ಭಾರತದ ಪ್ರತಿ ಏಳು ಮುಸ್ಲಿಮರಲ್ಲಿ ಒಬ್ಬ ತಾರತಮ್ಯವನ್ನು ಎದುರಿಸುತ್ತಿದ್ದಾನೆ
ತಾವು ಧರ್ಮದ ಕುರಿತು ಮಡಿವಂತಿಕೆಯ ನಿಲುವುಗಳನ್ನು ಹೊಂದಿದ್ದೇವೆ ಎನ್ನುವುದನ್ನು ಭಾರತೀಯರು ಸದಾ ಒಪ್ಪಿಕೊಳ್ಳದಿರಬಹುದು. ರಾಜಕೀಯ ಪಕ್ಷಗಳು ಮತಗಳಿಗಾಗಿ ಕೋಮು ಧ್ರುವೀಕರಣದಲ್ಲಿ ತೊಡಗಿಕೊಂಡಿದ್ದರೆ ಸ್ಟೀರಿಯೋಟೈಪ್ ಆಗಿರುವ ಅಸಂಖ್ಯಾತ ಜಾಹೀರಾತುಗಳು ಸೂಚಿಸುವಂತೆ ಸಾಮಾನ್ಯ ಭಾರತೀಯನು ವಾಸ್ತವದಲ್ಲಿ ಈದ್ ದಿನದಂದು ಔತಣಕ್ಕಾಗಿ ತನ್ನ ಸಹೋದ್ಯೋಗಿಯ ಆಹ್ವಾನವನ್ನು ಎದುರು ನೋಡುತ್ತಿರುವ ಮತ್ತು ದೀಪಾವಳಿಯಂದು ಕಚೇರಿಗೆ ಸಿಹಿಗಳನ್ನು ತರುವ ಉದಾರವಾದಿ ವ್ಯಕ್ತಿಯಾಗಿರುತ್ತಾನೆ ಎನ್ನುವುದು ಇಷ್ಟಪಡುವ ಕಥನವಾಗಿದೆ. ಸತ್ಯವು ಹೆಚ್ಚು ಸಂಕೀರ್ಣವಾಗಿದೆ. ತಮ್ಮ ಧರ್ಮವನ್ನು ಇಡೀ ದೇಶದ ಮೇಲೆ ಹೇರಬೇಕು ಎಂದು ಪ್ರತಿಯೊಬ್ಬ ಭಾರತೀಯನೂ ಬಯಸದಿರಬಹುದು,ಆದರೆ ಅವರು ಇತರ ಧರ್ಮಗಳ ಜನರೊಂದಿಗೆ ಸ್ನೇಹದಿಂದಿರಲು ಬಯಸುತ್ತಾರೆ,ಅವರನ್ನು ತಮ್ಮ ಸಮುದಾಯದ ಅಥವಾ ಕುಟುಂಬದ ಭಾಗವಾಗಿ ಒಪ್ಪಿಕೊಳ್ಳುತ್ತಾರೆ ಎನ್ನುವುದು ಇದರ ಅರ್ಥವಲ್ಲ.
34 ದೇಶಗಳಲ್ಲಿ ಪ್ಯೂ ನಡೆಸಿರುವ ಸಮೀಕ್ಷೆಯಂತೆ ಜನರು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ನೀಡುವಲ್ಲಿ ಭಾರತವು ಸರಾಸರಿಗಿಂತ ಮೇಲಿದೆ. ಒಟ್ಟಾರೆಯಾಗಿ ಭಾರತೀಯರು ಧಾರ್ಮಿಕ ಸಹಿಷ್ಣುತೆಯನ್ನು ತಾವು ಭಾಗವಾಗಿರುವ ದೇಶದ ಕೇಂದ್ರ ಭಾಗವಾಗಿ ನೋಡುತ್ತಿರುವಂತೆ ಕಾಣುತ್ತದೆ. ನಿಜವಾದ ಭಾರತೀಯನಾಗಿರಲು ಎಲ್ಲ ಧರ್ಮಗಳನ್ನು ಗೌರವಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಎಲ್ಲ ಪ್ರಮುಖ ಧಾರ್ಮಿಕ ಸಮುದಾಯಗಳ ಹೆಚ್ಚಿನ ಜನರು ಹೇಳಿದ್ದಾರೆ. ಒಟ್ಟಾರೆಯಾಗಿ ಭಾರತೀಯರು ಎಲ್ಲ ಧರ್ಮಗಳ ಸಹಿಷ್ಣುಗಳಾಗಿದ್ದಾರೆ ಎನ್ನುವುದನ್ನು ಪುನರುಚ್ಚರಿಸಲು ವೃತ್ತಪತ್ರಿಕೆಗಳ ಶೀರ್ಷಿಕೆಗಳು ಇದನ್ನೇ ಗಟ್ಟಿಯಾಗಿ ಹಿಡಿದುಕೊಂಡಿದ್ದವು.
