ಹದಿಹರೆಯದ ಆದರ್ಶಗಳು

Update: 2021-12-31 06:47 GMT

ಕಾಳೇಗೌಡ ನಾಗವಾರ ಅವರ ಕತೆಗಳಲ್ಲಿ ಗ್ರಾಮೀಣ ಸಂವೇದನೆ ಮತ್ತು ಬಂಡಾಯ ಆಶಯಗಳು ಪ್ರಮುಖವಾಗಿವೆ ಎಂದು ಗುರುತಿಸಲಾಗುತ್ತದೆ. ಕತೆಗಳಲ್ಲದೆ ಕವಿತೆಗಳನ್ನು ಬರೆದಿರುವ ಅವರನ್ನು ವಿಮರ್ಶಕ ಹಾಗೂ ಜಾನಪದ ತಜ್ಞರಾಗಿಯೂ ಗುರುತಿಸಲಾಗುತ್ತದೆ. ಡಾ.ರಾಮಮನೋಹರ ಲೋಹಿಯಾ ಸಮಗ್ರ ಕೃತಿಗಳ ಪ್ರಕಟನಾ ಸಮಿತಿ ಅಧ್ಯಕ್ಷತೆಯ ಜೊತೆ ಹತ್ತು ಹಲವು ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿರುವವರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.

ಪ್ರೊ. ಕಾಳೇಗೌಡ ನಾಗವಾರ

ಮ್ಮ ಬದುಕಿನ ಹನ್ನೊಂದರಿಂದ ಹತ್ತೊಂಭತ್ತು ವರ್ಷಗಳ ಹದಿಹರೆಯದ ದಿನಗಳಲ್ಲಿ ಗಾಢವಾಗಿ ಅಚ್ಚೊತ್ತಿದ ಆದರ್ಶಗಳು ಬಹುಶಃ ಕೊನೆಯುಸಿರಿನ ತನಕ ನಮ್ಮಲ್ಲಿ ನೆಲೆಗೊಂಡಿರುವ ಸಾಧ್ಯತೆಗಳನ್ನು ದಟ್ಟವಾಗಿ ಕಾಣಬಹುದು. ಒಂದು ವೇಳೆ ಅಂತಹ ಆದರ್ಶದ ಕನಸುಗಳಿಗೆ ನಾವು ಕಿಂಚಿತ್ ದೂರ ಅಥವಾ ವಿರುದ್ಧವಾಗುವ ಕ್ಷಣಗಳ ನರಕ ಸಹ ಅಸಹನೀಯವಾಗಿರುತ್ತದೆ. ಯಾವುದೇ ಸಂವೇದನಾಶೀಲ ಮನಸ್ಸು ಈ ದಿಕ್ಕಿನಲ್ಲಿ ಅಕ್ಷರಶಃ ಕ್ರಿಯಾಶೀಲವಾಗಿರುತ್ತದೆ.

ಬೆಂಗಳೂರು ಗ್ರಾಮಾಂತರ (ಈಗಿನ ರಾಮನಗರ) ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದವನು ನಾನು. ಹೈಸ್ಕೂಲು ಹಂತದಲ್ಲಿ ನನಗೆ ಬುದ್ಧ, ಬಸವ, ಅಕ್ಕ, ಅಲ್ಲಮ, ಸರ್ವಜ್ಞ, ಹರಿಹರ, ಗಾಂಧಿ, ಕುವೆಂಪು, ಶಿವರಾಮ ಕಾರಂತ ಮತ್ತಿತರ ಅಪ್ರತಿಮ ಸಾಧಕರ ಚಿಂತನೆಗಳು ಪರಿಚಯವಾದುವು. ಮುಂದೆ ಪಿಯುಸಿ ಮತ್ತು ಪದವಿ ತರಗತಿಗಳಲ್ಲಿರುವಾಗ ದೊರೆತ ರಾಮಮನೋಹರ ಲೋಹಿಯಾ ಮತ್ತು ಡಾ.ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಹಾಗೂ ಬೌದ್ಧಿಕ ಹೋರಾಟದ ಸೂಕ್ಷ್ಮಗಳು ನನ್ನಲ್ಲಿ ಹೆಚ್ಚಿನ ಪ್ರಭಾವವನ್ನು ಉಂಟುಮಾಡಿದವು.ಭಾರತದ ಸುಡುವಾಸ್ತವಗಳ ಅನಾವರಣದ ಚಿತ್ರಣ ಕ್ರಮೇಣ ಸ್ಪಷ್ಟವಾಗತೊಡಗಿತು. ವರ್ಣ, ಜಾತಿ, ಅಸ್ಪಶ್ಯತೆೆ ಮತ್ತು ಲಿಂಗಭೇದ ನೀತಿಯ ಅಸಹ್ಯಕರ ವಾತಾವರಣದ ಉಸಿರುಗಟ್ಟಿಸುವ ಸ್ಥಿತಿಯ ಭೀಕರ ವಿವರಗಳು ಕಣ್ಣೆದುರು ನಿಂತವು. ಇಂತಹ ಮತಿಹೀನ ಚಟುವಟಿಕೆಗಳನ್ನು ಬೆಂಬಲಿಸಿ ಮೌನವಾಗಿರುವ ಬದಲು-ನನ್ನೆಲ್ಲ ಮಿತಿಗಳ ಜೊತೆಗೆ ಆರೋಗ್ಯಕರ ಬದುಕಿನ ಹಂಬಲದ ಹಠದ ಮೂಲಕ ಕ್ರಿಯಾಶಾಲಿಯಾಗಿರುವುದು ಸೂಕ್ತವೆಂದು ನಾನು ತೀರ್ಮಾನಿಸಿದೆ.

