​ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

Update: 2022-01-02 19:30 GMT

ಇಂದು ಜನವರಿ 3. ಈ ನೆಲದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಜನ್ಮದಿನ. ಹೆಣ್ಣು ಮಕ್ಕಳಿಗೆ ಮೊದಲ ಶಾಲೆಯನ್ನು ಆರಂಭಿಸಿದ, ಅದಕ್ಕಾಗಿ ಕಲ್ಲಿನೇಟು ತಿಂದು ಸೆಗಣಿ ಎಸೆದರೂ ಛಲ ಬಿಡದ ಈ ತಾಯಿಯನ್ನು ನಾವು ಮರೆಯಬಾರದು. ಸಮಾನತೆಯ ಕನಸುಗಳನ್ನು ನಿತ್ಯ ಹಸಿರಾಗಿಡಲು ಇಂಥ ಚೇತನ ಸ್ವರೂಪಿಗಳನ್ನು ಸ್ಮರಿಸುತ್ತಲೇ ಇರಬೇಕು.

ಭಾರತದ ಇತಿಹಾಸದ ಪುಟಗಳನ್ನು ತಿರುವೃತ್ತ ಹೋದರೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ಚೆನ್ನಮ್ಮ ಮುಂತಾದ ಸ್ವಾತಂತ್ರ ಹೋರಾಟಗಾರರ ಹೆಸರುಗಳು ಮತ್ತು ಗಾಂಧಿ, ನೆಹರೂ ಕುಟುಂಬಗಳ ತ್ಯಾಗಮಯ ಬದುಕಿನ ಕತೆಗಳು ಕಣ್ಣ ಮುಂದೆ ತಕ್ಷಣ ಗೋಚರಿಸುತ್ತವೆ. ಆದರೆ, ರಾಷ್ಟ್ರೀಯವಾದಿ ಚರಿತ್ರಕಾರರ ಕಣ್ಣಿಗೆ ಮಹಾನ್‌ಸಮಾಜ ಸುಧಾರಕ ಜ್ಯೋತಿಬಾ ಫುಲೆ ಮತ್ತು ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಹೆಸರು ಯಾಕೆ ಕಣ್ಣಿಗೆ ಕಾಣಿಸಿಕೊಂಡಿಲ್ಲವೋ ಅರ್ಥವಾಗುವುದಿಲ್ಲ.

ಎಪ್ಪತ್ತರ ದಶಕದಲ್ಲಿ ಇಪ್ಪತ್ತರ ಯೌವನದಲ್ಲಿ ಹೊಸ ಕ್ರಾಂತಿಕಾರಿ ವಿಚಾರಗಳಿಗೆ ಕಣ್ಣು ತೆರೆದ ನನ್ನ ಪೀಳಿಗೆಯ ಬಹುತೇಕ ಯುವಕರಿಗೂ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಗೊತ್ತಿರಲಿಲ್ಲ. ಆಗ ಅಂಬೇಡ್ಕರ್ ಸಾಹಿತ್ಯ ಕೂಡ ಲಭ್ಯವಿರಲಿಲ್ಲ. ನಾನು ಬಾಬಾಸಾಹೇಬರ ಸಾಹಿತ್ಯ ಓದಲು ಆರಂಭಿಸಿದ್ದು ಮತ್ತು ಫುಲೆ ದಂಪತಿಯಗಳ ಹೆಸರನ್ನು ಮೊದಲ ಬಾರಿ ಕೇಳಿದ್ದು ಎಂಬತ್ತರ ದಶಕದ ಕೊನೆ ಮತ್ತು ತೊಂಬತ್ತರ ದಶಕದ ಆರಂಭದಲ್ಲಿ.

