ಹಮಾಸ್ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ವಾಯುದಾಳಿ
ಸಾಂದರ್ಭಿಕ ಚಿತ್ರ
ಜೆರುಸಲೇಂ, ಜ.2: ಶನಿವಾರ ಗಾಝಾ ಪಟ್ಟಿಯಲ್ಲಿ ಹಮಾಸ್ ನಿಯಂತ್ರಣದ ಪ್ರದೇಶದಿಂದ ಹಾರಿಬಂದ ಕ್ಷಿಪಣಿ ಇಸ್ರೇಲ್ ಬಳಿ ಸಮುದ್ರಕ್ಕೆ ಅಪ್ಪಳಿಸಿದಕ್ಕೆ ಪ್ರತಿಯಾಗಿ ಗಾಝಾ ಪಟ್ಟಿಯಲ್ಲಿನ ಹಮಾಸ್ ನೆಲೆಗಳನ್ನು ಗುರಿಯಾಗಿಸಿ ರವಿವಾರ ವಾಯುದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ.
ಈ ದಾಳಿಯಿಂದ ಹಮಾಸ್ ನ ಕ್ಷಿಪಣಿ ಉತ್ಪಾದಿಸುವ ವ್ಯವಸ್ಥೆಗೆ ಹಾನಿಯಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. 2022ರ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಸುಡುಮದ್ದು ಸಿಡಿಸಿ ಸಂಭ್ರಮಿಸುತ್ತಿದ್ದಾಗ ಗಾಝಾ ಪಟ್ಟಿಯ ಭಯೋತ್ಪಾದಕರು ಪ್ರಯೋಗಿಸಿದ್ದ ವಿಭಿನ್ನ ರೀತಿಯ ಬಾಣಬಿರುಸು ಇಸ್ರೇಲ್‌ನತ್ತ ತೂರಿ ಬಂತು. ಇದಕ್ಕೆ ಪ್ರತಿಯಾಗಿ ನಾವು ಗಾಝಾ ಪಟ್ಟಿಯಲ್ಲಿನ ಹಮಾಸ್ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ಅವರ ಕ್ಷಿಪಣಿ ಉತ್ಪಾದನಾ ವ್ಯವಸ್ಥೆ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಬಳಸಲಾಗುತ್ತಿದ್ದ ಸೇನಾನೆಲೆಗಳಿಗೆ ಅಪ್ಪಳಿಸಿದೆ ಎಂದು ಇಸ್ರೇಲ್ ಸೇನೆ ರವಿವಾರ ಟ್ವೀಟ್ ಮಾಡಿದೆ. ಈ ದಾಳಿಯಲ್ಲಿ ಪ್ರಾಣಹಾನಿ ಅಥವಾ ಆಸ್ತಿ ನಷ್ಟವಾದ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಮಾಸ್‌ನ ವಕ್ತಾರ ಹಝೆಮ್ ಖಾಸಿಂ, ಇಸ್ರೇಲ್ ನ ದಾಳಿಯಲ್ಲಿ ಕೃಷಿ ಭೂಮಿಗೂ ಹಾನಿಯಾಗಿದೆ. ನಮ್ಮ ಜನರನ್ನು ರಕ್ಷಿಸುವ ಮತ್ತು ನಮ್ಮ ಭೂಮಿ ಹಾಗೂ ಪ್ರಾರ್ಥನಾ ಕೇಂದ್ರಗಳನ್ನು ಮುಕ್ತಗೊಳಿಸುವ ನಮ್ಮ ಕರ್ತವ್ಯ ನಿರ್ವಹಣೆ ಮುಂದುವರಿಯಲಿದೆ. ನಮ್ಮ ಜನತೆ ಸ್ವತಂತ್ರಗೊಳ್ಳುವ ಗುರಿಯನ್ನು ಸಾಧಿಸುವ ವರೆಗೆ ನಮ್ಮ ಪ್ರತಿರೋಧ ಮುಂದುವರಿಯಲಿದೆ ಎಂದಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಈಜಿಪ್ಟ್ ಹಾಗೂ ಇತರ ಮಧ್ಯಸ್ಥಿಕೆದಾರರ ಉಪಸ್ಥಿತಿಯಲ್ಲಿ 2021ರಲ್ಲಿ ಸಹಿ ಹಾಕಲಾದ ಕದನವಿರಾಮ ಒಪ್ಪಂದ 11 ದಿನದಲ್ಲೇ ಮುಕ್ತಾಯಗೊಂಡಿತ್ತು. ಬಳಿಕ ಮೇ ತಿಂಗಳಿನಲ್ಲಿ ಗಾಝಾ ಪಟ್ಟಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ ಮಕ್ಕಳು, ಮಹಿಳೆಯರ ಸಹಿತ 260ಕ್ಕೂ ಅಧಿಕ ಪೆಲೆಸ್ತೀನೀಯರು ಮೃತಪಟ್ಟಿದ್ದಾರೆ. ಇದೇ ತಿಂಗಳಿನಲ್ಲಿ ಹಮಾಸ್ ನಡೆಸಿದ್ದ ದಾಳಿಯಲ್ಲಿ 13 ಇಸ್ರೇಲಿಯನ್ನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗಾಝಾ ಪಟ್ಟಿಯಲ್ಲಿ ಸುಮಾರು 2 ಮಿಲಿಯನ್ ಪೆಲೆಸ್ತೀನೀಯರಿದ್ದು ಈ ಪ್ರದೇಶದ ಮೇಲೆ ಇಸ್ರೇಲ್ ದಿಗ್ಬಂಧನ ವಿಧಿಸಿದ್ದು ಈ ಪ್ರದೇಶದಲ್ಲಿ ಜನರ ಚಲನವಲನದ ಮೇಲೆ ನಿಯಂತ್ರಣ ಹೇರಿದೆ. ಇನ್ನೊಂದೆಡೆ ಈಜಿಪ್ಟ್ ಕೂಡಾ ಗಾಝಾ ವಲಯದ ಮೇಲೆ ನಿರ್ಭಂಧ ವಿಧಿಸಿದೆ. ಹಮಾಸ್ ವಿರುದ್ಧ ಈ ಕ್ರಮ ಕೈಗೊಂಡಿರುವುದಾಗಿ ಈಜಿಪ್ಟ್ ಪ್ರತಿಪಾದಿಸುತ್ತಿದೆ.