2022ರ ಖಗೋಳ ವಿದ್ಯಮಾನಗಳು

Update: 2022-01-02 07:08 GMT

ಈ ವರ್ಷದ ಎರಡು ಗ್ರಹಣಗಳು ಭಾರತೀಯರಿಗೆ. ಅಕ್ಟೋಬರ್ 25ರ ದೀಪಾವಳಿ ಅಮಾವಾಸ್ಯೆಯಂದು ಪಾರ್ಶ್ವ ಸೂರ್ಯಗ್ರಹಣವಾದರೆ, ಮುಂದಿನ ನವೆಂಬರ್ 8ರ ಕಾರ್ತಿಕ ಹುಣ್ಣಿಮೆಯಂದು ಪಾರ್ಶ್ವ ಚಂದ್ರಗ್ರಹಣ. ವಿಶೇಷವೆಂದರೆ, ಸೂರ್ಯ ಗ್ರಹಣದಲ್ಲಿ, ಗ್ರಹಣದ ಸೂರ್ಯ ಗ್ರಹಣವಿರುವತ್ತ ಅಸ್ತಂಗತನಾದರೆ, ಚಂದ್ರಗ್ರಹಣದಲ್ಲಿ ಗ್ರಹಣದ ಚಂದ್ರನ ಚಂದ್ರೋದಯ.

ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸಲಿವೆಯಾದರೂ, ಭಾರತಕ್ಕೆ ಎರಡೇ ಗೋಚರ, ಅಕ್ಟೋಬರ್ 25ರ ಪಾರ್ಶ್ವ ಸೂರ್ಯ ಗ್ರಹಣ ಹಾಗೂ ನವೆಂಬರ್ 8ರ ಪಾರ್ಶ್ವ ಚಂದ್ರ ಗ್ರಹಣ. ಅಕ್ಟೋಬರ್ 25ರ ಪಾರ್ಶ್ವ ಸೂರ್ಯ ಗ್ರಹಣದಂದು ಸಂಜೆ 5 ಗಂಟೆ 08 ನಿಮಿಷಕ್ಕೆ ಗ್ರಹಣ ಪ್ರಾರಂಭ. 5 ಗಂಟೆ 50 ನಿಮಿಷಕ್ಕೆ ಅತೀ ಹೆಚ್ಚೆಂದರೆ ಸುಮಾರು 25 ಅಂಶ ಗ್ರಹಣ. 6 ಗಂಟೆ 28 ನಿಮಿಷಕ್ಕೆ ಅಂತ್ಯ. ಆದರೆ 6 ಗಂಟೆ 6 ನಿಮಿಷಕ್ಕೆ ಸೂರ್ಯಾಸ್ತ. ಹಾಗಾಗಿ ಗ್ರಹಣ ಸೂರ್ಯ ಅಸ್ತಂಗತ.

ನವಂಬರ್ 8ರಂದು ಮದ್ಯಾಹ್ನ 3 ಗಂಟೆ 46 ನಿಮಿಷಕ್ಕೆ ಖಗ್ರಾಸ ಪ್ರಾರಂಭವಾಗಿ 5 ಗಂಟೆ 11ನಿಮಿಷಕ್ಕೆ ಖಗ್ರಾಸ ಅಂತ್ಯ. ಆನಂತರ ಪಾರ್ಶ್ವ ಗ್ರಹಣ. ಕರಾವಳಿಯವರಿಗೆ 6 ಗಂಟೆಗೆ ಚಂದ್ರೋದಯ. ಸುಮಾರು 25 ಅಂಶ ಗ್ರಹಣ ಗೊಂಡ ಚಂದ್ರೋದಯ. 6 ಗಂಟೆ 19 ನಿಮಿಷಕ್ಕೆ ಗ್ರಹಣ ಅಂತ್ಯ.