ಅಸಮಾನತೆಯಿಂದ ಕೂಡಿದ ಈ ಸಮಾಜ ವ್ಯವಸ್ಥೆ ಬದಲಾಗಬೇಕೆಂದು ಹಾತೊರೆಯುತ್ತಿದ್ದ ನಮ್ಮ ಪೀಳಿಗೆಯ ಯುವಕರಿಗೆ ಮೊದಲು ಸಿಕ್ಕಿದ್ದು ಕಾರ್ಲ್ ಮಾರ್ಕ್ಸ್, ಎಂಗೆಲ್ಸ್ ಮತ್ತು ಲೆನಿನ್ ಸಾಹಿತ್ಯ. ಇನ್ನು ಹಲವೆಡೆ ಲೋಹಿಯಾ ಸಾಹಿತ್ಯದ ಪ್ರಭಾವ, ಸಮಾಜವಾದಿ ಚಳವಳಿಗಳ ಅಬ್ಬರ ಆಗ ತೀವ್ರವಾಗಿತ್ತು. ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನನ್ನಂಥ ಯುವಕರಿಗೆ ಫುಲೆ ದಂಪತಿಯಗಳ ಬಗ್ಗೆ ಗೊತ್ತಿರಲಿಲ್ಲ. ಆದರೆ ಜಾತಿರಹಿತ ಮದುವೆ ಮಾಡಿಸುತ್ತಿದ್ದ, ತಳ ಸಮುದಾಯಗಳ ನೋವು, ಸಂಕಟಗಳಿಗೆ ಸ್ಪಂದಿಸಿ ನೆರವಿಗೆ ಬರುತ್ತಿದ್ದ ಇಂಚಗೇರಿ ಮಠದ ಮುರಗೋಡ ಮಹಾದೇವಪ್ಪನವರ ಪ್ರಭಾವ ನಮ್ಮ ಮೇಲಿತ್ತು. ಅವರ ಒಡನಾಟದಿಂದ ಕಮ್ಯುನಿಸ್ಟ್ ಚಳವಳಿಯ ಸಮೀಪ ಬಂದೆವು.

ತೊಂಬತ್ತರ ದಶಕದಲ್ಲಿ ಓದಿನ ಹಸಿವು ಹೆಚ್ಚಾದಾಗ ಬಾಬಾಸಾಹೇಬರ ಸಾಹಿತ್ಯ ಕಣ್ಣಿಗೆ ಬಿತ್ತು. ಅದು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬಗ್ಗೆ ನಮ್ಮ ಸಮಾನತೆಯ ಅರಿವನ್ನು ವಿಸ್ತರಿಸಿತು. ಜೊತೆ ಜೊತೆಗೆ ಫುಲೆ ದಂಪತಿಗಳ ಬಗೆಗಿನ ಓದು ರಾಷ್ಟ್ರೀಯ ವಾದಿ ಇತಿಹಾಸಕಾರರು ಕಡೆಗಣಿಸಿದ ಇನ್ನೊಂದು ಸತ್ಯವನ್ನು ಕಣ್ಣ ಮುಂದೆ ತಂದು ನಿಲ್ಲಿಸಿತು.ಅದರಲ್ಲೂ ಸಾವಿತ್ರಬಾಯಿ ಫುಲೆ ಸಂಗಾತಿ ಜ್ಯೋತಿಬಾರ ಜೊತೆ ನಡೆದು ಬಂದ ಕಲ್ಲು ಮುಳ್ಳಿನ ದಾರಿಯ ವಿವರಗಳನ್ನು ಓದ ತೊಡಗಿದಾಗ ಇತಿಹಾಸದಲ್ಲಿ ಇನ್ನೆಷ್ಟು ಸಂಗತಿಗಳು ಮುಚ್ಚಿ ಹೋಗಿಮೋ ಎಂದು ಅನಿಸಿ ಯೋಚನೆಗೀಡು ಮಾಡಿತು.