 ತೆರೆದ ಮನಸ್ಸಿನ ಪ್ರಯೋಗಶೀಲ ಮತ್ತು ನೆಮ್ಮದಿಯ ಜೀವನದ ಆಶಯ, ವಿಶ್ಲೇಷಣೆ ಮತ್ತು ಬದ್ಧತೆಯ ನಡವಳಿಕೆಗಳ ಮೂಲಕ ಸಾಗುವ ಆನಂದದಾಯಕ ಸಂಗತಿಗಳು ನೀಡುವ ತೃಪ್ತಿ ನಿಜಕ್ಕೂ ದೊಡ್ಡದು. ಈ ಬಗೆಯ ಉಲ್ಲಾಸೋತ್ಸಾಹಗಳ ಮಧುರ ಕ್ಷಣಗಳು ನಮ್ಮ ಜೀವಂತಿಕೆಯ ಪ್ರತ್ಯಕ್ಷ ಸಾಕ್ಷಿಗಳಂತೆ ಕಂಗೊಳಿಸತೊಡಗಿದವು. ಮಂಡ್ಯ ಸರಕಾರಿ ಕಾಲೇಜಿನಲ್ಲಿ ನಾನು ವಿಜ್ಞಾನದ ವಿದ್ಯಾರ್ಥಿಯಾಗಿ ಪಿಯುಸಿ ಓದುತ್ತಿದ್ದಾಗ ಕನ್ನಡ ಅಧ್ಯಾಪಕರಾದ ಸುಧಾಕರ ಅವರು ನನ್ನ ಮೆಚ್ಚಿನ ಗುರುಗಳು, ಉತ್ತಮ ಬೋಧಕರು ಮತ್ತು ಕಥೆಗಾರರು. ಆಗಿನ್ನೂ ಹದಿನಾರರ ಹರೆಯದಲ್ಲಿದ್ದ ನನಗೆ ಸಾಹಿತ್ಯದ ಹುಚ್ಚು ಅಪರಿಮಿತವಾಗಿರುವುದನ್ನು ಅವರು ಚೆನ್ನಾಗಿ ಅರಿತಿದ್ದರು. ಕಾಲೇಜಿನ ಗ್ರಂಥಾಲಯದಲ್ಲಿ ಪರೀಕ್ಷೆಯ ಹತ್ತಿರದ ದಿನಗಳಲ್ಲಿ ಕುವೆಂಪು ಅವರ ‘‘ಕಾನೂರು ಹೆಗ್ಗಡತಿ’’ ಕಾದಂಬರಿ ಆಕಸ್ಮಿಕವಾಗಿ ಸಿಕ್ಕಿತು. ಹಗಲೂ-ರಾತ್ರಿಗಳ ಅರಿವಿಲ್ಲದೆ ಅದನ್ನು ತಲ್ಲೀನನಾಗಿ ಓದುತ್ತಿದ್ದೆ. ಅದೇ ವರ್ಷ ನನಗೆ ಸ್ಕಾಲರ್‌ಶಿಪ್ ಹಣ ಸಿಕ್ಕಿದಾಗ ‘‘ಶ್ರೀರಾಮಾಯಣದರ್ಶನಂ’’ ಕೃತಿಯನ್ನು ಕೊಂಡುಕೊಂಡೆ. ಕಾರಂತರ ಬರಹಗಳು ಸಹ ನನ್ನನ್ನು ಆಕರ್ಷಿಸಿದವು. ಒಮ್ಮೆ ಒಬ್ಬನೇ ಮೈಸೂರಿಗೆ ಹೋಗಿ ಒಂಟಿಕೊಪ್ಪಲಿನ ‘‘ಉದಯರವಿ’’ಯಲ್ಲಿ ಕುವೆಂಪು ಅವರನ್ನು ಕಂಡೆ. ತಮ್ಮ ಕಾಂಪೌಡ್ ಆವರಣದಲ್ಲಿ ಮೆಲ್ಲಗೆ ಸುತ್ತಾಡುತ್ತಿದ್ದವರು ನನ್ನೊಡನೆ ಮಾತಾಡುತ್ತಾ, ನನ್ನ ಆಸಕ್ತಿ ಮತ್ತು ಓದಿನ ಬಗ್ಗೆ ವಿಚಾರಿಸಿದರು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ್ದ ಸುಧಾಕರ ಅವರು ಪಿಯುಸಿ ನಂತರದ ನನ್ನ ಪದವಿಯ ಓದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಮುಂದುವರಿಯಲು ಪ್ರೋತ್ಸಾಹಿಸಿದರು.

