ಖಾಸಿಂ ಸೊಲೈಮಾನಿ ಹತ್ಯೆ ನಡೆಸಿದ ಅಮೆರಿಕ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಗೆ ಇರಾನ್ ಆಗ್ರಹ

Update: 2022-01-02 16:21 GMT

ಟೆಹ್ರಾನ್, ಜ.2: 2 ವರ್ಷದ ಹಿಂದೆ ತನ್ನ ಉನ್ನತ ಸೇನಾ ಮುಖಂಡ ಖಾಸಿ ಸೊಲೈಮಾನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದ ವಿರುದ್ಧ ವಿಧ್ಯುಕ್ತ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯನ್ನು ಇರಾನ್ ಆಗ್ರಹಿಸಿದೆ.

2020ರ ಜನವರಿ 3ರಂದು, ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾರ್ಪ್ಸ್ ನ ಖುದ್ಸ್ ಪಡೆಯ ಅಂದಿನ ಕಮಾಂಡರ್ ಆಗಿದ್ದ ಸೊಲೈಮಾನಿ ಇರಾಕ್ ನ ರಾಜಧಾನಿ ಬಗ್ದಾದ್‌ಗೆ ರಾಜತಾಂತ್ರಿಕ ನಿಯೋಗದಲ್ಲಿ ತೆರಳಿದ ಸಂದರ್ಭ ಅವರು ಸಾಗುತ್ತಿದ್ದ ವಾಹನಗಳ ಸಾಲಿನ ಮೇಲೆ ಅಮೆರಿಕದ ಡ್ರೋನ್ ವಿಮಾನ ಕ್ಷಿಪಣಿ ಪ್ರಯೋಗಿಸಿದಾಗ ಸೊಲೈಮಾನಿ ಮೃತಪಟ್ಟಿದ್ದರು. ಜೊತೆಗೆ, ಇರಾಕ್ ಸೇನಾ ಕಮಾಂಡರ್ ಅಬು ಮಹದಿ ಅಲ್ ಮುಹಾಂದಿಸ್ ಸಹಿತ ಇತರ ಹಲವರು ಮೃತಪಟ್ಟಿದ್ದರು.

ಈ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಮೆರಿಕ ಸರಕಾರವನ್ನು ಖಂಡಿಸುವ ಮತ್ತು ಭವಿಷ್ಯದಲ್ಲಿ ಇಂತಹ ಕ್ರಮಗಳ ಪುನರಾವರ್ತನೆಯಾಗದಂತೆ ಎಚ್ಚರಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇರಾನ್‌ನ ಅಧ್ಯಕ್ಷರ ಕಚೇರಿ ರವಾನಿಸಿರುವ ಪತ್ರವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಶನಿವಾರ ಪ್ರಕಟಿಸಿದೆ. ಹಲವು ವರ್ಷಗಳಿಂದ ಅಮೆರಿಕ ಪ್ರದರ್ಶಿಸುತ್ತಿರುವ ಅತಿಯಾದ ಏಕಪಕ್ಷೀಯ ಕ್ರಮಗಳಿಂದ ಅಂತರಾಷ್ಟ್ರೀಯ ಕಾನೂನು ಮತ್ತು ಒಪ್ಪಂದದ ಉಲ್ಲಂಘನೆಯಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೊಲೈಮಾನಿ ವಿಶ್ವದ ಪ್ರಮುಖ ಭಯೋತ್ಪಾದಕ. ಈತನನ್ನು ಈ ಹಿಂದೆಯೇ ನಿವಾರಿಸಿಬಿಡಬೇಕಿತ್ತು ಎಂದು ಪ್ರತಿಕ್ರಿಯಿಸಿದ್ದರು. 2020ರಲ್ಲಿ ನ್ಯಾಯೇತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಪ್ರತಿನಿಧಿಯ ವರದಿಯಲ್ಲೂ ಸೊಲೈಮಾನಿಯ ಹತ್ಯೆ ಕಾನೂನುಬಾಹಿರ, ಏಕಪಕ್ಷೀಯ ಮತ್ತು ವಿಶ್ವಸಂಸ್ಥೆಯ ಸನ್ನದಿನ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News