ಇತಿಹಾಸದಲ್ಲಿ ಕಡೆಗಣಿಸಲ್ಪಟ್ಟ ಫುಲೆ ದಂಪತಿ ಮತ್ತು ಶಾಹು ಮಹಾರಾಜರ ಸಾಧನೆಗಳನ್ನು ಬಾಬಾಸಾಹೇಬರು ಮೊದಲು ದಾಖಲಿಸಿದರು. ನಂತರ ತೊಂಬತ್ತರ ದಶಕದಲ್ಲಿ ಬಹುಜನ ಸಮಾಜ ಪಕ್ಷದ ನಾಯಕ ಕಾನ್ಶಿರಾಮ ಹೊಸ ಬೆಳಕನ್ನು ಚೆಲ್ಲಿದರು. ಉತ್ತರ ಪ್ರದೇಶದಲ್ಲಿ ಮಾಯಾವತಿ ಮುಖ್ಯ ಮಂತ್ರಿಯಾದಾಗ ಫುಲೆ ದಂಪತಿಗಳು, ಶಾಹು ಮಹಾರಾಜ, ಪೆರಿಯಾರ ರಾಮಸ್ವಾಮಿ ನಾಯ್ಕರ್ ಮೊದಲಾದವರ ಹೆಸರಿನಲ್ಲಿ ಕಾರ್ಯಕ್ರಮ ಮಾಡ ತೊಡಗಿದರು. ಅವರ ಹೆಸರಿನ ಉದ್ಯಾನಗಳು, ರಸ್ತೆಗಳು, ಊರುಗಳು ಬಂದವು.

ಅದು 1851ನೇ ಇಸ್ವಿ. ಎಲ್ಲ ಜಾತಿಗಳ ಬಾಲಕಿಯರಿಗಾಗಿ ಪುಣೆಯಲ್ಲಿ ಶಾಲೆ ಆರಂಭವಾಯಿತು. ಈ ಶಾಲೆಗೆ ಅಕ್ಷರ ಕಲಿಸಲು ಬರುತ್ತಿದ್ದ ಹೆಣ್ಣು ಮಗಳ ಹೆಸರು ಸಾವಿತ್ರಿಬಾಯಿ ಫುಲೆ. ಹೆಣ್ಣು ಮಕ್ಕಳು ಅಕ್ಷರ ಕಲಿಯಬಾರದು ಎಂಬುದು ಅಂದಿನ ಮನುವಾದಿಗಳ ಕಟ್ಟುಪಾಡು. ಇದನ್ನು ಧಿಕ್ಕರಿಸಿ ಅಕ್ಷರ ಕಲಿಸಲು ಬಂದ ಸಾವಿತ್ರಿಬಾಯಿಯ ಮೇಲೆ ಜಾತಿವಾದಿಗಳು ವಿಷ ಕಾರತೊಡಗಿದರು. ‘ಇದು ನಮ್ಮ ಧರ್ಮಕ್ಕೆ ಅವಮಾನ’ ಎಂದು ಅರಚಾಡಿದರು. ನಡುರಸ್ತೆಯಲ್ಲಿ ಸಾವಿತ್ರಿಬಾಯಿ ಮೇಲೆ ಕಲ್ಲು ಎಸೆದರು. ಸಗಣಿ ಎರಚಿದರು. ಆದರೆ ಸಾವಿತ್ರಿಬಾಯಿ ಇದಕ್ಕೆ ಮಣಿಯಲಿಲ್ಲ. ಶಾಲೆಗೆ ಬರುವಾಗ ಹಳೆಯ ಸೀರೆಯನ್ನು ಉಟ್ಟುಕೊಂಡು ಕೈ ಚೀಲದಲ್ಲಿ ಹೊಸ ಸೀರೆಯನ್ನು ಇಟ್ಟುಕೊಂಡು ಬಂದು ಶಾಲೆಗೆ ಹೋದ ನಂತರ ಸೆಗಣಿಯಿಂದ ಗಲೀಜಾದ ಸೀರೆಯನ್ನು ಬಿಚ್ಚಿ ಕೈ ಚೀಲದಲ್ಲಿ ಇರಿಸಿಕೊಂಡು ಬಂದಿದ್ದ ಸೀರೆಯನ್ನು ಉಟ್ಟುಕೊಂಡು ಬಾಲಕಿಯರಿಗೆ ಪಾಠ ಮಾಡಿದರು. ಮನೆಗೆ ವಾಪಸ್ ಹೋಗುವಾಗ ಮತ್ತೆ ಅದೇ ಹಳೆಯ ಸೀರೆಯನ್ನು ಉಟ್ಟುಕೊಂಡು ಹೋಗುತ್ತಿದ್ದರು.
1831 ಜನವರಿ 3ನೇ ತಾರೀಕು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಯಿಗಾಂವ ಎಂಬ ಹಳ್ಳಿಯಲ್ಲಿ ಖಂಡೋಜಿ ಪಾಟೀಲ, ಲಕ್ಷ್ಮಿಬಾಯಿ ಪಾಟೀಲ ದಂಪತಿಗೆ ಜನಿಸಿದ ಸಾವಿತ್ರಿಬಾಯಿಯನ್ನು ಒಂಭತ್ತನೇ ವಯಸ್ಸಿನಲ್ಲಿ ಅವಳ ತಂದೆ ಆಕೆಯನ್ನು ಹದಿಮೂರು ವಯಸ್ಸಿನ ಜ್ಯೋತಿಬಾ ಫುಲೆಗೆ ಮದುವೆ ಮಾಡಿಕೊಟ್ಟರು. ಜ್ಯೋತಿಬಾ ತಂದೆ ಪುಣೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಹೀಗಾಗಿ ಫುಲೆ ಎಂಬ ಅಡ್ಡ ಹೆಸರು ಅವರ ಮನೆಗೆ ಬಂತು. ಫುಲೆ ಅಂದರೆ ಮರಾಠಿಯಲ್ಲಿ ಹೂ ಎಂದಾಗುತ್ತದೆ.ಕನ್ನಡದಲ್ಲಿ ಇದೇ ವೃತ್ತಿ ಮಾಡುವವರನ್ನು ಹೂಗಾರ ಎಂದು ಕರೆಯುತ್ತಾರೆ.