ಸಾಹಿತ್ಯದ ವಿದ್ಯಾರ್ಥಿಯಾಗಿ 1964ರಲ್ಲಿ ಮಹಾರಾಜ ಕಾಲೇಜು ಸೇರಿದ ನನಗೆ ಆ ಕಾಲದ ಸಮಾಜವಾದಿ ಚಳವಳಿಯ ಗಟ್ಟಿಯಾದ ಸಂಪರ್ಕ ದೊರೆಯಿತು. ಶಿವಮೊಗ್ಗ ಜಿಲ್ಲೆಯಲ್ಲಿ ಲೋಹಿಯಾವಾದಿಗಳ ಹೋರಾಟದ ಚಟುವಟಿಕೆಗಳು ಜೀವಂತವಾಗಿದ್ದವು. ಶಾಂತವೇರಿ ಗೋಪಾಲಗೌಡರ ನೇತೃತ್ವದ ವೈಚಾರಿಕ ಚಿಂತನೆಯ ಸಂವೇದನಾಶೀಲ ಮತ್ತು ಪ್ರಾಮಾಣಿಕ ಕಾರ್ಯಕ್ರಮಗಳು ನಾಡಿನ ಎಲ್ಲೆಡೆ ಕಂಗೊಳಿಸುತ್ತಿದ್ದವು. ಆ ವೇಳೆಗಾಗಲೇ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ನಂಜುಂಡಸ್ವಾಮಿ, ಮಲ್ಲೇಶ್, ಕೆ.ವಿ. ಸುಬ್ಬಣ್ಣ ಮತ್ತಿತರರು ಈ ದಿಕ್ಕಿನಲ್ಲಿ ಕ್ರಿಯಾಶಾಲಿಗಳಾಗಿದ್ದರು. ಅದರಲ್ಲೂ ಲೋಹಿಯಾ ಅವರ ‘‘ರಾಜಕೀಯದ ಮಧ್ಯೆ ಬಿಡುವು’’ ಗ್ರಂಥದ ಓದು ನನಗೆ- ಬದುಕು, ಸಾಹಿತ್ಯ, ಸಂಸ್ಕೃತಿ ಸಂಬಂಧದ ಸಾರ್ಥಕ ಹೊಳಹುಗಳನ್ನು ನೀಡಿತು. ಹೀಗಾಗಿ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಮಾಜಶಾಸ್ತ್ರ, ವೈಚಾರಿಕತೆ, ಸಾರ್ಥಕ ಬದುಕಿನ ಆಶಯಗಳ ಕುರಿತ ಅಧ್ಯಯನ, ಚರ್ಚೆ, ಚಳವಳಿ ಮತ್ತು ಬರವಣಿಗೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳಲು ಸಾಧ್ಯವಾಯಿತು. ಕನ್ನಡ ಸಾಹಿತ್ಯದ ಅಧ್ಯಯನ ಜೊತೆಗೆ ಅನುದಿನದ ಬದುಕಿನ, ಸಮಾಜದ ಚೈತನ್ಯದಾಯಕ ಮತ್ತು ಆರೋಗ್ಯಕರ ನಡೆ-ನುಡಿಗಳ ತೀವ್ರತರ ಬೆಸುಗೆ ಪ್ರಧಾನವಾಗತೊಡಗಿತು. ಸಮಾಜವಾದಿ ಯುವಜನ ಸಭಾದ ವಿವಿಧ ಕ್ರಿಯಾಶೀಲ ಹೋರಾಟ ಮತ್ತು ಚಿಂತನಶೀಲ ಶಿಬಿರಗಳ ಒಗ್ಗೂಡುವಿಕೆಯ ಮೂಲಕ ಹಿರಿಕಿರಿಯರೆಲ್ಲಾ ಬೆರೆಯತೊಡಗಿದೆವು. ನಾನು, ರಾಮದಾಸ್, ಆಲನಹಳ್ಳಿ ಸಹಪಾಠಿಗಳು. ದೇವನೂರು ನಮಗಿಂತ ಒಂದೆರಡು ವರ್ಷದ ಕಿರಿಯ ವಿದ್ಯಾರ್ಥಿಮಿತ್ರ. ಆಗತಾನೆ ಜರ್ಮನಿಯಿಂದ ಅಧ್ಯಯನ ಮುಗಿಸಿ ಹಿಂದಿರುಗಿದ ನಂಜುಂಡಸ್ವಾಮಿಯವರು ತಮ್ಮೆಲ್ಲ ಸೃಜನಶೀಲ ಚಿಂತನೆ ಮತ್ತು ಸಮಾಜ ಬದಲಾವಣೆಯ ತಹತಹದ ತೀವ್ರತೆಯ ಯೋಜನೆ ಹಾಗೂ ಕ್ರಿಯಾತ್ಮಕ ಚಳವಳಿಗಳ ಮೂಲಕ ನಮ್ಮೆಲ್ಲರ ಕಣ್ಮಣಿಯಾಗಿದ್ದರು; ಅದಾಗಲೇ ಮೈಸೂರಿನಲ್ಲಿ ಓದು ಮುಗಿಸಿ ಮೂಡಿಗೆರೆಯಲ್ಲಿ ರೈತಾಪಿ ಬದುಕಿನ ಪ್ರಯೋಗಶೀಲ ಚಟುವಟಿಕೆಗಳಲ್ಲಿ ಮಗ್ನರಾಗಿದ್ದ ಪೂರ್ಣಚಂದ್ರ ತೇಜಸ್ವಿಯವರು ಸಹ ತೀವ್ರಾಸಕ್ತಿಯಿಂದ ಆಗಾಗ ನಮ್ಮಿಡನೆ ಬೆರೆಯುತ್ತಿದ್ದರು.

ಸರ್ವಜನಾಂಗದ ಶಾಂತಿಯ ತೋಟವಾಗಿ ಕನ್ನಡನಾಡು ವಿಜೃಂಭಿಸಬೇಕೆನ್ನುವ ಸದಾಶಯಗಳ ಕುವೆಂಪು ಅವರು ನಮ್ಮ ಸಮಾಜದ ಮೌಢ್ಯ, ಅವಿವೇಕ ಮತ್ತು ಅರ್ಥಹೀನ ಆಚರಣೆಗಳ ಕಡು ವಿರೋಧಿಯಾಗಿದ್ದರು. ಮದುವೆ, ತಿಥಿ, ಹಬ್ಬ-ಹರಿದಿನ ಮತ್ತಿತರ ಖಾಸಗಿ ಕಾರ್ಯಕ್ರಮಗಳು ಹಳ್ಳಿಗಾಡಿನ ಬಡವರ ಹಣಕಾಸಿನ ಸ್ಥಿತಿಯನ್ನು ಚಿಂತಾಜನಕ ಮಟ್ಟಕ್ಕೆ ತಂದಿರುವ ರೀತಿಯನ್ನು ಅವರು ಪರಿಣಾಮಕಾರಿಯಾಗಿ ವಿವರಿಸಿದರು. ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಯ ಮದುವೆಯನ್ನು ತೀರಾ ಸರಳವಾಗಿ ನೆರವೇರಿಸುವುದು ಸೂಕ್ತವೆಂದು ತೀರ್ಮಾನಿಸಿದರು: ‘‘ನೋಡು, ಐವತ್ತು ಜನಕ್ಕಿಂತ ಹೆಚ್ಚು ಜನರು ನಿನ್ನ ಲಗ್ನಕ್ಕೆ ಸೇರಬಾರದು. ಹಾಗಿದ್ದಲ್ಲಿ ಮಾತ್ರ ನಾನು ಅಲ್ಲಿಗೆ ಬರುತ್ತೇನೆ’’ ಎಂದು ವರನಿಗೆ ತಿಳಿಸಿದರು.ಅದರಂತೆ ತೀರಾ ಹತ್ತಿರದ ರಕ್ತಸಂಬಂಧಿಗಳು ಮತ್ತು ವಿವಿಧ ಹಿನ್ನೆಲೆಗಳ ಕೇವಲ ಮೂವತ್ತಾರು ಮಂದಿ ಆಪ್ತರು ಮಾತ್ರ ಅಲ್ಲಿದ್ದರು. ಮೂಡಿಗೆರೆ ತಾಲೂಕಿನ ಕಾಫಿ ತೋಟದ ಆ ಸರಳ ಸಮಾರಂಭದಲ್ಲಿ ಮಾಂಸಾಹಾರ ಹಾಗೂ ಸಸ್ಯಾಹಾರದ ಊಟೋಪಚಾರಗಳು ಇದ್ದವು.

