ಪ್ರಧಾನಿಯ ಫಿರೋಝ್‌ಪುರ ರ‍್ಯಾಲಿಗೆ 9 ರೈತ ಒಕ್ಕೂಟಗಳು ವಿರೋಧ

Update: 2022-01-04 18:05 GMT

ಚಂಡಿಗಢ, ಜ. 4: ಪಂಜಾಬ್ ನ ಫಿರೋಝ್ ಪುರದಲ್ಲಿ ನಾಳೆ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ವಿರುದ್ಧ ಒಟ್ಟು 9 ರೈತ ಒಕ್ಕೂಟಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಆದುದರಿಂದ ರಾಜ್ಯಾದ್ಯಂತ ವಿವಿಧ ಸ್ಥಳಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಬಳಿಕ ತಮ್ಮ ಬಾಕಿ ಉಳಿದಿರುವ ಬೇಡಿಕೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ರೈತ ಒಕ್ಕೂಟಗಳು ಪ್ರತಿಭಟನೆ ನಡೆಸಲಿವೆ.

ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ, ಕ್ರಾಂತಿಕಾರಿ ಕಿಸಾನ್ ಯೂನಿಯನ್, ಅಝಾದ್ ಕಿಸಾನ್ ಸಮಿತಿ ದಾವೋಬ, ಜೈ ಕಿಸಾನ್ ಆಂದೋಲನ, ಬಿಕೆಯು ಸಿಧುಪುರ, ಕಿಸಾನ್ ಸಂಘರ್ಷ ಸಮಿತಿ (ಕೊಟ್ಬುಧ), ಲೋಕ್ ಭಲಾಯಿ ವೆಲ್ಫೇರ್ ಸೊಸೈಟಿ, ಬಿಕೆಯು ಕ್ರಾಂತಿಕಾರಿ ಹಾಗೂ ದಸುಯಾ ಸಮಿತಿ ಸೇರಿದಂತೆ 9 ರೈತ ಒಕ್ಕೂಟಗಳು ಜನವರಿ 5ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಫಿರೋಝ್ಪುರ ರ್ಯಾಲಿಯನ್ನು ವಿರೋಧಿಸಲು ನಿರ್ಧರಿಸಿವೆ.

ಪ್ರಧಾನಿ ಭೇಟಿ ವೇಳೆ ‘ಮೋದಿ ಗೋ ಬ್ಯಾಕ್’ ಬ್ಯಾನರ್ಗಳನ್ನು ಪ್ರದರ್ಶಿಸಲಾಗುವುದು ಎಂದು ರೈತ ಒಕ್ಕೂಟ ಬೆದರಿಕೆ ಒಡ್ಡಿದೆ. ಮೂರು ಪ್ರಾಥಮಿಕ ಬೇಡಿಕೆಯನ್ನು ಕೇಂದ್ರ ಸರಕಾರ ಈಡೇರಿಸದೇ ಇರುವುದರಿಂದ ಪ್ರಧಾನಿ ಅವರ ರ್ಯಾಲಿಯನ್ನು ವಿರೋಧಿಸಲಾಗುವುದು ಎಂದು ಒಕ್ಕೂಟದ ನಾಯಕರು ಹೇಳಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಸಂದರ್ಭ ಮೃತಪಟ್ಟ ರೈತರ ಪ್ರತಿ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು, ಬಂಧಿತ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಮೊದಲಾದವು ಅವರ ಬೇಡಿಕೆಗಳಲ್ಲಿ ಸೇರಿವೆ.

ಉತ್ತರಪ್ರದೇಶ, ದಿಲ್ಲಿ ಹಾಗೂ ಹರ್ಯಾಣದಲ್ಲಿ ರೈತರ ವಿರುದ್ಧ ದಾಖಲಿಸಲಾದ ಹತ್ಯೆ ಪ್ರಕರಣವನ್ನು ಹಿಂಪಡೆಯಬೇಕು ಎಂಬುದು ಕೂಡ ಇತರ ಬೇಡಿಕೆಗಳಲ್ಲಿ ಸೇರಿದೆ.

ಫಿರೋಝ್‌ ಪುರ ರ್ಯಾಲಿಯನ್ನು ವಿರೋಧಿಸಿರುವ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ನಾಯಕರಾದ ಸತ್ನಾಮ್ ಸಿಂಗ್ ಪನ್ನು ಹಾಗೂ ಸರವಣ ಸಿಂಗ್ ಪಂಧೇರ್ ತಮ್ಮ ಹೇಳಿಕೆಯಲ್ಲಿ, ಫಿರೋಝ್‌ ಪುರ ರ್ಯಾಲಿಯಲ್ಲಿ ಪ್ರಧಾನಿ ಅವರಿಗೆ ಮಾತನಾಡಲು ಅವಕಾಶ ನೀಡಲಾರೆವು ಎಂದು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರ್ಯಾಲಿ ನಡೆಯಲಿರುವ ಸ್ಥಳದಲ್ಲಿ ಸೇರುವಂತೆ ಪಂಜಾಬ್ ನಾದ್ಯಂತದ ರೈತರಿಗೆ ಸಮಿತಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News