ಸಾವಿತ್ರಿ ಬಾಲ್ಯದಲ್ಲಿ ತುಂಬಾ ಚುರುಕಾದ ಹುಡುಗಿ. ಒಂದು ದಿನ ತೋಟದಲ್ಲಿದ್ದಾಗ ಒಂದು ಹಾವು ಮರವನ್ನು ಏರಿ ಅಲ್ಲಿ ಗೂಡಿನಲ್ಲಿದ್ದ ಹಕ್ಕಿಯೊಂದರ ಮೊಟ್ಟೆಗಳನ್ನು ನುಂಗಲು ತೆವಳಿಕೊಂಡು ಹೋಗುತ್ತಿದ್ದಾಗ ಅದು ಸಾವಿತ್ರಿಯ ಕಣ್ಣಿಗೆ ಬಿತ್ತು. ಆಗ ತಡೆಯಲಾಗದೆ ಒಂದು ದೊಣ್ಣೆಯನ್ನು ಹಿಡಿದು ಹಾವನ್ನು ತೆಗೆದು ಬಿಸಾಡಿದಳು. ಇವಳ ಚುರುಕು ಬುದ್ಧಿಯನ್ನು ಗಮನಿಸಿದ ಕ್ರೈಸ್ತ ಮಿಶನರಿಯೊಬ್ಬರು ಸಾವಿತ್ರಿಗೆ ಒಂದು ಪುಸ್ತಕವನ್ನು ಕಾಣಿಕೆಯಾಗಿ ನೀಡಿದರು. ಆದರೆ ಶಾಲೆಗೆ ಹೋಗದ, ಅಕ್ಷರ ಬಾರದ ಆಕೆ ಅದನ್ನು ಓದುವದು ಹೇಗೆ? ಆದರೆ ಮಿಶನರಿ ಕೊಟ್ಟ ಪುಸ್ತಕವನ್ನು ಬಿಸಾಡದೆ ಆಕೆ ಜೋಪಾನವಾಗಿ ಇಟ್ಟುಕೊಂಡಳು. ಮುಂದೆ ಮದುವೆಯಾದಾಗ ಪಾದ್ರಿ ಕೊಟ್ಟ ಪುಸ್ತಕವನ್ನು ಹಿಡಿದುಕೊಂಡು ಪತಿಯ ಮನೆಗೆ ಬಂದಳು. ಇವಳ ಅಕ್ಷರ ದಾಹವನ್ನು ಗಮನಿಸಿ ಖುಷಿ ಪಟ್ಟ ಜ್ಯೋತಿಬಾ ಮನೆಯಲ್ಲೇ ಆಕೆಗೆ ಅಕ್ಷರ ಕಲಿಸಲು ಆರಂಭಿಸಿದರು. ಹೀಗೆ ಜ್ಯೋತಿಬಾ ಫುಲೆ ಸಾವಿತ್ರಿಯ ಮೊದಲ ಗುರು ಎಂದು ಹೆಸರಾದರು.

