ಹೊಸ ವರ್ಷದ ನಿರೀಕ್ಷೆಗಳು

Update: 2022-01-03 04:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹತ್ತು ಹಲವು ವಿವಾದಗಳು, ನೋವು, ದುಮ್ಮಾನಗಳ ಜೊತೆಗೆ 2021ನೇ ವರ್ಷ ಮುಗಿದಿದೆ. ಹೊಸ ವರ್ಷ ಭಾರತದ ಪಾಲಿಗೆ ಹೊಸತೇನನ್ನೋ ನೀಡಲಿದೆ ಎನ್ನುವ ನಿರೀಕ್ಷೆ ಯಾರಲ್ಲೂ ಕಾಣುತ್ತಿಲ್ಲ. ಕೊರೋನಾ, ಲಾಕ್‌ಡೌನ್‌ನಿಂದಾಗಿ ತತ್ತರಿಸಿದ ಬದುಕನ್ನು, ರಾಮಮಂದಿರ, ಮತಾಂತರ ಕಾಯ್ದೆ, ಸಿಎಎ ಮೊದಲಾದ ಕಾಯ್ದೆಗಳು ಯಾವ ರೀತಿಯಲ್ಲೂ ಮೇಲೆತ್ತಲಾರವು. ಭಾರತದ ಭವಿಷ್ಯವನ್ನು ರೂಪಿಸುವ ಅಭಿವೃದ್ಧಿಗೆ ಬೇಕಾದ ರೂಪುರೇಷೆಗಳನ್ನು ಹಾಕಿಕೊಳ್ಳಲು ವಿಫಲವಾಗಿರುವ ಸರಕಾರ, ಇದೀಗ ಭಾವನಾತ್ಮಕ ವಿಷಯಗಳಿಗೆ ಹೆಚ್ಚು ಆದ್ಯತೆಗಳನ್ನು ನೀಡುತ್ತಿವೆ. ಈ ಮೂಲಕ ಸಮಾಜದಲ್ಲಿ ಉದ್ವಿಗ್ನ ವಾತಾವರಣವನ್ನು ನಿರ್ಮಿಸುವುದೇ ಅದರ ಮುಖ್ಯ ಗುರಿ. ಈಗಾಗಲೇ ಸರಕಾರ ತರುತ್ತಿರುವ ಹೊಸ ಹೊಸ ಕಾಯ್ದೆಗಳು ಹೊಸ ವರ್ಷವನ್ನು ಇನ್ನಷ್ಟು ಭೀಕರಗೊಳಿಸಲಿದೆ ಎನ್ನುವ ಆತಂಕ ಎಲ್ಲರದು. ಆದುದರಿಂದ, ಹೊಸ ವರ್ಷಕ್ಕಾಗಿ ಸಂಭ್ರಮಿಸುವ ಸ್ಥಿತಿಯಲ್ಲಿ ದೇಶದ ಜನರಿಲ್ಲ.

ವರ್ಷಾಂತ್ಯವನ್ನು ತಮ್ಮ ದ್ವೇಷ ಸಾಧನೆಗಳಿಗೆ ಕೆಲವು ಸಂಘಟನೆಗಳು ಬಳಸುತ್ತಿರುವುದು ಭಾರತದ ಭವಿಷ್ಯದ ಕುರಿತಂತೆ ಒಳ್ಳೆಯ ಸೂಚನೆಗಳನ್ನು ನೀಡುವುದಿಲ್ಲ. ಶಾಲೆ ಕಾಲೇಜುಗಳಿಗೆ ನುಗ್ಗಿ ಕ್ರಿಸ್‌ಮಸ್ ಆಚರಿಸುತ್ತಿದ್ದಾರೆ ಎಂದು ದಾಂಧಲೆ ನಡೆಸುವುದು, ಯಾವುದೇ ಕ್ರಿಸ್‌ಮಸ್ ಆಚರಣೆಗಳನ್ನು ನಡೆಸಿದರೂ, ‘ಮತಾಂತರ ನಡೆಯುತ್ತಿದೆ’ ಎಂದು ಹುಯಿಲೆಬ್ಬಿಸುವುದು ಡಿಸೆಂಬರ್ ತಿಂಗಳ ವಿಶೇಷವಾಗಿದೆ. ಇದೇ ಸಂದರ್ಭದಲ್ಲಿ, ‘ಹೊಸ ವರ್ಷ ಆಚರಣೆ’ಯನ್ನ್ನು ಸಂಘಪರಿವಾರ ಸಂಘಟನೆಗಳು ನಿಷೇಧಿಸಿವೆ. ಭಾರತೀಯ ಸಂಪ್ರದಾಯ ಪ್ರಕಾರ ಹೊಸ ವರ್ಷ ಆರಂಭವಾಗುವುದು ಜನವರಿ1ರಂದು ಅಲ್ಲ ಎನ್ನುವುದು ಇವರ ಅಭಿಪ್ರಾಯ. ಭಾರತದಲ್ಲಿ ಹೊಸ ವರ್ಷಗಳನ್ನು ಬೇರೆ ಬೇರೆ ಸಂದರ್ಭದಲ್ಲಿ ಗುರುತಿಸಲಾಗುತ್ತದೆ. ವೈದಿಕ ಸಂಪ್ರದಾಯದಂತೆ, ಯುಗಾದಿಯನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ತುಳು ನಾಡಿನಲ್ಲಿ ಬಿಸುವನ್ನು ಹೊಸ ವರ್ಷವಾಗಿ ಗುರುತಿಸಲಾಗುತ್ತದೆ. ಮುಸಲ್ಮಾನರು ಹೊಸ ವರ್ಷವಾಗಿ ಮೊಹರಂ 1ನ್ನು ಆಚರಿಸುತ್ತಾರೆ. ಆದರೆ ಜನವರಿ 