ದಕ್ಷಿಣ ಆಫ್ರಿಕಾ: ಸಂಸತ್ ನಲ್ಲಿ ಮತ್ತೊಂದು ಬೆಂಕಿ ದುರಂತ

Update: 2022-01-04 17:17 GMT
photo:twitter

ಕೇಪ್‌ಟೌನ್, ಜ.4: ದಕ್ಷಿಣ ಆಫ್ರಿಕಾದ ಸಂಸತ್‌ಭವನದ ಕಟ್ಟಡದಲ್ಲಿ ಮಂಗಳವಾರ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ನಿರಂತರ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ರವಿವಾರದ ಬೆಂಕಿ ದುರಂತಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಶಂಕಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮೂಲಗಳು ಹೇಳಿವೆ.

ರವಿವಾರದ ಬೆಂಕಿ ಅನಾಹುತದಲ್ಲಿ ಸಂಸತ್‌ನ ಕೆಳಮನೆಯ ಕಲಾಪ ನಡೆಯುವ ಸಭಾಂಗಣದ ಮಾಡು ಕುಸಿದುಬಿದ್ದಿತ್ತು. ಮೇಲ್ಮನೆಯ ಕಲಾಪ ನಡೆಯುವ ಸಭಾಂಗಣದ (1884ರಲ್ಲಿ ನಿರ್ಮಾಣಗೊಂಡಿದೆ) ಮಾಡಿಗೂ ಆಂಶಿಕ ಹಾನಿಯಾಗಿದೆ. ಇದೀಗ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು ಹಲವು ಕಟ್ಟಡಗಳಿರುವ ಸಂಸತ್ ಭವನದ ಸಂಕೀರ್ಣದಲ್ಲಿನ ಪ್ರತೀ ಕೋಣೆಯಲ್ಲೂ ಕೂಲಂಕುಷ ಪರಿಶೀಲನೆ ನಡೆಸಲಾಗುತ್ತಿದೆ. ಇದೊಂದು ಸುದೀರ್ಘ ಪ್ರಕ್ರಿಯೆಯಾಗಿದ್ದು ಕೆಲವು ಕೊಠಡಿಗಳ ಒಳಾಂಗಣ ವಿನ್ಯಾಸಕ್ಕೆ ಮರದ ಪೀಠೋಪಕರಣ ಬಳಸಿರುವುದರಿಂದ ಬೆಂಕಿಯ ಕಿಡಿ ಅಡಗಿರುವ ಸಾಧ್ಯತೆಯಿದೆ ಎಂದು ಕೇಪ್‌ಟೌನ್ ನಗರದ ಅಧಿಕಾರಿಗಳು ಹೇಳಿದ್ದಾರೆ. ಬಹುತೇಕ ಕೊಠಡಿಗಳಿಗೆ ಬೆಂಕಿ ಹಬ್ಬಿದ್ದರೂ ಕಲಾಕೃತಿ, 

ಪಾರಂಪರಿಕ ವಸ್ತುಗಳಿರುವ ಮ್ಯೂಸಿಯಂಗೆ ಬೆಂಕಿ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸಂಸತ್ ಭವನ ಕಟ್ಟಡ ದಕ್ಷಿಣ ಆಫ್ರಿಕನ್ನರಿಗೆ ಮಹತ್ವದ್ದಾಗಿದೆ. ಇದು ಪ್ರಜಾಪ್ರಭುತ್ವದ ಹೃದಯ ಬಡಿತದ ಸ್ಥಳವಾಗಿದೆ. ಇದು ಕಾರ್ಯನೀತಿ ಮತ್ತು ಶಾಸನಗಳ ಬಗ್ಗೆ ಚರ್ಚಿಸಲು ಸಂಸದರು ಸೇರುವ ಸ್ಥಳವಾಗಿದೆ ಮತ್ತು ರಾಷ್ಟ್ರಪತಿಗಳು ದೇಶವನ್ನುದ್ದೇಶಿಸಿ ಭಾಷಣ ಮಾಡುವ ಸ್ಥಳವಾಗಿದೆ. ಈ ಕಟ್ಟಡವನ್ನು ನವೀಕರಿಸಲು ಗಮನಾರ್ಹ ವೆಚ್ಚ ಬರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಘಟನೆಗೆ ಸಂಬಂಧಿ 49 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು , ಬೆಂಕಿ ಹಚ್ಚಿರುವುದು, ಕಳ್ಳತನ ಸಹಿತ ಇತರ ಅಪರಾಧದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News