ಮುಂದೆ ಪತಿ ಜ್ಯೋತಿಬಾ ಸಲಹೆಯಂತೆ ಸಾವಿತ್ರಿಬಾಯಿ ಶಾಲೆಗೆ ಸೇರಿದಳು. ಆಗ ದಲಿತ ಬಾಲಕ, ಬಾಲಕಿಯರಿಗೆ ಶಾಲೆಯಲ್ಲಿ ಪ್ರವೇಶ ಇರಲಿಲ್ಲ. ಅಸ್ಪಶ್ಯತೆ ವ್ಯಾಪಕವಾಗಿತ್ತು. ಇದನ್ನು ಗಮನಿಸಿದ ಸಾವಿತ್ರಿಬಾಯಿ 1847ರ ಮೇ 1ನೇ ತಾರೀಕಿನಂದು ಮಹಾರಾವಾಡಾದಲ್ಲಿ ದಲಿತ ಹೆಣ್ಣು ಮಕ್ಕಳಿಗಾಗಿ ಅಹಿಲ್ಯಾಶ್ರಮ ಎಂಬ ಶಾಲೆಯನ್ನು ಆರಂಭಿಸಿದರು. ಈ ಶಾಲೆಯನ್ನು ಮುಚ್ಚಬೇಕೆಂದು ಒತ್ತಾಯಿಸಿ ಜಾತಿವಾದಿಗಳು ಗಲಾಟೆ ಆರಂಭಿಸಿದರು. ದಲಿತ ನಾಯಕರಲ್ಲೂ ಅವರ ಸಮುದಾಯದವರು ಶಾಲೆ ಕಲಿತರೆ ಮತಾಂತರವಾಗುತ್ತಾರೆಂಬ ಭಯವನ್ನು ಹುಟ್ಟಿಸಲಾಯಿತು. ಆಗ ಸರಕಾರಿ ಇಲ್ಲವೇ ಖಾಸಗಿ ಹೆಣ್ಣು ಮಕ್ಕಳ ಶಾಲೆಗಳು ಇರಲಿಲ್ಲ. ಹೀಗಾಗಿ ಕ್ರೈಸ್ತ ಮಿಶನರಿಗಳೇ ಹೆಣ್ಣು ಮಕ್ಕಳ ಶಾಲೆಯನ್ನು ನಡೆಸುತ್ತಿದ್ದರು. ಹೀಗಾಗಿ ಮತಾಂತರದ ಭಯವನ್ನು ಹುಟ್ಟಿಸಲಾಯಿತು (ತಳ ಸಮುದಾಯಗಳನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಮತಾಂತರ ಎಂಬ ಅಸ್ತ್ರವನ್ನು ಮನುವಾದಿಗಳು ಆ ಕಾಲದಲ್ಲೇ ಬಳಸಿದ್ದರೆಂಬುದನ್ನು ಗಮನಿಸಬಹುದು). ಕೊನೆಗೆ ಎಲ್ಲ ಜಾತಿಗಳ ಹೆಣ್ಣು ಮಕ್ಕಳು ಒಂದೇ ಕಡೆ ಓದುವ ಮೊದಲ ಶಾಲೆಯನ್ನು ಜ್ಯೋತಿಬಾ ಮತ್ತು ಸಾವಿತ್ರಿಬಾಯಿ 1848ರ ಜನವರಿಯಲ್ಲಿ ಆರಂಭಸಿದರು. ಫುಲೆ ದಂಪತಿಯ ಈ ಶಾಲೆಯಲ್ಲಿ ಎಲ್ಲ ವರ್ಗ, ಜಾತಿಯವರಿಗೆ ಪ್ರವೇಶ ನೀಡಲಾಯಿತು.

