×
Ad

ಶಾಲೆಗಳ ಮುಚ್ಚುಗಡೆಯಿಂದ ಮಕ್ಕಳ ಮೇಲೆ ವಿನಾಶಕಾರಿ ಪರಿಣಾಮ: ಶಿಕ್ಷಣದ ಹಕ್ಕುಗಳ ಸಂಘಟನೆ ಕಳವಳ

Update: 2022-01-04 23:31 IST
file photo:PTI

ಹೊಸದಿಲ್ಲಿ,ಜ.4: ಕೋವಿಡ್ ಸಾಂಕ್ರಾಮಿಕದ ಹಾವಳಿಯ ಕಾರಣ ನೀಡಿ ಶಾಲೆಗಳನ್ನು ಮುಚ್ಚುಗಡೆಗೊಳಿಸುವುದನ್ನು ಶಿಕ್ಷಣದ ಹಕ್ಕುಗಳ ಸಂಘಟನೆಯೊಂದು ಬಲವಾಗಿ ವಿರೋಧಿಸಿದ್ದು, ‘‘ ಇದು ಮಕ್ಕಳ ಮೇಲೆ ವಿನಾಶಕಾರಿ ಪರಿಣಾಮ ಬೀರಲಿದೆ’’ ಎಂದು ಎಚ್ಚರಿಕೆ ನೀಡಿದೆ.

 ‘‘ ಈ ಮೊದಲು ಸಂಪೂರ್ಣ ಲಾಕ್‌ಡೌನ್ ಹೇರಿಕೆಯು ಆರ್ಥಿಕತೆ ಹಾಗೂ ಉದ್ಯೋಗಗಳಿಗೆ ತೀವ್ರ ಪರಿಣಾಮವನ್ನು ಬೀರಿತ್ತು. ಅದೇ ರೀತಿ ಶಾಲೆಗಳ ಲಾಕ್‌ಡೌನ್ ನಮ್ಮ ಮಕ್ಕಳಿಗೆ ದೀರ್ಘಾವಧಿಗೆ ಗಂಭೀರವಾದ ಹಾನಿಯುಂಟು ಮಾಡಲಿದೆ ಎಂದು ‘ಶಿಕ್ಷಣ ತುರ್ತು ಸ್ಥಿತಿ ಕುರಿತ ರಾಷ್ಟ್ರೀಯ ಮೈತ್ರಿಕೂಟ’ ಸಂಘಟನೆಯು ಮಂಗಳವಾರ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಕಳವಳ ವ್ಯಕ್ತಪಡಿಸಿದೆ.ಈ ಗಂಭೀರವಾದ ಹಾನಿಯನ್ನು ತಡೆಗಟ್ಟಲು ಶಾಲೆಗಳನ್ನು ತೆರೆದಿಡಬೇಕಾಗಿದೆ ಹಾಗೂ ಕಲಿಕೆಯನ್ನು ಮುಂದುವರಿಸಬೇಕೆಂದು ಅದು ಆಗ್ರಹಿಸಿದೆ.

 ‘ಶಿಕ್ಷಣ ತುರ್ತು ಸ್ಥಿತಿ ಕುರಿತ ರಾಷ್ಟ್ರೀಯ ಮೈತ್ರಿಕೂಟ’ ಸಂಘಟನೆಯ ಹೇಳಿಕೆಯನ್ನು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ರಾಮಪಾಲ್ ಸಿಂಗ್, ಬದಲಾವಣೆಗಾಗಿ ಮಾಹಿತಿ ತಂತ್ರಜ್ಞಾನ ಸಂಘಟನೆಯ ನಿರ್ದೇಶಕ ಗುರುಮೂರ್ತಿ ಕಾಶಿನಾಥ್ ಹಾಗೂ ಮಕ್ಕಳ ಹಕ್ಕುಗಳ ತಜ್ಞ ಅಲ್ಕಾ ಸಿಂಗ್ ಸೇರಿದಂತೆ 18 ಗಣ್ಯ ನಾಯಕರು ಬೆಂಬಲಿಸಿದ್ದಾರೆ.

