ಬುಲಂದ್ ಶಹರ್ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ
ಹೊಸದಿಲ್ಲಿ: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ 2018ರಲ್ಲಿ ಗುಂಪೊಂದು ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಸಯಾನಾ ಬಜರಂಗದಳ ಘಟಕದ ಸಂಚಾಲಕ ಯೋಗೇಶ್ ರಾಜ್ ಹಾಗೂ ಸಯಾನಾದಲ್ಲಿ ಬಿಜೆಪಿಯ ಯುವ ಘಟಕದ ಮಾಜಿ ಅಧ್ಯಕ್ಷ ಶಿಖರ್ ಅಗರ್ವಾಲ್ ಇತರರೊಂದಿಗೆ ಸೇರಿಕೊಂಡು ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಎದುರಿಸುತ್ತಿದ್ದು, ಇವರಿಗೆ ಅಲಹಾಬಾದ್ ಹೈಕೋರ್ಟ್ ಡಿಸೆಂಬರ್ 2021 ರಲ್ಲಿ ಜಾಮೀನು ನೀಡಿತ್ತು.
ಚಿರಂಗವತಿ ಪೊಲೀಸ್ ಪೋಸ್ಟ್‌ನಲ್ಲಿ ಸಂಘಪರಿವಾರದ ಗುಂಪುಗಳ ಪ್ರತಿಭಟನೆಯ ನಂತರ ಡಿಸೆಂಬರ್ 3, 2018 ರಂದು ಬುಲಂದ್‌ಶಹರ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುಬೋಧ್ ಸಿಂಗ್ ಅವರನ್ನು ಬುಲಂದ್‌ಶಹರ್‌ನ ಸಯಾನಾ ಪ್ರದೇಶದಲ್ಲಿ ಗುಂಪೊಂದು ಗುಂಡಿಕ್ಕಿ ಕೊಂದಿತ್ತು. ಮಹಾವ್ ಗ್ರಾಮದ ಹೊಲವೊಂದರಲ್ಲಿ ಹಸುವಿನ ಕಳೇಬರ ಪತ್ತೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿತ್ತು.
ಆರೋಪಿಗಳಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದ ನಂತರ ಸುಬೋಧ್ ಸಿಂಗ್ ಅವರ ಪತ್ನಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಯೋಗೀಶ್ ರಾಜ್‌ಗೆ ನೀಡಲಾಗಿದ್ದ ಜಾಮೀನಿಗೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್ ಪೀಠ, ಗೋಹತ್ಯೆಯ ನೆಪದಲ್ಲಿ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದಿರುವ ವಿಷಯವು ತುಂಬಾ ಗಂಭೀರವಾಗಿದೆ. ಮೇಲ್ನೋಟಕ್ಕೆ, ಇದು ಜನರು ಕಾನೂನು ಕೈಗೆ ತೆಗೆದುಕೊಳ್ಳುವ ಪ್ರಕರಣವಾಗಿದೆ. ಇಂದಿನಿಂದ ಏಳು ದಿನಗಳೊಳಗೆ ಶರಣಾಗುವಂತೆ ಯೋಗೀಶ್ ರಾಜ್‌ಗೆ ತಿಳಿಸಬೇಕು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ ಅಲ್ಲಿಯ ತನಕ ಜಾಮೀನು ಮಂಜೂರು ಮಾಡುವ ಆದೇಶಗಳನ್ನು ತಡೆಹಿಡಿಯಲಾಗಿದೆ. ನಾವು ಬುಲಂದ್‌ಶಹರ್ ವಿಚಾರಣಾ ನ್ಯಾಯಾಲಯದಿಂದ ವರದಿಯನ್ನು ಕೇಳುತ್ತೇವೆ ಆರೋಪಗಳನ್ನು ರೂಪಿಸಲು ಮತ್ತು ಸ್ವತಂತ್ರ ಸಾಕ್ಷಿಗಳ ಸಾಕ್ಷ್ಯಗಳನ್ನು ದಾಖಲಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂದು ನಾವು ಕೇಳುತ್ತೇವೆ ಎಂದಿದೆ.