ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ವಾರದಲ್ಲಿ ಮೂರು ಪಟ್ಟು ಹೆಚ್ಚಳ

Update: 2022-01-03 01:55 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಮೂರನೇ ಅಲೆ ಆರಂಭದ ಸೂಚನೆ ಸ್ಪಷ್ಟವಾಗಿ ಕಂಡುಬಂದಿದ್ದು, ಭಾನುವಾರ ಕೊನೆಗೊಂಡ ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ಹಿಂದೆಂದೂ ಕಾಣದಷ್ಟು ಭಾರಿ ಪ್ರಮಾಣದಲ್ಲಿ ಅಂದರೆ ಶೇಕಡ 181ರಷ್ಟು ಪ್ರಕರಣಗಳು ಒಂದೇ ವಾರದಲ್ಲಿ ಹೆಚ್ಚಿವೆ.

ಡಿಸೆಂಬರ್ 27ರಿಂದ ಜನವರಿ 2ರವರೆಗಿನ ಒಂದು ವಾರದಲ್ಲಿ ದೇಶದಲ್ಲಿ 1.3 ಲಕ್ಷ ಹೊಸ ಪ್ರಕರಗಳು ವರದಿಯಾಗಿದೆ. ಇದಕ್ಕೂ ಹಿಂದಿನ ವಾರ 46073 ಪ್ರಕರಣಗಳು ಪತ್ತೆಯಾಗಿದ್ದವು. ಹಿಂದಿನ ವಾರ ದಾಖಲಾದ ಈ ಪ್ರಕರಣಗಳ ಸಂಖ್ಯೆ 2020ರ ಮೇ ತಿಂಗಳ ಬಳಿಕ ಕನಿಷ್ಠ ಎನಿಸಿಕೊಂಡಿತ್ತು.

ಇದು ದೇಶದಲ್ಲಿ ಸಾಂಕ್ರಾಮಿಕ ಆರಂಭವಾದ ಬಳಿಕ ಒಂದು ವಾರದ ಅವಧಿಯಲ್ಲಿ ಆಗಿರುವ ಗರಿಷ್ಠ ಏರಿಕೆಯಾಗಿದೆ. ಇದಕ್ಕೂ ಮುನ್ನ 2021ರ ಏಪ್ರಿಲ್ 5-11ರ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಗರಿಷ್ಠ ಎಂದರೆ ಒಂದು ವಾರದಲ್ಲಿ ಶೇಕಡ 71ರಷ್ಟು ಏರಿಕೆಯಾಗಿತ್ತು.

ಭಾನುವಾರ ದೇಶದಲ್ಲಿ 33703 ಪ್ರಕರಣಗಳು ವರದಿಯಾಗಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ಶೇಕಡ 21ರಷ್ಟು ಏರಿಕೆಯಾಗಿದೆ. ಶನಿವಾರ ದೇಶದಲ್ಲಿ 2777 ಪ್ರಕರಣಗಳು ವರದಿಯಾಗಿದ್ದವು. ಹಿಂದಿನ ಭಾನುವಾರ ದೇಶದಲ್ಲಿ 6542 ಪ್ರಕರಣ ವರದಿಯಾಗಿತ್ತು. ಒಮೈಕ್ರಾನ್‌ ಪೀಡಿತ ದೇಶಗಳಲ್ಲೂ ಇದೇ ವೇಗದಲ್ಲಿ ಪ್ರಕರಣಗಳ ಏರಿಕೆ ಕಂಡುಬಂದಿದೆ.

ಮಹಾರಾಷ್ಟ್ರದಲ್ಲಿ ಏರಿಕೆ ಗರಿಷ್ಠವಾಗಿದ್ದು, ಒಂದು ವಾರದಲ್ಲಿ 41980 ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವಾರ ದಾಖಲಾಗಿದ್ದ 8292 ಪ್ರಕರಣಗಳಿಗೆ ಹೋಲಿಸಿದರೆ ಐದು ಪಟ್ಟು ಅಧಿಕ. ಶೇಕಡಾವಾರು ಏರಿಕೆಯಲ್ಲಿ ಬಿಹಾರ ಅಗ್ರಸ್ಥಾನಿಯಾಗಿದ್ದು, ಡಿಸೆಂಬರ್ 20-26 ಅವಧಿಯಲ್ಲಿ ಇಲ್ಲಿ 85 ಪ್ರಕರಣಗಳಷ್ಟೇ ವರದಿಯಾಗಿದ್ದವು. ಆದರೆ ಕಳೆದ ವಾರ 1073 ಪ್ರಕರಣಗಳು ಬೆಳಕಿಗೆ ಬಂದಿದ್ದು, 12 ಪಟ್ಟು ಏರಿಕೆಯಾದಂತಾಗಿದೆ. ಬಂಗಾಳದಲ್ಲಿ ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆ 3550ರಿಂದ 18524ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News