ನಾಗರಿಕ ಸೇವೆ ಐಸಿಎಎಸ್‌ ನಿಂದ ಕೆಲವು ವಿಕಲಾಂಗರನ್ನು ಹೊರಗಿಡುವಂತೆ ತಜ್ಞರ ಸಮಿತಿಯ ಶಿಫಾರಸು

Update: 2022-01-02 17:38 GMT

ಹೊಸದಿಲ್ಲಿ,ಜ.2: ಸ್ನಾಯುಕ್ಷಯ, ಆಟಿಸಂ ಅಥವಾ ಸ್ವಲೀನತೆ, ಕಲಿಕೆಯಲ್ಲಿ ಕಷ್ಟವಾಗುವಿಕೆ ಅಥವಾ ಬೌದ್ಧಿಕ ಅಸಾಮರ್ಥ್ಯ ಮತ್ತು ಮಾನಸಿಕ ಅಸ್ವಸ್ಥತೆಯಂತಹ ಕೆಲವು ವೈಕಲ್ಯಗಳನ್ನು ಹೊಂದಿರುವ ವ್ಯಕ್ತಿಗಳನ್ನು ಇಂಡಿಯನ್ ಸಿವಿಲ್ ಅಕೌಂಟ್ಸ್ ಸೇವೆ (ಐಸಿಎಎಸ್)ಯಿಂದ ಹೊರಗಿರಿಸಬೇಕು ಎಂದು ಲೆಕ್ಕಪತ್ರಗಳ ಮಹಾ ನಿಯಂತ್ರಕರು(ಸಿಜಿಎ) ನೇಮಕಗೊಳಿಸಿದ್ದ ತಜ್ಞರ ಸಮಿತಿಯು ಶಿಫಾರಸು ಮಾಡಿದೆ.

ಐಸಿಎಎಸ್ ಕೇಂದ್ರ ವಿತ್ತ ಸಚಿವಾಲಯದ ವೆಚ್ಚ ಇಲಾಖೆಯಡಿ ಕಾರ್ಯ ನಿರ್ವಹಿಸುವ ‘ಗ್ರೂಪ್ ಎ’ ಹುದ್ದೆಯಾಗಿದೆ.

ಸಹಾಯಕ ಸಿಜಿಎ ಚಾರು ಗುಪ್ತಾ ಅವರು ಡಿ.24ರಂದು ಸಮಿತಿಯ ಶಿಫಾರಸುಗಳನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅವಗಾಹನೆಗೆ ಸಲ್ಲಿಸಿದ್ದಾರೆ. ಇಂತಹ ವಿಕಲಾಂಗ ವ್ಯಕ್ತಿಗಳನ್ನು ಐಸಿಎಎಸ್ ಸೇವೆಯಿಂದ ಹೊರಗಿರಿಸುವುದರ ವಿರುದ್ಧ ವೈದ್ಯರು ಮತ್ತು ಮಾನಸಿಕ ಆರೋಗ್ಯ ತಜ್ಞರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಶಿಫಾರಸು ‘ಸಾಮರ್ಥ್ಯ’ವನ್ನು ಮಾತ್ರ ಉತ್ತೇಜಿಸುತ್ತದೆ ಮತ್ತು ದೈಹಿಕ ವೈಕಲ್ಯಗಳು ಹಾಗೂ ಮಾನಸಿಕ ಅಸ್ವಸ್ಥತೆಗಳನ್ನು ಹೊಂದಿರುವ ಜನರ ವಿರುದ್ಧ ತಾರತಮ್ಯದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚುವರಿ ಸಿಜಿಎ ಎಂ.ಶ್ರೀಧರನ್,ಜಂಟಿ ಸಿಜಿಎ ಸುಮನ ಬಾಲಾ,ಸಹಾಯಕ ಸಿಜಿಎ ವಿಮಲಾ ನವಾರಿಯಾ,ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಯ ಮಾಜಿ ನಿರ್ದೇಶಕ ಕೆ.ವಿ.ಎಸ್.ರಾವ್ ಮತ್ತು ದಿಲ್ಲಿಯ ಪಿಜಿಐಎಂಇಆರ್ ಆರ್ಎಂಎಲ್ ಆಸ್ಪತ್ರೆಯ ಮನಃಶಾಸ್ತ್ರಜ್ಞ ಡಾ.ಆರ್.ಪಿ.ಬೇನಿವಾಲ್ ಅವರನ್ನೊಳಗೊಂಡ ತಜ್ಞರ ಸಮಿತಿಯು ಜು.2ರಂದು ಸಭೆ ಸೇರಿ ವಿಭಾಗ,ಕ್ರಿಯಾತ್ಮಕ ವರ್ಗೀಕರಣ ಮತ್ತು ಭೌತಿಕ ಅವಶ್ಯಕತೆ ಇತ್ಯಾದಿಗಳನ್ನು ಪರಿಶೀಲಿಸಿದ ಬಳಿಕ ತನ್ನ ಶಿಫಾರಸುಗಳನ್ನು ಸಲ್ಲಿಸಿತ್ತು.

 ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯಡಿ ಅದರ ಅನುಷ್ಠಾನಕ್ಕಾಗಿ ಗುರುತಿಸಲಾದ ಹುದ್ದೆಗಳ ಪುನರ್ಪರಿಶೀಲನೆಗಾಗಿ ಸಿಜಿಎ ಪ್ರತಿ ಮೂರು ವರ್ಷಗಳಿಗೆ ತಜ್ಞರ ಸಮಿತಿಯನ್ನು ರಚಿಸುವುದು ಅಗತ್ಯವಾಗಿದೆ.

ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ಬೈಪೋಲಾರ್ ಡಿಸಾರ್ಡರ್ ಅಥವಾ ದ್ವಿಧ್ರುವಿ ಅಸ್ವಸ್ಥತೆ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಯನ್ನು ದಿಲ್ಲಿಯಲ್ಲಿನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಿರುವುದನ್ನು ಉಲ್ಲೇಖಿಸಿದ ಸ್ವತಃ ಅಂಗವೈಕಲ್ಯ ಹೊಂದಿರುವ ದಿಲ್ಲಿಯ ಜಿಟಿಬಿ ಆಸ್ಪತ್ರೆ ಫಿಜಿಯೋಲಾಜಿಸ್ಟ್ ಡಾ.ಸತೇಂದ್ರ ಸಿಂಗ್ ಅವರು,‘ಒಂದೆಡೆ ಇಂತಹ ಪ್ರಗತಿಪರ ಹೆಜ್ಜೆಗಳನ್ನು ನಾವಿಡುತ್ತಿದ್ದೇವೆ ಮತ್ತು ಇನ್ನೊಂದೆಡೆ ಇಂತಹ ವೈಕಲ್ಯಗಳನ್ನು ಹೊಂದಿರುವವರನ್ನು ನಾಗರಿಕ ಸೇವೆಗಳಿಂದ ಹೊರಗಿಡುತ್ತಿದ್ದೇವೆ ’ ಎಂದು ಕಳವಳವನ್ನು ವ್ಯಕ್ತಪಡಿಸಿದರು.

‘ಸಮಂಜಸವಾದ ಹೊಂದಾಣಿಕೆ ಎನ್ನುವುದೂ ಒಂದಿದ್ದು,ಇದು ವ್ಯಕ್ತಿಯ ಅಂಗವೈಕಲ್ಯಗಳ ಕೊರತೆಯನ್ನು ಸರಿದೂಗಿಸುತ್ತದೆ. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ. ನಾನು ನಡೆದಾಡಲು ಕ್ಯಾಲಿಪರ್ಗಳನ್ನು ಬಳಸುತ್ತಿದ್ದೇನೆ. ಕ್ಯಾಲಿಪರ್ ನನ್ನ ಸಹಾಯಕ ಸಾಧನವಾಗಿದ್ದು,ಅವುಗಳ ನೆರವಿನಿಂದ ವೈದ್ಯನಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ಇದೇ ರೀತಿ ಸ್ನಾಯುಕ್ಷಯವನ್ನು ಹೊಂದಿರುವ ವ್ಯಕ್ತಿಯು ತನ್ನ ಹುದ್ದೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯಕ ಸಾಧನವೊಂದನ್ನು ಬಳಸಬಹುದು ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News