಳ್ಳಿಹಾಕಲಾಗದು. ಬೆಂಗಳೂರಿನಲ್ಲಿಯೇ ಪ್ರಾರಂಭಿಸಿದ್ದರೆ ಪತ್ರಿಕೆ ಉಳಿಯುತ್ತಿತ್ತು, ಬೆಳೆಯುತ್ತಿತ್ತು ಎನ್ನುವವರೂ ಇದ್ದಾರೆ. ವಡ್ಡರ್ಸೆಯವರು ‘ಮುಂಗಾರು’ ಪತ್ರಿಕೆಯನ್ನು ಮಂಗಳೂರಿನಿಂದಲೇ ಪ್ರಾರಂಭಿಸಲು ಎರಡು-ಮೂರು ಕಾರಣಗಳಿದ್ದವು. ಈ ಕಾರಣಗಳು ‘ಮುಂಗಾರು’ ಪತ್ರಿಕೆಯ ವೈಫಲ್ಯಕ್ಕೆ ಕಾರಣಗಳೂ ಹೌದು. ಮೊದಲ ಕಾರಣ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಾತಿ ರಚನೆ. ಬಿಲ್ಲವರು ಮತ್ತು ಮುಸ್ಲಿಮರು ಹೆಚ್ಚು ಕಡಿಮೆ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ, ಸಂಖ್ಯೆಯಲ್ಲಿ ಅವರ ನಂತರದ ಸ್ಥಾನದಲ್ಲಿದ್ದರೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಾಢ್ಯರಾಗಿರುವ ಬಂಟರು ಇರುವ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿ. ಇವರ ಜೊತೆಗೆ ಇತರ ಹಿಂದುಳಿದವರು, ದಲಿತರು ಮತ್ತು ಕ್ರಿಶ್ಚಿಯನ್ನರನ್ನು ಸೇರಿಸಿದರೆ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇಕಡಾ 80-90ರಷ್ಟಾಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅಲ್ಲಿನ ‘ಅಹಿಂದ’ ಸಮಾಜ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದಿದೆ. ಅದು ಕ್ರಾಂತಿ ರಂಗದ ಕಹಳೆ ಊದಿದ್ದ ಎಸ್. ಬಂಗಾರಪ್ಪನವರು ತನ್ನ ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಕಾಲ. ಕರಾವಳಿಯ ಬಿಲ್ಲವ/ಈಡಿಗ ಸಮುದಾಯದಲ್ಲಿ ಎಸ್. ಬಂಗಾರಪ್ಪನವರು ವಿಸ್ತಾರವಾದ ಅಭಿಮಾನಿ ಬಳಗ ಹೊಂದಿದ್ದರು. ದೇವೇಗೌಡ, ಜೀವರಾಜ ಆಳ್ವ, ಅಬ್ದುಲ್ ನಝೀರ್ ಸಾಬ್, ಜೆ.ಎಚ್. ಪಟೇಲ್, ಕೆ.ಎಚ್. ರಂಗನಾಥ್ ಸೇರಿದಂತೆ ವಡ್ಡರ್ಸೆಯವರಿಗೆ ಪಕ್ಷಾತೀತವಾಗಿ ಹಲವಾರು ರಾಜಕಾರಣಿಗಳ ಜೊತೆ ಒಡನಾಟವಿತ್ತು. ಆದರೆ ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಹಿಂದುಳಿದ ಈಡಿಗ ಜಾತಿಯ ಎಸ್. ಬಂಗಾರಪ್ಪನವರ ಬಗ್ಗೆ ವಡ್ಡರ್ಸೆಯವರಿಗೆ ವಿಶೇಷವಾದ ಅಭಿಮಾನ ಇತ್ತು. ವಡ್ಡರ್ಸೆಯವರ ಬಗ್ಗೆ ಬಂಗಾರಪ್ಪನವರಿಗೆ ಅಷ್ಟೇ ಗ

Writer - ದಿನೇಶ್ ಅಮಿನ್ ಮಟ್ಟು

contributor

Editor - ದಿನೇಶ್ ಅಮಿನ್ ಮಟ್ಟು

contributor

Similar News

ಬೀಗ