ಈ ಬಗೆಯ ಚಟುವಟಿಕೆಗಳ ಕಣ್ಣೆದುರಿನ ಪಾಠ ನಮಗೆಲ್ಲ ಹೊಸ ಬದುಕಿನ ಸಾಧ್ಯತೆಗಳನ್ನು ತೋರಿಸಿತು. ಜನತಂತ್ರ ವ್ಯವಸ್ಥೆಯಲ್ಲಿ ಜನತೆ ಮತ್ತು ಜನಭಾಷೆಗಳಿಗೆ ಮೊದಲ ಮನ್ನಣೆ ನೀಡಬೇಕಾದ ಅವಶ್ಯಕತೆಯ ಪ್ರಮುಖ ಭಾಗವಾಗಿ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿದ್ದವು. ಆಡಳಿತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಸಿಗಬೇಕಾದ ಮಾನ್ಯತೆಯ ಕಾರಣಕ್ಕಾಗಿ ‘‘ಇಂಗ್ಲಿಷ್ ಇಳಿಸಿ, ಕನ್ನಡ ಬಳಸಿ’’ ಎಂಬ ಬೃಹತ್ ಮೆರವಣಿಗೆ ಮೈಸೂರಿನಲ್ಲಿ ನಡೆಯಿತು. ಸ್ವಯಂ ಇಂಗ್ಲಿಷ್ ಅಧ್ಯಾಪಕರಾಗಿದ್ದ ಅನಂತಮೂರ್ತಿ ಸಹ ಅಲ್ಲಿನ ಮುಂಚೂಣಿಯಲ್ಲಿ ಪ್ರತಿಭಟನಾ ಬರಹಗಳೊಡನೆ ಉತ್ಸಾಹದಿಂದ ನಮ್ಮಾಡನೆ ಭಾಗವಹಿಸಿದ್ದರು. ಶಾಂತವೇರಿ ಗೋಪಾಲಗೌಡರ ಅಧ್ಯಕ್ಷತೆಯಲ್ಲಿ ನಾವೆಲ್ಲಾ ಸೇರಿ ಕವಿಗೋಷ್ಠಿಯನ್ನು ಏರ್ಪಡಿಸಿದ್ದೆವು. ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬೆಸಗರಹಳ್ಳಿ, ಆಲನಹಳ್ಳಿ, ನಾನು ಮತ್ತಿತರರು ಭಾಗವಹಿಸಿ ಆಗಾಗ ಬಹುಮಾನಗಳನ್ನು ಗಳಿಸಿದೆವು.

ಆ ಕಾಲದಲ್ಲಿ ರಾಮಮನೋಹರ ಲೋಹಿಯಾ ಅವರ ತುಂಬಾ ಉಪಯುಕ್ತ ಹಾಗೂ ಸಂವೇದನಾಶೀಲ ಬರಹಗಳ ದಟ್ಟವಾದ ಪ್ರಭಾವ ಸಮಾಜವಾದಿ ಯುವಜನ ಸಭಾದ ನಮ್ಮೆಲ್ಲರ ಮೇಲೆ ಉಂಟಾಗಿತ್ತು. ವರ್ಗ, ವರ್ಣ, ಜಾತಿ, ಅಸ್ಪಶ್ಯತೆೆ ಮತ್ತು ಲಿಂಗಭೇದ ನೀತಿಯ ಅಸಹ್ಯಕರ ಅಸಮಾನತೆಗಳ ವಿರುದ್ಧ ಅತ್ಯಂತ ಸೂಕ್ಷ್ಮತೆಯ ವಿವರಗಳು ನಮ್ಮ ಓದು, ಚರ್ಚೆ, ಮನನ ಮತ್ತು ಹೋರಾಟದ ಪ್ರಯತ್ನಗಳ ಮೂಲಕ ಮನದಟ್ಟಾಗತೊಡಗಿದವು. ಮಹಿಳೆ, ದಲಿತ ಮತ್ತು ತಬ್ಬಲಿ ಜಾತಿಗಳ ಪ್ರಾತಿನಿಧ್ಯವಿಲ್ಲದ ಯಾವುದೇ ಸಂಘಟನೆ ಸಹ ಅನಾರೋಗ್ಯಕಾರಿಯೆಂಬುದು ನಮಗೆಲ್ಲಾ ಮನದಟ್ಟಾಯಿತು. ಲೋಹಿಯಾ ಚಿಂತನೆ ಮತ್ತು ಸೃಜಶೀಲತೆಯ ಪ್ರಯೋಗಗಳು ನನ್ನಲ್ಲಿ ಅಂಬೇಡ್ಕರ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಬಗೆಗೆ ಹೆಚ್ಚಾಗಿ ಅರಿಯುವ ಕುತೂಹಲ ಮತ್ತು ಉತ್ಸಾಹವನ್ನು ದಟ್ಟವಾಗಿ ಉಂಟುಮಾಡಿದವು. ಗಾಂಧಿ ಬದುಕಿನ ಆದರ್ಶಗಳನ್ನು ಎಳೆಹರೆಯದಲ್ಲಿಯೇ ಮೈಗೂಡಿಸಿಕೊಂಡಿದ್ದ ಲೋಹಿಯಾ ಜರ್ಮನ್ ಭಾಷೆ ಕಲಿತು ಕಾರ್ಲ್‌ಮಾರ್ಕ್ಸ್‌ನದಾಸ್ ಕ್ಯಾಪಿಟಲ್ ಗ್ರಂಥವನ್ನು ಮೂಲದಲ್ಲಿಯೇ ಅಧ್ಯಯನ ಮಾಡಿದ್ದರು. ಅದೇ ಅವಧಿಯಲ್ಲಿ ಅಲ್ಲಿದ್ದ ಹಿಟ್ಲರ್‌ನ ಜನಾಂಗದ್ವೇಷಿ ಚಟುವಟಿಕೆಗಳನ್ನು ಸಹ ಕಣ್ಣಾರೆ ಕಂಡಿದ್ದರು. ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಆಳವಾಗಿ ಮುಳುಗಿದ್ದ ರಾಮಮನೋಹರರು ಸ್ವಾತಂತ್ರಾನಂತರದ ಜನತಂತ್ರ ವ್ಯವಸ್ಥೆಯ ನಿರಾಳ ಚೌಕಟ್ಟಿನಲ್ಲಿ, ಇಲ್ಲಿನ ಸುಡುವಾಸ್ತವಗಳ ಹಿನ್ನೆಲೆಯಲ್ಲಿ ನಿರಂತರವಾಗಿ ಹಮ್ಮಿಕೊಳ್ಳಬೇಕಾದ ಸಮಾಜವಾದಿ ಹೋರಾಟದ ಮಾರ್ಗಗಳನ್ನು ಹುಡುಕತೊಡಗಿದರು.

