×
Ad

ಸ್ಥಳೀಯ ನಂಬಿಕೆಗೆ ವಿರುದ್ಧವಾಗಿ ಮರ ಕಡಿಯುತ್ತಿದ್ದ ಆರೋಪ: ವ್ಯಕ್ತಿಯನ್ನು ಥಳಿಸಿ, ಜೀವಂತ ದಹಿಸಿದ ಗುಂಪು

Update: 2022-01-04 23:23 IST

ಜಾರ್ಖಂಡ್: ಕುಂಟ್ಕಟ್ಟಿ ಪದ್ದತಿಗೆ ವಿರುದ್ಧವಾಗಿ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರ ಸಮ್ಮುಖದಲ್ಲೇ ವ್ಯಕ್ತಿಯೊಬ್ಬನ ಮೇಲೆ ಗ್ರಾಮಸ್ಥರ ಗುಂಪು ಮಾರಣಾಂತಿಕ ದಾಳಿ ಮಾಡಿ, ಜೀವಂತ ದಹಿಸಿರುವ ಘಟನೆ ಜಾರ್ಖಂಡ್‌ನ ಕೊಲಬಿರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಮೃತ ವ್ಯಕ್ತಿಯನ್ನು ಸಂಜು ಪ್ರಧಾನ್‌ ಎಂದು ಗುರುತಿಸಲಾಗಿದ್ದು, ಆತನಿಗೆ ಮರ ಕಡಿಯದಂತೆ ಗ್ರಾಮಸ್ಥರು ಈ ಹಿಂದೆಯೇ ಎಚ್ಚರಿಕೆ ನೀಡಿರುವುದಾಗಿ ವರದಿ ಆಗಿದೆ. ಮರಗಳನ್ನು ಕಡಿಯದಂತೆ ಎಚ್ಚರಿಸಿದಾಗ್ಯೂ, ಮರಗಳನ್ನು ಕಡಿಯುತ್ತಿದ್ದ ಪ್ರಧಾನ್‌ಗೆ ಒಂದು ಪಾಠ ಕಲಿಸಬೇಕೆಂದು ಗ್ರಾಮಸ್ಥರು ತೀರ್ಮಾನಿಸಿದ್ದರು. 

ಹೀಗೆ ಮರಗಳನ್ನು ಕಡಿದು ಮಾರಾಟ ಮಾಡುವುದು “ಕುಂಟ್ಕಟ್ಟಿ” ಪದ್ಧತಿಗೆ ವಿರುದ್ಧವಾಗಿರುವುದು ಎಂದು ಸ್ಥಳೀಯ‌ ಬುಡಕಟ್ಟು ವಾಸಿಗಳಾದ ಮುಂಡಾ ಜನಾಂಗದವರು ನಂಬುತ್ತಾರೆ. ಬುಡಕಟ್ಟು ಜನಾಂಗದವರಿಗೆ ಇರುವ ಜಂಟಿ ಮಾಲೀಕತ್ವವನ್ನು ಕುಂಟ್ಕಟ್ಟಿ ಪದ್ಧತಿಯೆಂದು ಕರೆಯುತ್ತಾರೆ. 

ಮುಂಡಾ ಜನಾಂಗ ಅರಣ್ಯವನ್ನು ಕಟಾವು ಮಾಡಿ ಅಲ್ಲಿ ಕೃಷಿ ಚಟುವಟಿಕೆ ನಡೆಸುತ್ತದೆ. ಹೀಗೆ ಕೃಷಿ ಚಟುವಟಿಕೆ ಮಾಡುವ ಭೂಮಿಯ ಮಾಲಿಕತ್ವವು ಸಂಪೂರ್ಣ ಬುಡಕಟ್ಟಿನ ಕೈಯಲ್ಲಿರುತ್ತದೆ ಹೊರತು ಯಾವುದೇ ಒಬ್ಬ ವ್ಯಕ್ತಿಗೆ ಮಾಲಿಕತ್ವ ಹೊಂದುವ ಅವಕಾಶ ಇರುವುದಿಲ್ಲ. ಈ ಪದ್ಧತಿಗೆ ವಿರುದ್ಧವಾಗಿ ಸಂಜು ಪ್ರಧಾನ್‌ ಒಬ್ಬನೇ ಮರ ಕಡಿದು ಪಟ್ಟಣದಲ್ಲಿ ಮಾರುತ್ತಿದ್ದ ಎಂದು ಆರೋಪಿಸಲಾಗಿದೆ. 