1ನ್ನು ಹೊಸ ವರ್ಷವಾಗಿ ಗುರುತಿಸುವುದಕ್ಕೆ ಪ್ರಮುಖ ಕಾರಣವಿದೆ. ಭಾರತದ ಜನಜೀವನ ದೈನಂದಿನ ಚಟುವಟಿಕೆಗಳಿಗೆ ಅವಲಂಬಿಸುವುದು ಇಂಗ್ಲಿಷ್ ಕ್ಯಾಲೆಂಡರ್‌ಗಳನ್ನು. ನಮ್ಮ ಸರಕಾರಿ ಕಚೇರಿಗಳು ಇದೇ ಕ್ಯಾಲೆಂಡರ್‌ನ್ನು ನೆಚ್ಚಿಕೊಂಡಿವೆ. ವರ್ಷವಿಡೀ ಇಂಗ್ಲಿಷ್ ಕ್ಯಾಲೆಂಡರ್‌ನಂತೆ ಯೋಜನೆಗಳನ್ನು ರೂಪಿಸಿ, ವರ್ಷ ಮುಗಿಯುತ್ತಿರುವಂತೆಯೇ ‘ನಮ್ಮ ಹೊಸ ವರ್ಷ ಬೇರೆ’ ಎಂದು ವಾದಿಸುವುದು ಆಷಾಡಭೂತಿತನವಾಗುತ್ತದೆ. ಹಾಗೆಂದು ಹೊಸ ವರ್ಷವನ್ನು ಆಚರಿಸುವ ಆಧುನಿಕ ಯುವಕರ ರೀತಿಯೂ ಸಮರ್ಥನೀಯವಲ್ಲ. ಮಧ್ಯರಾತ್ರಿಯವರೆಗೆ ಕಂಠಪೂರ್ತಿ ಕುಡಿದು, ಅವಾಂತರಗಳನ್ನು ಸೃಷ್ಟಿಸುವುದು ಹೊಸ ವರ್ಷವನ್ನು ಆಚರಿಸುವ ಕ್ರಮವೇ ಆಲ್ಲ. ಇಂತಹ ಆಚರಣೆಗಳ ಮೂಲಕ ನಾವು ಹೊಸ ವರ್ಷವನ್ನು ಅನಾಹುತಗಳೊಂದಿಗೆ, ವಿಷಾದದೊಂದಿಗೆ ಸ್ವಾಗತಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ಡಿಸೆಂಬರ್ 31ರಂದು ಅತಿ ಹೆಚ್ಚು ಅವಘಡಗಳು, ಅತ್ಯಾಚಾರ ಪ್ರಕರಣಗಳು, ಅಪರಾಧ ಪ್ರಕರಣಗಳು ನಡೆಯುತ್ತವೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಹೊಸ ವರ್ಷದ ಆಚರಣೆಯ ಕುರಿತಂತೆ ಯುವ ಸಮೂಹದೊಳಗಿರುವ ತಪ್ಪು ಕಲ್ಪನೆಯೇ ಇದಕ್ಕೆ ಮುಖ್ಯ ಕಾರಣ. ಸದ್ಯದ ದಿನಗಳಲ್ಲಿ ಹೊಸವರ್ಷವನ್ನು ಸಂಭ್ರಮಿಸುವುದಕ್ಕೆ ನಮ್ಮಲ್ಲಿ ಯಾವ ಕಾರಣಗಳೂ ಇಲ್ಲ. ಕ್ಯಾಲೆಂಡರ್ ಬದಲಾಗಬಹುದೇ ಹೊರತು, ನಮ್ಮ ಮುಂದಿರುವ ದುರ್ದಿನಗಳಲ್ಲ. 2021ರಲ್ಲಿ ಸಂಭವಿಸಿದ ಸಾವು ನೋವುಗಳು, ಆರ್ಥಿಕ ನಷ್ಟಗಳು, ಆತ್ಮಹತ್ಯೆಗಳನ್ನು ಗಮನಿಸಿದರೆ, ನಾವು ಹೊಸ ವರ್ಷವನ್ನು ಆತ್ಮವಿಮರ್ಶೆಗೆ ಬಳಸಿಕೊಳ್ಳಬೇಕಾಗಿದೆ. ನಾವೆಲ್ಲ ಎಲ್ಲಿ ಎಡವಿದ್ದೇವೆ, ಭವಿಷ್ಯದಲ್ಲಿ ನಮ್ಮನ್ನು ನಾವು ಎಲ್ಲಿ ತಿದ್ದಿಕೊಳ್ಳಬೇಕು ಎನ್ನುವುದನ್ನು ನಮಗೆ ನಾವೇ ಕೇಳಿಕೊಳ್ಳುವ ದಿನವಾಗಿ ಡಿಸೆಂಬರ್ 31 ಬಳಕೆಯಾಗಬೇಕು. ಇದೇ ಸಂದರ್ಭದಲ್ಲಿ ಹೊಸ ವರ್ಷದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸುವ ಮೂಲಕ, 2022ನ್ನು ನಾವು ಸಹ್ಯ ವರ್ಷವನ್ನಾಗಿ ಬದಲಾಯಿಸಬೇಕಾಗಿದೆ. ನಮ್ಮ ನಡುವೆ ಇರುವ ದ್ವೇಷ, ಸಂಕುಚಿತತೆ, ಆತಂಕಗಳನ್ನು ನಿವಾರಿಸುವ ಬಗೆಯನ್ನು ಕಂಡುಕೊಳ್ಳುವುದೇ ಹೊಸವರ್ಷವನ್ನು ಸ್ವಾಗತಿಸುವ ಸರಿಯಾದ ಕ್ರಮವಾಗಿದೆ.