ಮೈಸೂರು ಮಹಾರಾಜ ಕಾಲೇಜಿನ ಪದವಿ ತರಗತಿಗಳ ಅಧ್ಯಯನದ ಆರಂಭದ ದಿನಗಳಲ್ಲೇ ಈ ಬಗೆಯ ವಾತಾವರಣ ಮತ್ತು ಜನ್ಮಸಾಫಲ್ಯದ ಕ್ಷಣಗಳ ಹುಡುಕಾಟದ ತಹತಹ ಒಟ್ಟಿಗೇ ಸಮ್ಮಿಲನಗೊಂಡವು.ರಜಾದಿನಗಳಲ್ಲಿ ನನ್ನೆಲ್ಲಾ ಸಮಯವನ್ನು ಹೆಚ್ಚಾಗಿ ನನ್ನ ಊರು ಮತ್ತು ಸುತ್ತಲ ಹಳ್ಳಿಗಳ ದಲಿತ ಕೇರಿಗಳಲ್ಲಿ ಕಳೆಯತೊಡಗಿದೆ. ಆ ಕಾಲದಲ್ಲಿ ಪ್ರತಿಯೊಂದಕ್ಕೂ ಅಸ್ಪಶ್ಯ ಬಂಧುಗಳಿಗೆ ಬಹಿಷ್ಕಾರ ಮತ್ತು ದಂಡ ವಿಧಿಸುವ ಅನಿಷ್ಟಕಾರಕ ಕೋಟಲೆಗಳಿರುತ್ತಿದ್ದವು.ಅಂತಹ ಸಂದರ್ಭಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸ್ ಸ್ಟೇಷನ್‌ಗಳಿಗೆ ದೂರುಕೊಡುವಂತೆ ನಾನು ಮತ್ತು ನನ್ನ ಆತ್ಮೀಯ ಗೆಳೆಯರ ಬಳಗ ಸತತವಾಗಿ ಪ್ರಯತ್ನಿಸುತ್ತಿದ್ದೆವು. ಹೀಗಾಗಿ ಈ ಅವಕಾಶವಿಹೀನ ಬಂಧುಗಳ ನಿತ್ಯದ ತಾಜಾ ಬದುಕಿನ ಅನಾವರಣ ನಮಗೆ ಆಗತೊಡಗಿತು.

ಇದೇ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ನಮ್ಮಲ್ಲಿನ ಜನಪ್ರಿಯ ತಾಣವಾದ ‘‘ಅಯ್ಯನಗುಡಿ’’ ದೇವಸ್ಥಾನದ ಪುನರುಜ್ಜೀವನದ ಸಲುವಾಗಿ ಜನರ ಹಣವನ್ನು ಖರ್ಚು ಮಾಡತೊಡಗಿದರು.‘‘ಈಗಿರುವ ಕಲ್ಲಿನ ಆ ಗುಡಿ ಭದ್ರವಾಗಿದೆ, ಚೆನ್ನಾಗಿದೆ. ಅದು ತಂತಾನೇ ಸರಳವಾಗಿ ಇರುವುದು ಸೂಕ್ತ. ಶಾಲೆ, ಕಾಲೇಜು, ಗ್ರಂಥಾಲಯ, ರಸ್ತೆ, ಕೆರೆಕಟ್ಟೆ, ಹಾಸ್ಟೆಲ್‌ಗಳು ನಮ್ಮ ಹೊಸಕಾಲದ ದೇವಾಲಯಗಳಾಗಬೇಕು..’’ಮುಂತಾದ ವೈಚಾರಿಕ ವಿಚಾರಧಾರೆಯ ನನ್ನ ಬರಹ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದನ್ನು ಮೆಚ್ಚಿ ಅನೇಕರು ನನ್ನನ್ನು ಸಂಪರ್ಕಿಸಿದರು. ಆ ಕಾಲದ ಪ್ರಖ್ಯಾತ ವಿಚಾರವಾದಿ ಬಿ.ಬಸವಲಿಂಗಪ್ಪನವರು ನನಗೆ ಪತ್ರ ಬರೆದು ಅಭಿನಂದಿಸಿದರು. ಕೆಲವು ದಿನಗಳ ನಂತರ ಮೈಸೂರಿನಲ್ಲಿ ನನ್ನನ್ನು ಭೇಟಿ ಮಾಡಿದ ಅವರು ತಮ್ಮ ಹರಿಹರಭಾಗದ ಕನ್ನಡದ ಪ್ರೀತಿ ತೋರುತ್ತಾ ‘‘ಏನಪ್ಪಾ, ನಿನ್ನ ತಾಲೂಕಿನ ಯಾವ ದಲಿತ ನನ್ನಲ್ಲಿ ಬಂದರೂ ಕೂಡ- ನೀನು ಅವರನ್ನೆಲ್ಲಾ ಬೇಷರತ್ತಾಗಿ ಬೆಂಬಲಿಸಿ, ಧೈರ್ಯ ತುಂಬುತ್ತಿರುವ ಬಗ್ಗೆ ಹೆಮ್ಮೆಪಡುತ್ತಾನೆ. ನಿನ್ನ- ಶಾಲೆ, ಕಾಲೇಜು, ಗ್ರಂಥಾಲಯದ ಬದ್ಧತೆ....... ನಮ್ಮ ಬಾಬಾಸಾಹೇಬರ ಬದುಕಿನ ಉನ್ನತ ಕನಸಾಗಿತ್ತು. ನಾವೆಲ್ಲ ಕೂಡಿ ಈ ದಿಕ್ಕಿನಲ್ಲಿ ಒಟ್ಟಿಗೆ ಮುಂದುವರಿಯೋಣ’’ ಎಂದು ಹುರಿದುಂಬಿಸಿದರು.

