ಇರಾನ್ ಹೊಡೆದುರುಳಿಸಿದ ಉಕ್ರೇನ್ ವಿಮಾನದಲ್ಲಿದ್ದ ಕುಟುಂಬಗಳಿಗೆ 83.94 ಮಿಲಿಯನ್ ಡಾಲರ್ ಪರಿಹಾರ ನೀಡಲು ಆದೇಶ

Update: 2022-01-04 17:33 GMT
ಸಾಂದರ್ಭಿಕ ಚಿತ್ರ

ಒಟ್ಟಾವ, ಜ.4: ಎರಡು ವರ್ಷದ ಹಿಂದೆ ಉಕ್ರೇನ್ ನ ವಿಮಾನವನ್ನು ಇರಾನ್‌ನ ರೆವೊಲ್ಯೂಷನರಿ ಗಾರ್ಡ್ ಪಡೆ ಉರುಳಿಸಿದಾಗ ಮೃತಪಟ್ಟಿದ್ದ 6 ಜನರ ಕುಟುಂಬಗಳಿಗೆ 83.94 ಮಿಲಿಯನ್ ಡಾಲರ್ ಪರಿಹಾರ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸುವಂತೆ ಕೆನಡಾದ ನ್ಯಾಯಾಲಯ ತೀರ್ಪು ನೀಡಿದೆ.

2020ರ ಜನವರಿಯಲ್ಲಿ ಟೆಹ್ರಾನ್ ಬಳಿ ಈ ಪ್ರಕರಣ ನಡೆದಿತ್ತು. 176 ಪ್ರಯಾಣಿಕರಿದ್ದ ಉಕ್ರೇನ್ ಅಂತರಾಷ್ಟ್ರೀಯ ವಿಮಾನದ ಮೇಲೆ ಇರಾನ್ ನ ರೆವೊಲ್ಯೂಷನರಿ ಗಾರ್ಡ್ಸ್ ಪಡೆ ದಾಳಿ ನಡೆಸಿದಾಗ ವಿಮಾನ ಪತನಗೊಂಡಿದ್ದು ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು. ಮೃತರಲ್ಲಿ ಕೆನಡಾದ 55 ನಾಗರಿಕರು ಮತ್ತು 30 ಕಾಯಂ ನಿವಾಸಿಗಳಿದ್ದರು.

ಇರಾಕ್‌ನ ರಾಜಧಾನಿ ಬಗ್ದಾದ್‌ಗೆ ರಾಜತಾಂತ್ರಿಕ ಭೇಟಿ ನೀಡಿದ್ದ ಇರಾನ್‌ನ ಉನ್ನತ ಸೇನಾಧಿಕಾರಿ ಕಾಸಿಂ ಸುಲೈಮಾನಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಸಂದರ್ಭ ಇದಾಗಿತ್ತು. ಸುಲೈಮಾನಿ ದಾಳಿಗೆ ಪ್ರತೀಕಾರವಾಗಿ ಇರಾನ್ ಪಡೆ ಇರಾಕ್‌ನಲ್ಲಿನ ಅಮೆರಿಕ ಸೇನಾನೆಲೆಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಗೆ ಪ್ರತೀಕಾರವಾಗಿ ಅಮೆರಿಕದ ಯುದ್ಧವಿಮಾನ ದಾಳಿಗೆ ಬರುತ್ತಿದೆ ಎಂದು ತಪ್ಪುತಿಳಿದು ಉಕ್ರೇನ್‌ನ ವಿಮಾನವನ್ನು ಕ್ಷಿಪಣಿಯಿಂದ ಹೊಡೆದುರುಳಿಸಿರುವುದಾಗಿ ಇರಾನ್ ಒಪ್ಪಿಕೊಂಡಿತ್ತು.

ಇರಾನ್‌ನ ಬೇಜವಾಬ್ದಾರಿಯ ನಡೆಯಿಂದ ತಮ್ಮ ಮನೆಯವರನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಇರಾನ್ ತಮಗೆ ಪರಿಹಾರ ನೀಡಬೇಕು ಎಂದು 6 ಮಂದಿಯ ಕುಟುಂಬದವರು ಕೆನಡಾದ ಒಂಟಾರಿಯೊ ನಗರದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ಆರಂಭವಾಗಿತ್ತು. ಈ ಮಧ್ಯೆ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದ ಕೆನಡಾದ ವಿಶೇಷ ವಿಧಿವಿಜ್ಞಾನ ತಂಡದ ಅಧಿಕಾರಿಗಳು, ಉಕ್ರೇನ್ನ ವಿಮಾನ ಉರುಳಿಸಿದ ಇರಾನ್ ಕೃತ್ಯ ಪೂರ್ವನಿಯೋಜಿತವಲ್ಲ. ಆದರೆ, ಪ್ರಕರಣದ ಹೊಣೆಗಾರಿಕೆಯಿಂದ ಇರಾನ್ ಅಧಿಕಾರಿಗಳು ನುಣುಚಿಕೊಳ್ಳುವಂತಿಲ್ಲ. ಉಕ್ರೇನ್ ನ ಪ್ರಯಾಣಿಕರ ವಿಮಾನ ಹೊಡೆದುರುಳಿಸಿದ್ದು ಇರಾನ್ ಅಸಮರ್ಥ ಮತ್ತು ಅಜಾಗರೂಕತೆಯ ಕ್ರಮವಾಗಿದೆ ಎಂದು ವರದಿ ನೀಡಿತ್ತು.

ಇದೀಗ ಕೆನಡಾದ ನ್ಯಾಯಾಲಯ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಆದೇಶಿಸಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸಂತ್ರಸ್ತ ಕುಟುಂಬದವರ ಪರ ನ್ಯಾಯವಾದಿಗಳು, ಇರಾನ್ ಹಲವು ದೇಶಗಳಲ್ಲಿ ತೈಲ ಟ್ಯಾಂಕರ್ ಸಹಿತ ಹಲವಾರು ಆಸ್ತಿಗಳನ್ನು ಹೊಂದಿದೆ. ಇವನ್ನು ಮುಟ್ಟುಗೋಲು ಹಾಕಿಕೊಂಡು ತಮಗೆ ಪರಿಹಾರ ಒದಗಿಸುವಂತೆ ಕೋರಿಕೆ ಮಂಡಿಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News