ಟೋನಿ ಬ್ಲೇರ್ ನೈಟ್ ಪದವಿ ರದ್ದತಿಗೆ ಆಗ್ರಹಿಸಿ ಆನ್‌ಲೈನ್ ಅಭಿಯಾನ ‌

Update: 2022-01-04 19:06 GMT
ಟೋನಿ ಬ್ಲೇರ್(photo:twitter)

ಲಂಡನ್, ಜ.4: ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಗೆ ನೈಟ್ ಹುಡ್ ಪದವಿಯ ಗೌರವ ನೀಡಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅರ್ಧ ಮಿಲಿಯನ್ ಗೂ ಅಧಿಕ ಮಂದಿ ಬ್ರಿಟನ್ ಸರಕಾರವನ್ನು ಆಗ್ರಹಿಸಿದ್ದಾರೆ.

1997ರಿಂದ 2007ರ ಅವಧಿಯಲ್ಲಿ ಬ್ರಿಟನ್‌ನ ಪ್ರಧಾನಿಯಾಗಿದ್ದ ಸರ್ ಟೋನಿ ಬ್ಲೇರ್‌ರನ್ನು 2021ರಲ್ಲಿ ಬ್ರಿಟನ್ ರಾಣಿ ನೀಡುವ ನೈಟ್ ಹುಡ್ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಈ ಗೌರವವನ್ನು ರದ್ದುಪಡಿಸುವ ನಿಟ್ಟಿನಲ್ಲಿ ರಾಣಿಗೆ ಮನವರಿಕೆ ಮಾಡುವಂತೆ ಸರಕಾರವನ್ನು ಆಗ್ರಹಿಸಿ ಆನ್‌ಲೈನ್‌ನಲ್ಲಿ  ಸಾರ್ವಜನಿಕರ ಅಭಿಯಾನ ಆರಂಭವಾಗಿದ್ದು ಸುಮಾರು 5,50,000 ಮಂದಿ ಸಹಿ ಹಾಕಿದ್ದಾರೆ.

ಟೋನಿ ಬ್ಲೇರ್ ಬ್ರಿಟನ್‌ನ ಸಂವಿಧಾನ ಮತ್ತು ಸಮಾಜದ ಸಂರಚನೆಗೆ ಸರಿಪಡಿಸಲಾಗದ ಹಾನಿ ಎಸಗಿದ್ದಾರೆ. ವಿವಿಧ ಸಂಘರ್ಷದಲ್ಲಿ ಎಣಿಸಲಾಗದಷ್ಟು ಮುಗ್ಧ ನಾಗರಿಕರ ಸಾವಿಗೆ ಅವರು ವೈಯಕ್ತಿಕವಾಗಿ ಹೊಣೆಗಾರರು. ಇದಕ್ಕಾಗಿ ಅವರನ್ನು ಯುದ್ಧಾಪರಾಧಕ್ಕೆ ಹೊಣೆಗಾರರನ್ನಾಗಿಸಬೇಕು ಎಂದು ಆಗ್ರಹಿಸಲಾಗಿದೆ.

ಬ್ರಿಟನ್‌ನ ಸಂಸತ್ ವೆಬ್‌ಸೈಟ್‌ನಲ್ಲಿ ಆರಂಭವಾಗುವ ಅಭಿಯಾನದಲ್ಲಿ ಸಹಿದಾರರ ಸಂಖ್ಯೆ 1 ಲಕ್ಷ ಮೀರಿದರೆ ಆಗ ಆ ಅಭಿಯಾನದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಯಬೇಕು ಎಂಬ ಕಾನೂನಿದೆ. ಆದರೆ ಬ್ಲೇರ್ ವಿರುದ್ಧದ ಅಭಿಯಾನ ಸಂಸತ್ತಿನ ವೆಬ್‌ಸೈಟ್‌ನಲ್ಲಿ ನಡೆದಿಲ್ಲ.

ಇರಾಕ್ ಮತ್ತು ಅಫ್ಘಾನ್‌ನಲ್ಲಿ ಸೈನಿಕ ಕಾರ್ಯಾಚರಣೆ ನಡೆಸಿದ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳ ಪಡೆಗೆ ಬ್ರಿಟನ್ ಯೋಧರನ್ನು ಕಳುಹಿಸುವ ನಿರ್ಧಾರಕ್ಕಾಗಿ ಲೇಬರ್ ಪಾರ್ಟಿಯ ಮುಖಂಡ ಬ್ಲೇರ್ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶ, ಅಸಮಾಧಾನ ವ್ಯಕ್ತವಾಗಿತ್ತು. ಈ ಕಾರ್ಯಾಚರಣೆಯಲ್ಲಿ ಬ್ರಿಟನ್‌ನ ನೂರಾರು ಯೋಧರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News