 ಮಾನಸಗಂಗೋತ್ರಿಯಲ್ಲಿನ ನನ್ನ ಎಂ.ಎ. ವಿದ್ಯಾಭ್ಯಾಸದ ನಂತರ ಕೊಡಗಿನ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ 1971ರ ಜುಲೈನಲ್ಲಿ ಕನ್ನಡ ಉಪನ್ಯಾಸಕನಾಗಿ ನೇಮಕಗೊಂಡೆ.ಅದು ಅಲ್ಲಿನ ಹೊಸ ಕಾಲೇಜಾದುದರಿಂದ ಸುತ್ತಮುತ್ತಲ, ದೂರದ ವನಸಿರಿಯ ಒಳಭಾಗದಿಂದ ನಡೆದುಕೊಂಡೇ ಧಾವಿಸುತ್ತಿದ್ದ ವಿದ್ಯಾರ್ಥಿಗಳು ತಪ್ಪದೆ ಹಾಜರಾಗುತ್ತಿದ್ದರು. ಹೆಣ್ಣುಮಕ್ಕಳೇ ಹೆಚ್ಚಾಗಿದ್ದ ಅಲ್ಲಿನ ಶುದ್ಧಗಾಳಿಯ, ಹರ್ಷಚಿತ್ತದ ವಾತಾವರಣ ನಿಜಕ್ಕೂ ಸ್ವರ್ಗಸದೃಶವಾಗಿತ್ತು. ಜೂನ್-ಜುಲೈ-ಆಗಸ್ಟ್-ಸೆಪ್ಟ್ಟಂಬರ್ ಪೂರ್ತಿ ಆ ಕಾಲ ಸತತ ಮಳೆಗಾಲ. ರೈನ್‌ಶೂ ಮತ್ತು ಬೆಚ್ಚನೆಯ ಉಡುಪಿನ, ಹಿತಕರ ಊಟೋಪಚಾರಗಳ, ಕಣ್ತುಂಬ ನಿದ್ರೆಯ ಆ ಲೋಕ ಆನಂದದಾಯಕ ಗೆಲುವಿನ ಶಾಶ್ವತ ಆಗರ; ಹೊಗೆ, ಧೂಳುಗಳ ಸೋಂಕಿಲ್ಲದ, ಆರ್ಥಿಕ ಅನನುಕೂಲಗಳ ನಡುವೆಯೂ ಕನಿಷ್ಠ ಸ್ವಚ್ಛತೆ ಮತ್ತು ನಗುಮೊಗದ ಚೆಲುವು ತುಂಬಿದ ಆ ಜನಗಳ ಒಡನಾಟದ ಕ್ಷಣಗಳು ಯಥೇಚ್ಛವಾಗಿದ್ದವು. ಅರ್ಧದಷ್ಟು ಜನ ನನ್ನ ವಯಸ್ಸಿನ ಆಚೀಚಿನವರೇ ತುಂಬಿದ್ದ ಅಲ್ಲಿನ ತರಗತಿಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ಸಾಮಾಜಿಕ ನ್ಯಾಯ ಸಂಬಂಧದ ಆರೋಗ್ಯಕರ ಬದುಕಿನ ಆಶಯಗಳನ್ನು ಕುರಿತು ವಿಶ್ಲೇಷಿಸುವ ಸಡಗರದ ಸೌಭಾಗ್ಯ ನನ್ನದಾಗಿತ್ತು.ಆರೇಳು ಅವಿವಾಹಿತ ಉಪನ್ಯಾಸಕರು ಒಟ್ಟಾಗಿ ಹತ್ತಿರದ ಎಸ್ಟೇಟ್ ಒಂದರ ವಿಶಾಲವಾದ ಬಾಡಿಗೆ ಮನೆಯಲ್ಲಿ, ರುಚಿಕಟ್ಟಾದ ಅಡುಗೆ ಮಾಡುವ ತಮಿಳು ಗೆಳೆಯನೊಬ್ಬನ ನೇಮಕಾತಿಯ ವೈಭವದೊಡನೆ ತಂಗಿದ್ದೆವು.

