ಕೋವಿಡ್ ಸವಾಲೊಡ್ಡಬಹುದು,ಆದರೆ ಭಾರತದ ಬೆಳವಣಿಗೆ ತಡೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

Update: 2022-01-01 15:10 GMT

ಹೊಸದಿಲ್ಲಿ,ಜ.1: ಭಾರತವು ಸಂಪೂರ್ಣ ಎಚ್ಚರಿಕೆ ಮತ್ತು ಜಾಗರೂಕತೆಯೊಂದಿಗೆ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲಿದೆ ಮತ್ತು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಲ್ಲಿ ತಿಳಿಸಿದರು.

ವರ್ಚುವಲ್ ಕಾರ್ಯಕ್ರಮದಲ್ಲಿ ಪಿಎಂ-ಕಿಸಾನ ಯೋಜನೆಯಡಿ ರೈತರಿಗೆ 10ನೇ ಕಂತಿನ ಹಣವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು,2021ರಲ್ಲಿ ಆರೋಗ್ಯ,ರಕ್ಷಣೆ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶದ ಸಾಧನೆಗಳನ್ನು ಪ್ರಮುಖವಾಗಿ ಬಿಂಬಿಸಿದರು.

145 ಕೋ.ಗೂ ಅಧಿಕ ಕೋವಿಡ್ ಲಸಿಕೆ ಡೋಸ್‌ಗಳನ್ನು ವಿತರಿಸುವಲ್ಲಿ ಭಾರತದ ಸಾಧನೆಯನ್ನೂ ಅವರು ಪ್ರಶಂಸಿಸಿದರು.

ಕೊರೋನವೈರಸ್ ಹಲವಾರು ಸವಾಲುಗಳನ್ನೊಡ್ಡಿದೆ,ಆದರೆ ಅದು ಭಾರತದ ಬೆಳವಣಿಗೆಯ ವೇಗವನ್ನು ತಡೆಯಲು ಸಾಧ್ಯವಿಲ್ಲ ಎಂದ ಅವರು,ಸಾಂಕ್ರಾಮಿಕದ ಸಂದರ್ಭದಲ್ಲಿ ಸುಮಾರು 2.6 ಲ.ಕೋ.ರೂ.ಗಳ ವೆಚ್ಚದಲ್ಲಿ 80 ಕೋ.ಗೂ ಅಧಿಕ ಫಲಾನುಭವಿಗಳಿಗೆ ಹೆಚ್ಚುವರಿ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ ಎಂದರು.

ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಿದ ಪ್ರಧಾನಿ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇಂತಹ ಕೃಷಿ ಉತ್ಪನ್ನಗಳಿಗೆ ಬಹಳ ಬೇಡಿಕೆಯಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News