ದೇಶದಲ್ಲಿ ಕೋವಿಡ್ ಮೂರನೇ ಅಲೆಯ ಆತಂಕ

Update: 2022-01-03 18:21 GMT

ಹೊಸದಿಲ್ಲಿ, ಜ. 3: ಕೋವಿಡ್‌ನ ರೂಪಾಂತರವಾದ ಒಮೈಕ್ರಾನ್ ಸೋಂಕಿನ ಪ್ರಕರಣಗಳ ಸಂಖ್ಯೆ ದೇಶದಲ್ಲಿ ತೀವ್ರ ಏರಿಕೆಯಾಗುತ್ತಿದ್ದು, ಕೋವಿಡ್ ಮೂರನೇ ಅಲೆಯ ಆತಂಕ ಎದುರಾಗಿದೆ. ದಿಲ್ಲಿಯಲ್ಲಿ ಸೋಮವಾರ 3,194 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಮೇ 20ರ ಬಳಿಕ ಒಂದೇ ದಿನ ದಾಖಲಾಗುತ್ತಿರುವ ಅತ್ಯಧಿಕ ಪ್ರಕರಣ. ಮುಂಬೈಯಲ್ಲಿ ಶನಿವಾರ 6,347 ಹೊಸ ಪ್ರಕರಣಗಳು ಹಾಗೂ ಸೋಮವಾರ 8,063 ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಶೆ. 27 ಏರಿಕೆಯಾಗಿದೆ. ಮೆಟ್ರೊ ನಗರಗಳು ಹಾಗೂ ಕೆಲವು ರಾಜ್ಯಗಳಲ್ಲಿ ಇತ್ತೀಚೆಗೆ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶ ಕೋವಿಡ್ ಮೂರನೇ ಅಲೆ ಎದುರಿಸಬೇಕಾದ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ದಿಲ್ಲಿ ಹಾಗೂ ಮುಂಬೈಯಲ್ಲಿ ಕಂಡು ಬಂದ ಹೆಚ್ಚಿನ ಹೊಸ ಸೋಂಕು ಪ್ರಕರಣಗಳು ಲಕ್ಷಣ ರಹಿತವಾಗಿವೆ. ಬಿಎಂಸಿ ದತ್ತಾಂಶದ ಪ್ರಕಾರ ಮುಂಬೈಯಲ್ಲಿ ದಾಖಲಾದ ಶೇ. 89 ಪ್ರಕರಣಗಳು ಲಕ್ಷಣ ರಹಿತವಾಗಿದೆ. ಇದು ಇತ್ತೀಚೆಗೆ ಒಮೈಕ್ರಾನ್ ಪ್ರಕರಣಗಳು ಏರಿಕೆಯಾಗುತ್ತಿರುವುದನ್ನು ಸೂಚಿಸಿದೆ.

ಇನ್ನೊಂದೆಡೆ ದಿಲ್ಲಿಯಲ್ಲಿ ಜನವರಿ ಮೊದಲ ಎರಡು ದಿನ ಕೊರೋನ ಸೋಂಕಿನ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಇದು ಆಗಸ್ಟ್ ಹಾಗೂ ನವೆಂಬರ್ ನಡುವೆ ದಾಖಲಾದ ಕೋವಿಡ್ ಪ್ರಕರಣಗಳಿಗಿಂತ ಅಧಿಕವಾಗಿದೆ ಎಂದು ಅಧಿಕೃತ ದತ್ತಾಂಶ ತಿಳಿಸಿದೆ. ಜನವರಿ 1ರಿಂದ ದಿಲ್ಲಿಯಲ್ಲಿ 5,910 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಶನಿವಾರ 2,716 ಪ್ರಕರಣಗಳು, ರವಿವಾರ 3,194 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ರವಿವಾರ 1,187 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 10,292ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾತ್ರ 8,671 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ನಡುವೆ ಪಶ್ಚಿಮಬಂಗಾಳದಲ್ಲಿ ದಿನಂಪ್ರತಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ 6,153ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 33 ಆಗಿದೆ.

ಮುಂಬೈ: ಜನವರಿ 31ರ ವರೆಗೆ ಶಾಲೆ ಬಂದ್ 

ಮುಂಬೈಯ ಶಾಲೆಗಳಲ್ಲಿ 1ರಿಂದ 9ನೇ ವರೆಗಿನ ತರಗತಿಗಳು ಜನವರಿ 31ರ ವರೆಗೆ ರದ್ದುಪಡಿಸಲಾಗಿದೆ. 10 ಹಾಗೂ 12ನೇ ತರಗತಿ ಮುಂದುವರಿಯಲಿದೆ ಎಂದು ಬ್ರಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್‌ನ ಆದೇಶ ತಿಳಿಸಿದೆ.

ನೈನಿತಾಲ್‌ನ ಶಾಲೆಯಲ್ಲಿ 85 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು

ನೈನಿತಾಲ್‌ನ ಗಂಗಾರ್‌ಕೋಟ್‌ನಲ್ಲಿ ಇರುವ ಜವಾಹರ್ ನವೋದಯ ವಿದ್ಯಾಲಯದ 85 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಇತ್ತೀಚೆಗೆ 11 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟ ಬಳಿಕ ಶಾಲೆಯ 496 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಮಾದರಿಯನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಗೋವಾದಲ್ಲಿ ಶೇ. 10.7ಕ್ಕೆ ತಲುಪಿದ ಪಾಸಿಟಿವಿಟಿ ದರ : ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲು ಕೋವಿಡ್ ಪಾಸಿಟಿವಿಟಿ ದರ ಶೇ. 10 ದಾಟಿರುವುದು ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೋವಾದಲ್ಲಿ ರವಿವಾರದಿಂದ 3,604 ಪರೀಕ್ಷೆಗಳಲ್ಲಿ 388 ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಪಾಸಿಟಿವಿಟಿ ದರ ಶೇ. 10.7ಕ್ಕೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ.

ಕೋಲ್ಕತ್ತಾದ 100 ವೈದ್ಯರಿಗೆ ಕೋವಿಡ್ ಸೋಂಕು : ಕೋಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ 70 ವೈದ್ಯರು, ಕಾಲಿಘಾಟ್ ಚಿತ್ತರಂಜನ್ ಸೇವಾ ಸದನ್ ಹಾಗೂ ಶಿಶು ಸದನ್ ಆಸ್ಪತ್ರೆಯ 24 ವೈದ್ಯರು ಹಾಗೂ ನೇತ್ರಶಾಸ್ತ್ರ ದ ಪ್ರಾದೇಶಿಕ ಸಂಸ್ಥೆಯ 12 ವೈದ್ಯರಿಗೆ ಕೋವಿಡ್ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ ಕೋಲ್ಕತ್ತಾದ ವಿವಿಧ ಆಸ್ಪತ್ರೆಗಳ 100ಕ್ಕೂ ಅಧಿಕ ವೈದ್ಯರಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News