  ಮುಂದಿನ ವರ್ಷ ಜೂನ್‌ನಲ್ಲಿ ನನ್ನ ಹಳ್ಳಿಯಲ್ಲಿ ಸಹಸ್ರಾರು ಮಂದಿ ಆಸಕ್ತರ ಕುತೂಹಲದ ನಡುವಣ ಬೃಹತ್ ವೈಚಾರಿಕ ಸಮ್ಮೇಳನದ ಭಾಗವಾಗಿ ನನ್ನ ಸರಳ ಮದುವೆ ನಡೆಯಿತು.ಆಡಂಬರ, ವೈಭವ, ಹಣಕಾಸಿನ ದುಂದುಗಳಿಲ್ಲದ ನನ್ನೂರಿನ ದಲಿತ ಬಂಧುವಿನ ನೇತೃತ್ವದಲ್ಲಿ ಈ ಪವಿತ್ರಕಾರ್ಯ ನಡೆಯಬೇಕೆನ್ನುವುದು ನನ್ನ ಹಂಬಲವಾಗಿತ್ತು. ಇದಕ್ಕೆ ಸಮ್ಮತಿಸಿದ್ದ ಆ ದಲಿತಮಿತ್ರ ಕೊನೇಗಳಿಗೆಯಲ್ಲಿ ಸಾಂಪ್ರದಾಯಿಕ ಹಳ್ಳಿಗಾಡಿನ ಪರಿಸರದಲ್ಲಿ ಗದ್ದಲವಾಗಬಹುದೆಂದು ಬೆಚ್ಚಿದ. ಈ ಬಗ್ಗೆ ಸಮಾಜವಾದಿ ಹಿನ್ನೆಲೆಯ ಕ್ರಿಯಾಶಾಲಿ ರಾಜಕಾರಣಿ ಕೆ.ಎಚ್.ರಂಗನಾಥ್ ಅವರಲ್ಲಿ ಚರ್ಚಿಸಿದೆ. ಆಶ್ಚರ್ಯಚಕಿತರೂ, ಉತ್ಸಾಹ ಪೂರ್ಣರೂ ಆಗಿ ಗೆಲುವಿನಿಂದ ಕೂಡಿದ ಅವರು ‘‘ಈ ಬಗೆಯ ಜನಪರ ಚಟುವಟಿಕೆಗಳನ್ನು ಹಳ್ಳಿಗಾಡಿನಲ್ಲಿ ನಾವೆಲ್ಲಾ ಒಟ್ಟಾಗಿ ನೆರವೇರಿಸುವುದರ ಮೂಲಕ ಮಾತ್ರ ಸಾರ್ಥಕ ಹೊಸ ಬದುಕು ಸಾಧ್ಯವಾಗುತ್ತದೆ. ಹುಟ್ಟಿನಿಂದ ನಾನೂ ಸಹ ದಲಿತನೇ: ನಡೆಯಿರಿ, ಲಗ್ನಕಾರ್ಯ ದಲ್ಲಿ ನಾನೇ ಸಂತೋಷದಿಂದ ವಧೂವರರಿಗೆ ಬದುಕಿನ ಬದ್ಧತೆಯ ಪ್ರಮಾಣವಚನ ಬೋಧಿಸುತ್ತೇನೆ’’ ಎಂದು ನನ್ನನ್ನು ಮನಸಾರೆ ಮೆಚ್ಚಿ ಶುಭಕೋರಿದರು. ಕಲ್ಲೆಶಿವೋತ್ತಮರಾವ್, ಮಲ್ಲಿಕಾರ್ಜುನಸ್ವಾಮಿ ಮತ್ತಿತರರು ಜೊತೆಯಾದರು. 08-06-1972 ರಂದು ನಡೆದ ಈ ಕಾರ್ಯಕ್ರಮದ ವರದಿ ಮರುದಿನದ ಪ್ರಜಾವಾಣಿಯ ಮುಖಪುಟದಲ್ಲಿ ‘‘ಮೂಢಸಂಪ್ರದಾಯ ವಿರೋಧಿ ಸಮ್ಮೇಳನ: ಮಾದರಿ ವಿವಾಹ’’ ಎಂದು ಪ್ರಧಾನವಾಗಿ ಪ್ರಕಟವಾಯಿತು. ವರದಿಗಾಗಿ ಬಂದು ಖುದ್ದಾಗಿ ಭಾಗವಹಿಸಿದವರು ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್; ಇವರನ್ನು ಆಸ್ಥೆಯಿಂದ ಕಳುಹಿಸಿದ್ದವರು ಅಂದಿನ ಪ್ರಜಾವಾಣಿ ಸುದ್ದಿ ಸಂಪಾದಕರೂ, ಲೋಹಿಯಾ ಸಮಾಜವಾದಿಯೂ ಆಗಿದ್ದ ಖಾದ್ರಿಶಾಮಣ್ಣ ಅವರು. ತಾಲೂಕಿನ ಅತ್ಯಂತ ದೊಡ್ಡ ಗ್ರಾಮವಾದ ನಾಗವಾರದಲ್ಲಿ ಆಸ್ಪತ್ರೆಯಿಲ್ಲದ ಕಾರಣಕ್ಕಾಗಿ ನಾನು ಆ ದಿನದ ಶುಭನೆನಪಿನಲ್ಲಿ ಊರಿನ ಸಾರ್ವಜನಿಕ ಆಸ್ಪತ್ರೆಯ ನಿಧಿಗಾಗಿ ನನ್ನ ಒಂದು ತಿಂಗಳ ಸಂಬಳ ಅರ್ಪಿಸುವುದಾಗಿ ಪ್ರಕಟಿಸಿದೆ. ಅಲ್ಲಿ ಭಾಗವಹಿಸಿದ್ದ ಅನೇಕರು ಆ ಜನೋಪಯೋಗಿ ನಿಧಿಗಾಗಿ ಇನ್ನಷ್ಟು ಹಣವನ್ನು ಸ್ಥಳದಲ್ಲೇ ನೀಡಿದರು.