ಪ್ರಧಾನ್‌ ಮೇಲಿನ ದಾಳಿಯ ಕುರಿತು ಮುನ್ಸೂಚನೆ ಪಡೆದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಾದರೂ, ಘಟನಾ ಸ್ಥಳದಲ್ಲಿ ನೆರೆದಿದ್ದ ಜನಸ್ತೋಮದ ಎದುರು ಪೊಲೀಸರು ಏನೂ ಮಾಡಲಾಗದೆ ಅಸಹಾಯಕರಾಗಿ ನಿಲ್ಲಬೇಕಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಡೆಗೆ ಹೆಚ್ಚುವರಿ ಪಡೆಯನ್ನು ಕರೆಸಲಾಯಿತಾದರೂ, ಆ ವೇಳೆಗಾಗುವಾಗ ಪ್ರಧಾನ್‌ ದೇಹ ಭಾಗಶ ಬೆಂಕಿಯಿಂದ ಸುಡಲಾಗಿತ್ತು. 

ಬಂಬಲ್ಕೆರಾ ಗ್ರಾಮಕ್ಕೆ ಸೇರಿದ ಸಂಜು ಪ್ರಧಾನ್ ಅಲಿಯಾಸ್ ಸಂಜಯ್ ಪ್ರಧಾನ್ ಅಲಿಯಾಸ್ ಭಾವು ಎಂಬಾತ ಈ ಪ್ರದೇಶದಲ್ಲಿ ‘ಕುಂಟಕಟ್ಟಿ’ ಮರಗಳನ್ನು ಕಡಿಯುವ ಕಾರ್ಯದಲ್ಲಿ ತೊಡಗಿದ್ದನೆಂದು ಆರೋಪಿಸಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆದರೆ, ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲದ ಹಿನ್ನೆಲೆಯಲ್ಲಿ ಮಂಗಳವಾರ, ಗ್ರಾಮಸ್ಥರೇ ಸಭೆ ನಡೆಸಿದ್ದು, ಸಭೆಯಲ್ಲಿ ಪ್ರಧಾನ್‌ಗೆ ಒಂದು ಪಾಠ ಕಲಿಸುವುದಾಗಿ ತೀರ್ಮಾನಿಸಲಾಗಿತ್ತು.  ಅದರ ನಂತರ ಪ್ರಧಾನ್ ನನ್ನು ಹಿಡಿದು ಅಮಾನುಷವಾಗಿ ಥಳಿಸಿ, ಸುಟ್ಟು ಹಾಕಲಾಯಿತು ಎಂದು ಸಿಮ್ಡೆಗಾ ಎಸ್ಪಿ ಶಮ್ಸ್ ತಬ್ರೇಜ್ ಹೇಳಿದ್ದಾರೆ.

ಕುಂಟಾಕುಟ್ಟಿ ಮರಗಳನ್ನು ಕಡಿಯುತ್ತಿದ್ದದಕ್ಕೆ ನೀಡಿರುವ ಪ್ರತಿಕ್ರಿಯೆ ಇದಾಗಿದ್ದು, ಪ್ರಧಾನ್‌ ವಿರುದ್ಧ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆದರೆ ಪೊಲೀಸ್‌ ಠಾಣೆಗೆ ದೂರು ನೀಡಿರಲಿಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News