ಇದನ್ನು ಸಹಿಸದ ಮನುವಾದಿ ಗೂಂಡಾಗಳ ಹಲ್ಲೆ ಯತ್ನ ಮುಂದುವರಿದರೂ ಫುಲೆ ದಂಪತಿ ಮಣಿಯಲಿಲ್ಲ. ಈ ಅಕ್ಷರ ಸೇವೆಯಲ್ಲಿ ಸಾವಿತ್ರಿ ಬಾಯಿಗೆ ಜೊತೆಯಾದವಳು ಫಾತಿಮಾ ಶೇಖ್ ಎಂಬ ಯುವತಿ. ಸಾವಿತ್ರಿಯ ಜೊತೆ ಶಿಕ್ಷಕಿಯರ ತರಬೇತಿ ಪಡೆದ ಫಾತಿಮಾ ಶೇಖ್ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ. ಮನುವಾದಿಗಳ ಒತ್ತಡಕ್ಕೆ ಮಣಿದು ಜ್ಯೋತಿಬಾ ತಂದೆ ಗೋವಿಂದ ಫುಲೆ ಮಗ ಮತ್ತು ಸೊಸೆಯನ್ನು ಮನೆಯಿಂದ ಹೊರಗೆ ಹಾಕಿದಾಗ ಫುಲೆ ದಂಪತಿಗೆ ಆಸರೆ ನೀಡಿದವರು ಫಾತಿಮಾ ಶೇಖ್ ಅವರ ತಂದೆ ಉಸ್ಮಾನ್ ಚಾಚಾ ಎಂಬುದನ್ನು ಮರೆಯಲು ಸಾಧ್ಯವಿಲ್ಲ.

ಪುಣೆಯಲ್ಲಿ ಮನುವಾದಿ ಪೇಶ್ವೆ ಸಾಮ್ರಾಜ್ಯ ಪತನಗೊಂಡ ನಂತರ ದಿಗಿಲುಗೊಂಡ ಪ್ರತಿಗಾಮಿ ಶಕ್ತಿಗಳು ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮರು ಜೀವ ನೀಡಲು ಹಿಂದುತ್ವದ ವೇಷ ಹಾಕಿದವು. ಭಾರತದ ನೆಲದಲ್ಲಿ ವರ್ಣಾಶ್ರಮ ವ್ಯವಸ್ಥೆಗೆ ಪ್ರತಿರೋಧವಾಗಿ ಬೌದ್ಧ, ಜೈನ, ಲಿಂಗಾಯತ ಧರ್ಮಗಳು ಮತ್ತು ಭಕ್ತಿಪಂಥ, ಸೂಫಿ ಪರಂಪರೆ, ಸಿಖ್, ಇಸ್ಲಾಂ ಮತ್ತು ಕ್ರೈಸ್ತ ಮಾರ್ಗಗಳು ಜಾತಿ ವ್ಯವಸ್ಥೆಯ ವಿರುದ್ಧ ಪ್ರತಿರೋಧ ಮಾತ್ರವಲ್ಲ ಪ್ರತಿ ಸಂಸ್ಕೃತಿಯನ್ನು ರೂಪಿಸಿದವು. ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ ಈ ಪ್ರತಿರೋಧ ಪರಂಪರೆಯ ಉತ್ತರಾಧಿಕಾರಿಗಳಾಗಿ ಚಾಲನೆ ನೀಡಿದರು.
ಜ್ಯೋತಿಬಾ ಫುಲೆಯವರನ್ನು ಭಾರತದ ನಿಜವಾದ ಮಹಾತ್ಮಾ ಎಂದು ಗಾಂಧೀಜಿ ಕೂಡ ಶ್ಲಾಘಿಸಿದ್ದರು. ಆದರೆ ರಾಷ್ಟ್ರೀಯವಾದಿ ಚರಿತ್ರೆಕಾರರು ತಿಲಕ, ಗೋಖಲೆ, ರಾಜಾರಾಮ ಮೋಹನರಾಯರಿಗೆ ನೀಡಿದ ಪ್ರಾಶಸ್ತ್ಯವನ್ನು ಫುಲೆ ದಂಪತಿಗೆ ನೀಡಲಿಲ್ಲ.
ಭಾರತದ ಮಹಿಳಾ ಸಂಘಟನೆಗಳು ಕೂಡ ತುಂಬಾ ತಡವಾಗಿ ಸಾವಿತ್ರಿಬಾಯಿ ಅವರ ಸಾಧನೆಯನ್ನು ಗುರುತಿಸಿದವು. ವಾಸ್ತವವಾಗಿ ಕ್ಲಾರಾ ಜೆಟ್ಕಿನ್‌ಗಿಂಥ ಸಾವಿತ್ರಿ ಬಾಯಿ ಫುಲೆ ಭಾರತ ನೆಲದ ಮಹಿಳಾ ಆಂದೋಲನಕ್ಕೆ ಹೆಚ್ಚು ಪ್ರಸ್ತುತರಾಗುತ್ತಾರೆ.

