ಜನಪ್ರಿಯ ಬ್ಲ್ಯಾಕ್ ಬೆರಿ ಮೊಬೈಲ್ ಫೋನ್ ನ ಯುಗಾಂತ್ಯ

Update: 2022-01-04 18:38 GMT
photo:PTI

ಒಟ್ಟಾವ, ಜ.4: ಮೊಬೈಲ್ ಫೋನ್ ಯುಗದ ಆರಂಭದಲ್ಲಿ ತನ್ನ ಹೆಸರಿನಿಂದಲೇ ಜನಪ್ರಿಯಗೊಂಡಿದ್ದ ಕೆನಡಾ ಮೂಲದ ಇಲೆಕ್ಟ್ರಾನಿಕ್ಸ್ ಸಾಧನ ಸಂಸ್ಥೆ ಬ್ಲ್ಯಾಕ್ ಬೆರಿ ಜನವರಿ 4ರಿಂದ ತೆರೆಮರೆಗೆ ಸರಿಯಲಿದೆ.

ಮೂಲ ಆಪರೇಟಿಂಗ್ ವ್ಯವಸ್ಥೆ ಮತ್ತು ಸೇವೆಗಳಿಂದ ಚಾಲನೆಗೊಳ್ಳುವ ಬ್ಲ್ಯಾಕ್ ಬೆರಿ ಸಾಧನಗಳು ಜನವರಿ 4ರಿಂದ ಕಾರ್ಯನಿರ್ವಹಿಸುವುದಿಲ್ಲ. ಇದು ಐಕಾನ್ ಮೊಬೈಲ್ ಫೋನ್ ನ ಯುಗಾಂತ್ಯದ ಸಂಕೇತವಾಗಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

ರಿಸರ್ಚ್ ಇನ್ ಮೋಷನ್ ಎಂಬ ಮೂಲ ಹೆಸರಿನ ಕೆನಡಾದ ಒಂಟಾರಿಯೊ ಮೂಲದ ಬ್ಲ್ಯಾಕ್‌ ಬೆರಿ ಲಿ. ಸಂಸ್ಥೆಯ ವಿಶಿಷ್ಟ ಮೊಬೈಲ್ 1990ರ ದಶಕದಲ್ಲಿ ಮಾರುಕಟ್ಟೆ ಪ್ರವೇಶಿಸಿ ಅತ್ಯಂತ ಜನಪ್ರಿಯವಾಯಿತು. ಬ್ಲ್ಯಾಕ್ ಬೆರಿ ಉತ್ಪನ್ನಗಳು, ಅದರ ಕೀ ಬೋರ್ಡ್ ವಿನ್ಯಾಸವು ವೃತ್ತಿಪರರಿಗೆ ಮತ್ತು ಯುವಜನತೆಗೆ ಅಚ್ಚುಮೆಚ್ಚಿನದ್ದಾಗಿತ್ತು. ಆದರೆ ಆ್ಯಪಲ್ ಸಂಸ್ಥೆಯ ಐಫೋನ್ ಹಾಗೂ ಇತರ ಸ್ಮಾರ್ಟ್‌ಫೋನ್‌ಗಳ ಬೃಹತ್ ಡಿಸ್‌ಪ್ಲೇ, ಉತ್ತಮ ಗ್ರಾಫಿಕ್ಸ್, ವ್ಯಾಪಕ ಅಪ್ಲಿಕೇಶನ್‌ಗಳ ಕೊಡುಗೆಯ ಪೈಪೋಟಿ ಎದುರಿಸಲಾರದೆ ಕ್ರಮೇಣ ಬ್ಲ್ಯಾಕ್‌ ಬೆರಿ ಮಾರುಕಟ್ಟೆಯಲ್ಲಿ ಮಂಕಾಯಿತು.

2016ರಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದನೆ ನಿಲ್ಲಿಸಿದ ಕೆನಡ ಸಂಸ್ಥೆ, ಲೈಸನ್ಸ್ ಅನ್ನು ಟಿಸಿಎಲ್ ಕಮ್ಯುನಿಕೇಷನ್ ಸಂಸ್ಥೆಗೆ 4 ವರ್ಷದ ಲೀಸ್ ನೀಡಿದ್ದು 2020ರಲ್ಲಿ ಟಿಸಿಎಲ್ ಸಂಸ್ಥೆಯೂ ಬ್ಲ್ಯಾಕ್‌ ಬೆರಿ ಸ್ಮಾರ್ಟ್‌ಫೋನ್‌ ಉತ್ಪಾದನೆ ಸ್ಥಗಿತಗೊಳಿಸಿದೆ. ಇದೀಗ ಫೋನ್ ಅಧಿಕೃತವಾಗಿ ತೆರೆಮರೆಗೆ ಸರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News