ಆದರೆ ನಾವು ಅಷ್ಟೊಂದು ಉದಾರವಾದಿಗಳಲ್ಲ
ಭಾರತದಲ್ಲಿಯ ಹಿಂದುಗಳಲ್ಲಿ ಹೆಚ್ಚಿನವರು (ಶೇ.66) ತಾವು ಮುಸ್ಲಿಮರಿಗಿಂತ ತುಂಬ ಭಿನ್ನ ಎಂದು ಭಾವಿಸಿದ್ದಾರೆ ಮತ್ತು ಹೆಚ್ಚಿನ ಮುಸ್ಲಿಮರೂ (ಶೇ.64) ತಾವು ಹಿಂದುಗಳಿಗಿಂತ ತುಂಬ ಭಿನ್ನ ಎಂದು ಭಾವಿಸಿದ್ದಾರೆ. 2019ರ ರಾಷ್ಟ್ರೀಯ ಸಮೀಕ್ಷೆಯೊಂದರಲ್ಲಿ ಪಾಲ್ಗೊಂಡಿದ್ದ ಮೂರನೇ ಒಂದರಷ್ಟು ಹಿಂದುಗಳು ಮುಸ್ಲಿಮರು ದೇಶವಿರೋಧಿಗಳು ಎಂದು ಪರಿಗಣಿಸಿದ್ದರು (ಆದರೂ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಮರು ತಮ್ಮ ಬಗ್ಗೆ ಹಾಗೆ ಭಾವಿಸಿರಲಿಲ್ಲ). ನಾಲ್ಕು ರಾಜ್ಯಗಳಲ್ಲಿಯ ಸಮೀಕ್ಷೆಯಲ್ಲಿ ಶೇ.40ರಷ್ಟು ಹಿಂದುಗಳು ಮತ್ತು ಶೇ.43ರಷ್ಟು ಸಿಕ್ಖರು ಮುಸ್ಲಿಮರನ್ನು ಅತ್ಯಂತ ಹಿಂಸಾತ್ಮಕರು ಎಂದು ಪರಿಗಣಿಸಿದ್ದರೆ,ಮುಸ್ಲಿಮರು ಯಾವುದೇ ಧರ್ಮದ ಜನರನ್ನು ಅತ್ಯಂತ ಹಿಂಸಾತ್ಮಕರು ಎಂದು ಪರಿಗಣಿಸಿರಲಿಲ್ಲ.