ಕೋವಿಡ್ ಪಾಸಿಟಿವಿಟಿ ದರ ಶೇ.2ರ ಗಡಿಯನ್ನು ತಲುಪಿದಾಗಲೂ ದಿಲ್ಲಿ, ಗೋವಾ, ಹರ್ಯಾಣ ಸರಕಾರಗಳು ಶಾಲೆಗಳನ್ನು ಮುಚ್ಚುಗಡೆಗೊಳಿಸಿದ್ದರ ಬಗ್ಗೆ  ಸಂಘಟನೆಯು ಹೇಳಿಕೆಯಲ್ಲಿ ಗಮನಸೆಳೆದಿದೆ.

ಕೋವಿಡ್ ಹಿನ್ನೆಲೆಯಲ್ಲಿ 2020ರ ಮಾರ್ಚ್ ನಲ್ಲಿ ಭಾರತದಲ್ಲಿ ಶಾಲೆಗಳು ಮುಚ್ಚುಗಡೆಯಾದಾಗ ಹಲವಾರು ಮಕ್ಕಳ ಪೌಷ್ಟಿಕತೆ, ಆರೋಗ್ಯ ಹಾಗೂ ಶಿಕ್ಷಣದ ಮೇಲೆ ಅತ್ಯಂತ ವಿನಾಶಕಾರಿ ಪರಿಣಾಮಗಳುಂಟಾಗಿದ್ದವು. ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಹಾಗೂ ಮನೆಗಳಲ್ಲಿ ಮಕ್ಕಳ ಮೇಲಿನ ಹಿಂಸೆಯ ಪ್ರಕರಣಗಳು ಹೆಚ್ಚಾಗಿದ್ದವು ಎಂದು ಹೇಳಿಕೆ ತಿಳಿಸಿದೆ. ಕೋವಿಡ್ ಸಾಂಕ್ರಾಮಿಕದ ನಡುವೆ ಅನೇಕ ದೇಶಗಳಲ್ಲಿ ಶಾಲೆಗಳು ತೆರೆದೇ ಇದ್ದವು ಎಂದು ಅದು ಬೆಟ್ಟು ಮಾಡಿ ತೋರಿಸಿದೆ.

ಶಾಲೆಗಳ ಮುಚ್ಚುಗಡೆಯಿಂದಾಗಿ ಮಕ್ಕಳಲ್ಲಿ ಶೈಕ್ಷಣಿಕ ಹಿನ್ನಡೆಯುಂಟಾಗಿದೆ. ಎಳೆಯ ವಯಸ್ಸಿನ ಮಕ್ಕಳು ಕಲಿಕೆಯ ಅಭ್ಯಾಸವನ್ನೇ ಮರೆತುಬಿಟ್ಟಿದ್ದಾರೆ, ಅವರ ಮೂಲಭೂತ ಓದುವಿಕೆ ಹಾಗೂ ಅಂಕಗಣಿತದ ನೈಪುಣ್ಯತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇದರ ಪರಿಣಾಮ ದೊಡ್ಡ ಪ್ರಮಾಣದ ಮಕ್ಕಳು ಶಾಲೆಗಳನ್ನು ತೊರೆದಿದ್ದಾರೆ’’ ಎಂದು ಹೇಳಿಕೆ ತಿಳಿಸಿದೆ.

ವರ್ಚುವಲ್ ಕಲಿಕೆಯು ಮಕ್ಕಳ ಮೇಲೆ ಪರಿಣಾಮಕಾರಿಯಾಗಿಲ್ಲ ಹಾಗೂ ಅದು ಅರ್ಥವಿಲ್ಲದ ಆಯ್ಕೆಯಾಗಿದೆ ಎಂದು ಶಿಕ್ಷಣ ತುರ್ತು ಸ್ಥಿತಿ ಕುರಿತ ರಾಷ್ಟ್ರೀಯ ಮೈತ್ರಿಕೂಟ’ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News