ಇನ್ನೆರಡು ಗ್ರಹಣಗಳು ಈ ವರ್ಷ ಸಂಭವಿಸಲಿವೆಯಾದರೂ ಭಾರತದಲ್ಲಿ ಗೋಚರವಿಲ್ಲ. ಅವು ಎಪ್ರಿಲ್ 30ರ ಪಾರ್ಶ್ವ ಸೂರ್ಯಗ್ರಹಣ ಹಾಗೂ ಮೇ 16ರ ಸಂಪೂರ್ಣ ಚಂದ್ರ ಗ್ರಹಣ.

ಗ್ರಹಗಳು:

ಯಾವಾಗಲೂ ರಾತ್ರಿ ಆಕಾಶದಲ್ಲಿ ಕಾಣ ಸಿಗದ ಬುಧ ಗ್ರಹ ಕೆಲವೇ ದಿನ ಬರೇ 45 ನಿಮಿಷ ಕಾಣ ಸಿಗುವುದು. ಈ ವರ್ಷ ಸಂಜೆಯ ಸೂರ್ಯಾಸ್ತದ ನಂತರ ಪಶ್ಚಿಮ ಆಕಾಶದಲ್ಲಿ ಜನವರಿ 7, ಎಪ್ರಿಲ್ 29, ಆಗಸ್ಟ್ 27, ಡಿಸೆಂಬರ್ 21 ರಂದು ಕಂಡರೆ, ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮುಂಚೆ ಫೆಬ್ರವರಿ 16, ಜೂನ್ 16 ಅಕ್ಟೋಬರ್ 8, ಕಾಣಲಿದೆ.

ಶುಕ್ರ ಗ್ರಹ ಈ ವರ್ಷ ಸಂಜೆಯ ಆಕಾಶದಲ್ಲಿ ಕಾಣಬೇಕಾದರೆ ಅಕ್ಟೋಬರ್ ಅಂತ್ಯದವರೆಗೆ ಕಾಯಬೇಕು. ಅಲ್ಲಿಯವರೆಗೆ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಮಾತ್ರ ಹೊಳೆಯಲಿದೆ.

ಸುಮಾರು ಎರಡು ವರ್ಷ 50 ದಿನಗಳಿಗೊಮ್ಮೆ ಭೂಮಿಗೆ ಸಮೀಪಿಸುವ ಮಂಗಳ ಗ್ರಹ ಡಿಸೆಂಬರ್ 8 ರಂದು ಬಹಳ ಸುಂದರವಾಗಿ ಕಾಣಲಿದೆ. (Opposition of Mars on dec 8.)

ವರ್ಷಕ್ಕೊಮ್ಮೆ ಒಂದು ತಿಂಗಳು ದೊಡ್ಡದಾಗಿ ಚೆನ್ನಾಗಿ ಕಾಣುವ ಗುರು ಹಾಗೂ ಶನಿಗ್ರಹಗಳು ಈ ವರ್ಷ ಆಗಸ್ಟ್‌ನಲ್ಲಿ ಶನಿ (Saturn opposition onaugust 14)ಹಾಗೂ ಸೆಪ್ಟಂಬರ್‌ನಲ್ಲಿ ಗುರು(Jupiter’s opposition  on September 26)ಇಡೀ ರಾತ್ರಿ ಕಾಣಲಿವೆ.

 ಈ ವರ್ಷದ ಮೂರು ಹುಣ್ಣಿಮೆಗಳು, ಸೂಪರ್ ಮೂನ್‌ಗಳು. ಜೂನ್ 14, ಜುಲೈ 13 ಹಾಗೂ ಆಗಸ್ಟ್ 12. ಈ ಹುಣ್ಣಿಮೆ ಚಂದ್ರ, ನೋಡಲು ಬಲು ಚೆಂದ.

Writer - ಡಾ. ಎ.ಪಿ. ಭಟ್, ಉಡುಪಿ

contributor

Editor - ಡಾ. ಎ.ಪಿ. ಭಟ್, ಉಡುಪಿ

contributor

Similar News

ಜಗದಗಲ
ಜಗ ದಗಲ