ಮೇಲಿನದು ರುಕ್ಮಿಣಿ ಎಸ್.ಅವರ ‘ಹೋಲ್ ನಂಬರ್ಸ್ ಆ್ಯಂಡ್ ಹಾಫ್ ಟ್ರುತ್ಸ್:ವಾಟ್ ಡಾಟಾ ಕ್ಯಾನ್ ಆ್ಯಂಡ್ ಕೆನಾಟ್ ಟೆಲ್ ಅಸ್ ಅಬೌಟ್ ಮಾಡರ್ನ್ ಇಂಡಿಯಾ ’ಕೃತಿಯಿಂದ ಆಯ್ದ ಭಾಗವಾಗಿದೆ. ಕಟು ಸತ್ಯಗಳು ಮತ್ತು ಭಾರತದ ಗೊಂದಲಮಯ ರಾಜಕೀಯ ವಾಸ್ತವದಲ್ಲಿ ಬೇರನ್ನು ಹೊಂದಿರುವ ಕೃತಿಯು ಇಂದಿನ ಭಾರತದ ಚಿತ್ರಣವನ್ನು ಮಂಡಿಸಿದೆ ಮತ್ತು ಅದನ್ನು ಪ್ರಶ್ನಿಸಲು ಹಾಗೂ ಮರುಕಲ್ಪಿಸಲು ಅಂಕಿಅಂಶಗಳನ್ನು ಬಳಸಿಕೊಂಡಿದೆ. ಮುಸ್ಲಿಮರು ನಿರ್ದಿಷ್ಟವಾಗಿ ಅನುಭವಿಸುತ್ತಿರುವ ವಸತಿ ಪ್ರತ್ಯೇಕತೆಯು ದತ್ತಾಂಶಗಳಿಂದ ಹೊರಹೊಮ್ಮಿದೆ. ಜೈನರು ಮತ್ತು ಹಿಂದುಗಳು ಇನ್ನೊಂದು ಧರ್ಮದ-ನಿರ್ದಿಷ್ಟವಾಗಿ ಮುಸ್ಲಿಂ ನೆರೆಯವನನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ತುಂಬ ಕಡಿಮೆ. ಶೇ.36ರಷ್ಟು ಹಿಂದುಗಳು ಮುಸ್ಲಿಂ ವ್ಯಕ್ತಿಯನ್ನು ನೆರೆಯವನಾಗಿ ಒಪ್ಪಿಕೊಳ್ಳುವುದಿಲ್ಲ. ಇದೇ ವೇಳೆ ಮುಸ್ಲಿಮರಲ್ಲಿ ಈ ಪ್ರವೃತ್ತಿ ಕಡಿಮೆಯಿದೆ,ಶೇ.16ರಷ್ಟು ಮುಸ್ಲಿಮರು ತಮ್ಮ ನೆರೆಯಾತ ಹಿಂದು ಆಗಿರುವುದನ್ನು ಬಯಸುವುದಿಲ್ಲ.
ಸಾಕ್ಷಚಿತ್ರ ನಿರ್ಮಾಪಕಿ ಸನಾ ಇಕ್ಬಾಲ್ ಅವರೇ ಬಣ್ಣಿಸಿದಂತೆ ಮುಸ್ಲಿಂ ಬಡಾವಣೆಯಾಗಿರುವ ದಿಲ್ಲಿಯ ಜಾಮಿಯಾ ನಗರದಲ್ಲಿ ಬೆಳೆದಿದ್ದರು. ಬ್ರಿಟನ್ನಲ್ಲಿ ಓದಿದ್ದ ಅವರು ಮುಂಬೈನಲ್ಲಿ ಕೆಲಸ ಮಾಡಿದ್ದರು ಮತ್ತು ಅಲ್ಲಿಯೇ ತನ್ನ ಪತಿಯನ್ನು ಭೇಟಿಯಾಗಿದ್ದರು. ದಂಪತಿ 2018ರಲ್ಲಿ ದಿಲ್ಲಿಗೆ ಮರಳಿದ್ದರು. ಎಲ್ಲ ಸಮುದಾಯಗಳೂ ವಾಸವಾಗಿರುವ ಪ್ರದೇಶದಲ್ಲಿ ಮನೆಗಾಗಿ ಅವರು ನಡೆಸಿದ್ದ ಎಲ್ಲ ಪ್ರಯತ್ನಗಳು ವಿಫಲಗೊಂಡಿದ್ದವು. ಮನೆಗಳನ್ನು ತೋರಿಸಿದ್ದ ಬ್ರೋಕರ್ ತಮ್ಮ ಹೆಸರುಗಳನ್ನು ಬದಲಿಸಿಕೊಳ್ಳುವಂತೆ ಅವರಿಗೆ ಪುಕ್ಕಟೆ ಸಲಹೆ ನೀಡಿದ್ದ. ಅಂತಿಮವಾಗಿ ಸನಾ ಮತ್ತು ಅವರ ಪತಿ ಜಾಮಿಯಾ ನಗರಕ್ಕೇ ಮರಳಿದ್ದರು.