ಮುಂದಿನ ದಿನಗಳು ರಾಜಕೀಯ ಕಾರಣಕ್ಕಾಗಿ ಅತ್ಯಂತ ಮಹತ್ವದ್ದಾಗಿದೆ. ಅತಿ ಮಹತ್ವದ ಚುನಾವಣೆಗಳಿಗೆ ದೇಶ ಸಜ್ಜುಗೊಳ್ಳುತ್ತಿದೆ. ಮತ್ತು ಚುನಾವಣೆಯನ್ನು ಎದುರಿಸಲು ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳಿಲ್ಲದಿರುವುದರಿಂದ, ಜನರನ್ನು ಪರಸ್ಪರ ಎತ್ತಿ ಕಟ್ಟುವುದಕ್ಕೆ ರಾಜಕಾರಣಿಗಳನ್ನು ಸಿದ್ಧತೆ ನಡೆಸುತ್ತಿದ್ದಾರೆ. ಈ ರಾಜಕೀಯ ಸಂಚುಗಳನ್ನು ಸರ್ವ ಧರ್ಮೀಯರು ತಮ್ಮ ಭಾರತೀಯ ಅಸ್ಮಿತೆಯ ಮೂಲಕ ವಿಫಲಗೊಳಿಸಬೇಕಾಗಿದೆ. ಹಾಗೆಯೇ ಹೊಸ ವರ್ಷವೂ ಕೊರೋನ ಆತಂಕಕ್ಕೆ ಯಾವ ಕಾರಣಕ್ಕೂ ಬಲಿಯಾಗಬಾರದು. ಸಾಂಕ್ರಾಮಿಕ ರೋಗಗಳ ಕುರಿತಂತೆ ಮುಂಜಾಗ್ರತೆ ಅತ್ಯಗತ್ಯ. ಹೊಸ ವರ್ಷದ ಆಚರಣೆಗಳು ಸಾಂಕ್ರಾಮಿಕ ರೋಗಗಳು ಉಲ್ಬಣಿಸುವುದಕ್ಕೆ ಕಾರಣವಾದರೆ, ಅದು ನಮ್ಮ ಭವಿಷ್ಯವನ್ನು ಇನ್ನಷ್ಟು ಭೀಕರಗೊಳಿಸಲಿದೆ. ಹೊಸ ವರ್ಷ ಕೊರೋನಾ ಮುಕ್ತವಾಗಿರಲಿ. ಲಾಕ್‌ಡೌನ್ ಮುಕ್ತವಾಗಿರಲಿ. ಕೋಮು ದ್ವೇಷಗಳಿಂದ ಮುಕ್ತವಾಗಿರಲಿ. ಈ ದೇಶದ ತಳಸ್ತರದ ಜನರನ್ನು ಮೇಲೆತ್ತುವ ಬಗ್ಗೆ ಚರ್ಚೆಗಳು ನಡೆಯಲಿ. ಅಭಿವೃದ್ಧಿಯನ್ನು ವಿಷಯವಾಗಿಟ್ಟುಕೊಂಡು ಚುನಾವಣೆಗಳು ನಡೆಯಲಿ. ವೌಢ್ಯಗಳು ಅಳಿಯಲಿ. ವೈಚಾರಿಕತೆ ಮುನ್ನೆಲೆಗೆ ಬರಲಿ. ದೇಶದ ಬಹುತ್ವ ಉಳಿಯಲಿ, ಬೆಳೆಯಲಿ ಎಂದು ಹಾರೈಸುವ ಮೂಲಕ ಹೊಸ ವರ್ಷವನ್ನು ನಾವು ಸ್ವೀಕರಿಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News