  ಊರಿನಲ್ಲಿ ಮದುವೆಯಾದ ತಿಂಗಳ ಕೊನೆಯಲ್ಲಿ ನಾನು ಕೊಡಗಿನಲ್ಲಿ, ಕಾಲೇಜಿನ ಆವರಣದ ಸಮೀಪದಲ್ಲಿ ಪುಟ್ಟ ಮನೆ ಮಾಡಿ ಸಂಸಾರ ಆರಂಭಿಸಿದೆ. ಅತ್ಯಂತ ಕಡಿಮೆ ಖರ್ಚಿನ, ಸಾಲದ ಹೊರೆಯಿಲ್ಲದ ಸರಳ ಮದುವೆಯೆಂದು ನಾಡಿನ ಪತ್ರಿಕೆಗಳಲ್ಲಿ ನನ್ನ ಲಗ್ನದ ಮಾಹಿತಿಗಳನ್ನು ತಿಳಿದು ಕೊಡಗಿನ ಕುತೂಹಲಿಗಳನೇಕರು ಬೆನ್ನಹಿಂದೆ ತುಂಬು ಪ್ರೀತಿಯಿಂದಲೇ ‘‘ಅಂಜಿ ರೂಪಾಯಿ ಮಂಗಲಕಾರ’’ (ಐದು ರೂಪಾಯಿ ಮದುಮಗ) ಎಂದು ಬೆರಗಿನಿಂದ ಪ್ರಶಂಸಿಸತೊಡಗಿದರು. ಮೈಸೂರಿನ ದಲಿತ ತರುಣನೊಬ್ಬ ಬಡತನದ ಕಾರಣದಿಂದಾಗಿ ಇಲ್ಲಿನ ಕಾಫಿತೋಟದಲ್ಲಿ ಕೂಲಿ ಮಾಡುತ್ತಾ ಪಿಯುಸಿ ಓದುತ್ತಿದ್ದ. ಆತನ ಕಷ್ಟ ಕೇಳಿ ‘‘ಸರಿ ನೀನು ನನ್ನ ಮನೆಯಲ್ಲೇ ಉಳಿದುಕೋ’’ ಎಂದೆ.ಅವನ ಆಗಮನವನ್ನು ನನ್ನಜೀವನ ಸಂಗಾತಿ ಕೆಂಪಮ್ಮ ಸಹ ಒಪ್ಪಿದ್ದು ನನಗೆ ಆನಂದ ತಂದಿತು. ಬುದ್ಧ, ಬಸವ, ಅಕ್ಕ, ಅಲ್ಲಮ, ಕುವೆಂಪು, ಕಾರಂತರ ಬಗೆಗಿನ ನನ್ನ ತರಗತಿಯ ಪಾಠಗಳನ್ನು ಕೇಳಿ, ಸದ್ದಿಲ್ಲದೇ ಅಲ್ಲಿನ ಮೂಲಭೂತವಾದಿಗಳಿಗೆ, ಅದೇ ದಿಕ್ಕಿನ ಆಲೋಚನೆಯ ಕೆಲವು ವಿದ್ಯಾರ್ಥಿಗಳು ಸುದ್ದಿ ನೀಡಿರಬೇಕು. ‘‘ನಾಸ್ತಿಕವಾದಿ ನಾಗವಾರರಿಗೆ ಧಿಕ್ಕಾರ’’ ಎಂಬ ಮುಖಪುಟದ ತಲೆಬರಹ ಪ್ರಧಾನವಾಗಿ ಸ್ಥಳೀಯ ದಿನಪತ್ರಿಕೆ ‘‘ಹಿತವಾಣಿ’’ಯಲ್ಲಿ ಒಂದು ಸುಂದರ ಮುಂಜಾನೆ ದೊಡ್ಡದಾಗಿ ಪ್ರಕಟವಾಯಿತು. ನನಗೆ ಈ ಬಗ್ಗೆ ಯಾವ ಆಶ್ಚರ್ಯ ಅಥವಾ ಗಾಬರಿ ಆಗಲಿಲ್ಲ; ಬದಲಾಗಿ ನಾನೊಬ್ಬ ಸಾಹಿತ್ಯದ ಪರಿಣಾಮಕಾರಿ ಅಧ್ಯಾಪಕನೆನ್ನುವ ಹೆಮ್ಮೆಯುಂಟಾಯಿತು. ತುಂಬು ಅಚ್ಚರಿಯ ಸಂಗತಿಯೆಂದರೆ- ಆಗಿನ ‘‘ಹಿತವಾಣಿ’’ ಪತ್ರಿಕೆಯ ಸಂಪಾದಕ, ಜನಸಂಘದ ಶಾಸಕ ಎ.ಕೆ. ಸುಬ್ಬಯ್ಯ! ದಶಕಗಳು ಕಳೆದ ನಂತರ ಈ ಅಜ್ಜಿಕುಟ್ಟಿರ ಸುಬ್ಬಯ್ಯ ಮತ್ತು ನಾನು ಪರಮಾಪ್ತರಾದೆವು: ಆ ದಿನಗಳ, ಆ ಬಗೆಯ ತಮ್ಮ ಅವಿವೇಕಕ್ಕಾಗಿ ಸುಬ್ಬಯ್ಯ ಅನೇಕಸಲ ನನ್ನೊಡನೆ ಮುಕ್ತವಾಗಿ ಚರ್ಚಿಸಿ, ತಮಗೆ ತಾವೇ ಕನಿಕರಿಸಿ ಮನಸಾರೆ ನಕ್ಕು ಹಗುರಾದರು! ಮಾಜಿ ಮಂತ್ರಿ ಕೆ.ಜೆ.ಜಾರ್ಜ್ ಆಗ ಅಲ್ಲಿನ ಪರಿಸರದ ಕಿರಿಯ ವಿದ್ಯಾರ್ಥಿ. ಆತನಿಗೆ ಹೊಡೆದು, ಬಡಿದು, ಬೆದರಿಸುವ ಘಾತುಕತನದ ಅತಿರೇಕಗಳು ಸುತ್ತಲ ಮತಿಗೇಡಿಗಳ ಕಡೆಯಿಂದ ಆಗುತ್ತಿದ್ದವು.‘‘ಆತ ಮರಗಳ್ಳನಾಗಿದ್ದಲ್ಲಿ, ದಯಮಾಡಿ ತಪ್ಪದೆ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರಿಗೆ ದೂರು ಕೊಡಿ.ಆದರೆ, ಕ್ರಿಶ್ಚಿಯನ್ ಎಂಬ ಕಾರಣದಿಂದಾಗಿ ಆ ಯುವಕನ ಮೇಲೆ ಹಲ್ಲೆ ಮಾಡಬಾರದು’’ ಎಂದು ಹಿಂಸಾವಾದಿಗಳಿಗೆ ತಿಳಿಹೇಳಿದೆ. ಜೊತೆಗೆ ಸ್ಥಳೀಯ ಶಾಸಕ ಜೇನುಕುರುಬರ ಸುಬ್ಬಯ್ಯ ಮತ್ತು ಗೋಣಿಕೊಪ್ಪಲು ಪೊಲೀಸ್ ಸ್ಟೇಷನ್‌ನ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡೆ.

ಹೈದರಾಬಾದ್ ಕರ್ನಾಟಕದ ಬೀದರ್ ಭಾಗದಲ�

Writer - ಪ್ರೊ. ಕಾಳೇಗೌಡ ನಾಗವಾರ

contributor

Editor - ಪ್ರೊ. ಕಾಳೇಗೌಡ ನಾಗವಾರ

contributor

Similar News

ಬೀಗ