ಇತರ ಧರ್ಮಗಳ ಜನರನ್ನು ನೆರೆಯವರಾಗಿ ಒಪ್ಪಿಕೊಳ್ಳಲು ತಯಾರಿಲ್ಲದ ಈ ದೇಶದಲ್ಲಿ ಗಡಿಯನ್ನು ಮೀರಿ ಅವರನ್ನು ತಮ್ಮ ಕುಟುಂಬದ ಭಾಗವನ್ನಾಗಿ ಸ್ವೀಕರಿಸುವುದು ಹೆಚ್ಚಿನವರಿಗೆ ಅಸಹನೀಯವಾಗಿದೆ.
ವ್ಯಾಪಕ ರಾಷ್ಟ್ರಿಯ ಸಮೀಕ್ಷೆಯೊಂದರಲ್ಲಿ ಶೇ.85ರಷ್ಟು ಜನರು ಅಂತರಧರ್ಮೀಯ ವಿವಾಹಗಳು ತಮಗೆ ಒಪ್ಪಿಗೆಯಿಲ್ಲ ಎಂದು ಹೇಳಿದರೆ,ಯುವಜನರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಭಾರತೀಯ ಯುವಜನರು ಹೆಚ್ಚು ಪ್ರಗತಿಶೀಲರಲ್ಲ
ಯುವಜನರು ಹೆಚ್ಚು ಪ್ರಗತಿಶೀಲವಾದ ನಂಬಿಕೆಗಳನ್ನು ಹೊಂದಿಲ್ಲ. ಯುವಜನರ ಮನೋಭಾವದ ಕುರಿತು 2017ರಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪ್ರತಿ 10 ಜನರಲ್ಲಿ ಆರು ಜನರು ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಸಿನೆಮಾಗಳ ನಿಷೇಧವನ್ನು ಬೆಂಬಲಿಸಿದ್ದರು. ಮುಸ್ಲಿಂ ಯುವಜನರಲ್ಲಿಯೂ ಹೆಚ್ಚಿನವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಶೇ.70ರಷ್ಟು ಹಿಂದು ಯುವಜನರು ಯಾರಿಗೂ ಗೋಮಾಂಸವನ್ನು ಸೇವಿಸಲು ಬಿಡಬಾರದು ಎಂದು ಪ್ರತಿಪಾದಿಸಿದ್ದರೆ,ಮೂರನೇ ಒಂದರಷ್ಟು ಯುವಜನರು ಅಂತರಜಾತಿ ಮದುವೆಗಳನ್ನು ವಿರೋಧಿಸಿದ್ದರು.
ಮುಸ್ಲಿಂ ಯುವಜನರು ಧಾರ್ಮಿಕ ಆಧಾರಿತ ತಾರತಮ್ಯದ ಅನುಭವವನ್ನು ಇತರರಿಗಿಂತ ಹೆಚ್ಚಾಗಿ ವರದಿ ಮಾಡಿದ್ದಾರೆ. ಪ್ರತಿ ಏಳು ಮುಸ್ಲಿಮರಲ್ಲಿ ಓರ್ವ ಅಥವಾ ಅವರ ಪೈಕಿ ಶೇ.13ರಷ್ಟು ಜನರು ತಮ್ಮ ವಿರುದ್ಧದ ತಾರತಮ್ಯಕ್ಕೆ ತಾವು ಮುಸ್ಲಿಮರಾಗಿರುವುದು ಕಾರಣವಾಗಿದೆ ಎಂದು ಹೇಳಿದ್ದಾರೆ. ಸಣ್ಣ ನಗರಗಳಲ್ಲಿ ವಾಸವಿರುವ ಮುಸ್ಲಿಂ ಯುವಜನರು ಧಾರ್ಮಿಕ ಭೇದಭಾವಕ್ಕೆ ಗುರಿಯಾಗುವುದು ಹೆಚ್ಚು,ಅವರಲ್ಲಿ ಶೇ.27 ರಷ್ಟು ಜನರು ತಾವು ಮುಸ್ಲಿಮರಾಗಿದ್ದಕ್ಕೆ ತಾರತಮ್ಯವನ್ನು ಅನುಭವಿಸಿದ್ದಾರೆ.
ಕೃಪೆ: Thequint.com