ಭಾರತವು ಕೋವಿಡ್ ಲಸಿಕೆ ಗುರಿ ತಲುಪಿಲ್ಲ ಎಂಬ ವರದಿ ಸುಳ್ಳು: ಕೇಂದ್ರ
ಹೊಸದಿಲ್ಲಿ, ಜ. 2: ಭಾರತವು ಕೋವಿಡ್ ಲಸಿಕೆಯ ಗುರಿ ತಲುಪಿಲ್ಲ ಎಂಬ ಮಾಧ್ಯಮದ ವರದಿಗಳು ಸುಳ್ಳು ಎಂದು ಕೇಂದ್ರ ಆರೋಗ್ಯ ಸಚಿವಾಲಯ ರವಿವಾರ ಹೇಳಿದೆ. ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಸಚಿವಾಲಯ, ಖ್ಯಾತ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಇತ್ತೀಚೆಗೆ ಪ್ರಕಟಿಸಿದ ಸುದ್ದಿಯಲ್ಲಿ ಭಾರತ ಕೋವಿಡ್ ಲಸಿಕೆಯ ಗುರಿ ತಲುಪುವಲ್ಲಿ ವಿಫಲವಾಗಿದೆ ಎಂದು ಪ್ರತಿಪಾದಿಸಿದೆ. ಆದರೆ, ಇದು ಸುಳ್ಳು ಎಂದು ಅದು ಹೇಳಿದೆ.
ಅಭಿವೃದ್ಧಿ ಹೊಂದಿದ ಹಲವು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ, ಕೋವಿಡ್ ವಿರುದ್ಧದ ಹೋರಾಡುವ ಭಾರತದ ಕೋವಿಡ್ ಲಸಿಕೀಕರಣ ಕಾರ್ಯಕ್ರಮ ಅತಿ ದೊಡ್ಡ ಹಾಗೂ ಯಶಸ್ವಿ ಕಾರ್ಯಕ್ರಮ ಎಂದು ಹೇಳಿಕೆ ತಿಳಿಸಿದೆ. ರಾಷ್ಟ್ರೀಯ ಕೋವಿಡ್ ಅಭಿಯಾನವನ್ನು 2021 ಜನವರಿ 16ರಂದು ಆರಂಭಿಸಿದ ಬಳಿಕ ಭಾರತದಲ್ಲಿ ಮೊದಲ ಡೋಸ್ ಅನ್ನು ಶೇ. 90 ಹಾಗೂ ಎರಡನೇ ಡೋಸ್ ಅನ್ನು ಶೇ. 65 ಜನರಿಗೆ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ಅಭಿಯಾನದಲ್ಲಿ 9 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 100 ಕೋಟಿ ಜನರಿಗೆ ಲಸಿಕೆ ನೀಡಿರುವುದು, ಒಂದೇ ದಿನದಲ್ಲಿ 2.51 ಕೋಟಿ ಜನರಿಗೆ ಲಸಿಕೆ ಹಾಗೂ ಹಲವು ಸಂದರ್ಭಗಳಲ್ಲಿ ಒಂದೇ ದಿನ 1 ಕೋಟಿ ಲಸಿಕೆ ನೀಡಿರುವುದು ಸೇರಿದಂತೆ ಭಾರತ ಹಲವು ಅಭೂತಪೂರ್ವ ದಾಖಲೆಗಳನ್ನು ಮಾಡಿದೆ ಎಂದು ಅದು ಹೇಳಿದೆ. ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ, ಭಾರತ ತನ್ನ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅರ್ಹ 93.7 ಕೋಟಿ ನಾಗರಿಕರಿಗೆ ಕೋವಿಡ್ ಲಸಿಕೆ ನೀಡುವ ಮೂಲಕ ಉತ್ತಮ ಕೆಲಸ ಮಾಡಿದೆ ಹೇಳಿಕೆ ತಿಳಿಸಿದೆ.