ಸಾಮಾಜಿಕ ಬದಲಾವಣೆಗೆ ಹೋರಾಡುವವರ ವೈಯಕ್ತಿಕ ಬದುಕು ಇತರರಿಗೆ ಮಾದರಿಯಾಗಬೇಕು. ಅನ್ಯಾಯದ ವಿರುದ್ಧ ಪ್ರತಿರೋಧದ ಜೊತೆಗೆ ಹೇಗೆ ಬದುಕಬೇಕು ಎಂಬುದಕ್ಕೆ ಉಳಿದವರಿಗೆ ಮಾದರಿಯಾಗಬೇಕು. ಜ್ಯೋತಿಬಾ ಮತ್ತು ಸಾವಿತ್ರಿ ಫುಲೆ ಅವರ ದಾಂಪತ್ಯ ಜೀವನ ಆದರ್ಶಮಯವಾಗಿತ್ತು. ಅವರ ನಡುವಿನ ಪರಸ್ಪರ ತಿಳುವಳಿಕೆ, ಹೊಂದಾಣಿಕೆ, ಇತರರಿಗೆ ಮಾದರಿಯಾಗಿತ್ತು. ಕಮ್ಯುನಿಸ್ಟ್ ಚಳವಳಿಯಲ್ಲೂ ಎ.ಕೆ.ಗೋಪಾಲನ್, ಸುಶೀಲಾ ಗೋಪಾಲನ್, ಎಸ್.ಎ.ಡಾಂಗೆ, ಉಷಾತಾಯಿ ಡಾಂಗೆ, ಪೂರ್ಣಚಂದ್ರ ಜೋಶಿ, ಕಲ್ಪನಾದತ್ತ (ಜೋಶಿ) ಎಂ.ಫರೂಕಿ, ವಿಮಲಾ ಫರೂಕಿ, ದಾಂಪತ್ಯ ಹಾಗೂ ಸಮಾಜವಾದಿ ಚಳವಳಿಯಲ್ಲಿ ಮಧು ಲಿಮಯೆ, ಮಧು ದಂಡವತೆ, ಸ್ನೇಹಲತಾ ಪಟ್ಟಾಭಿರಾಮ ರೆಡ್ಡಿ ಅಂಥವರ ದಾಂಪತ್ಯ ಜೀವನ ಆದರ್ಶಪ್ರಾಯವಾಗಿತ್ತು. ಇವರೆಲ್ಲ ಸ್ನೇಹಿತರಂತೆ ಬದುಕಿದರು.

ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಚರಿತ್ರೆ ತುಂಬಾ ತಡವಾಗಿ ಬೆಳಕಿಗೆ ಬಂದ ನಂತರ ಈಗ ಮಹಾರಾಷ್ಟ್ರ ಸರಕಾರವೇ ಫುಲೆ ಜಯಂತಿಯನ್ನು ಆಚರಿಸುತ್ತಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಕಾರ್ಯಕ್ರಮಗಳಲ್ಲಿ ವೇದಿಕೆಯ ಮೇಲೆ ಫುಲೆ ದಂಪತಿಯ ಭಾವಚಿತ್ರಗಳು ಎಲ್ಲೆಡೆ ಕಾಣುತ್ತಿವೆ.
ಶಿಕ್ಷಕ ದಿನಾಚರಣೆಯನ್ನು ಸಾವಿತ್ರಿಬಾಯಿ ಫುಲೆ ಜನ್ಮದಿನವಾದ ಜನವರಿ 3ನೇ ತಾರೀಕು ಆಚರಿಸಬೇಕೆಂದು ಗದುಗಿನ ತೋಂಟದ ಮಠದ ಸಿದ್ದಲಿಂಗ ಸ್ವಾಮಿಗಳು ಹಿಂದೊಮ್ಮೆ ಹೇಳಿದ್ದರು. ಹಾಗೆಂದು ರಾಧಾಕೃಷ್ಣನ್ ಗೌರವಾನ್ವಿತರೆಂದಲ್ಲ. ಅವರನ್ನು ಗೌರವಿಸುತ್ತಲೇ ಹದಿನೆಂಟನೇ ಶತಮಾನದಲ್ಲಿ ಹೆಣ್ಣು ಮಕ್ಕಳಿಗೆ ಮೊದಲು ಶಾಲೆ ತೆರೆದು ಅಕ್ಷರ ಕಲಿಸಿದ ಸಾವಿತ್ರಿಬಾಯಿ ಫುಲೆ ಜನ್ಮದಿನ ಶಿಕ್ಷಕ ದಿನಾಚರಣೆಗೆ ಹೆಚ್ಚು ಸೂಕ್ತವಾಗಿದೆ. ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರಬೇಕು.
ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗೆ ಮಕ್ಕಳಾಗಲಿಲ್ಲ. ಆದರೆ ಅದಕ್ಕೆ ಬೇಸರಿಸಿಕೊಳ್ಳದೆ ಕಾಶಿಬಾಯಿ ಎಂಬ ವಿಧವೆಗೆ ಹುಟ್ಟಿದ ಮಗುವನ್ನೇ ಸಾವಿತ್ರಿಬಾಯಿ ದತ್ತು ತೆಗೆದುಕೊಳ್ಳುತ್ತಾರೆ. ಆ ಮಗುವಿಗೆ ಯಶವಂತ ಎಂದು ಹೆಸರನ್ನಿಟ್ಟು ವಾರಸುದಾರಿಕೆ ನೀಡುತ್ತಾರೆ. ಮುಂದೆ ಆ ಮಗುವನ್ನು ಓದಿಸಿ ವೈದ್ಯನನ್ನಾಗಿ ಮಾಡುತ್ತಾರೆ. ಆಗ ಎಲ್ಲೆಡೆ ಪ್ಲೇಗ್ ಕಾಯಿಲೆ ಹಬ್ಬಿ ಜನ ಸಾಯತೊಡಗಿದಾಗ ಡಾಕ್ಟರ್ ಮಗ ಯಶವಂತನೊಂದಿಗೆ ಸಾವಿತ್ರಿಬಾಯಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಇಂದು ಮಹಿಳೆಯರು ವಿದ್ಯಾವಂತರಾಗಿ ಅನೇಕ ಉನ್ನತ ಸ್ಥಾನಮಾನ ಪಡೆದಿದ್ದಾರೆ. ದಕ್ಷತೆ, ಪ್ರಾಮಾಣಿಕತೆ, ಬದ್ಧತೆಗಳಲ್ಲಿ ಪುರುಷರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ವೈದ್ಯರಾಗಿ, ಇಂಜಿನಿಯರುಗಳಾಗಿ, ವಿಜ್ಞಾನಿಗಳಾಗಿ, ರಾಜತಾಂತ್ರಿಕರಾಗಿ, ಸಂಸದರಾಗಿ, ಶಾಸಕಿಯರಾಗಿ, ಪಂಚಾಯತ್ ಸದಸ್ಯರಾಗಿ, ಶಿಕ್ಷಕಿಯರಾಗಿ, ಪತ್ರಕರ್ತರಾಗಿ, ನಾನಾ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಇದಕ್ಕೆ ಹದಿನೆಂಟನೇ ಶತಮಾನದಲ್ಲಿ ಸಾವಿತ್ರಿಬಾಯಿ ಮತ್ತು ಅವರಂಥ ಅನೇಕರ ಪರಿಶ್ರಮ, ತ್ಯಾಗ, ಸೇವೆಗಳು ಕಾರಣ ಎಂಬುದು ಸದಾ ನಮ್ಮ ನೆನಪಿನಲ್ಲಿರಬೇಕು

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News