ಸಾಮಾಜಿಕ ತಾಣಗಳಲ್ಲಿ ದ್ವೇಷಯುತ ಪೋಸ್ಟ್ ಪ್ರಕಟಿಸುವವರ ಪಾಸ್‌ಪೋರ್ಟ್ ಮುಟ್ಟುಗೋಲು: ಹೈದರಾಬಾದ್ ಪೊಲೀಸ್ ಎಚ್ಚರಿಕೆ
ಹೈದರಾಬಾದ್,ಜ.5: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಯುತ ಅಥವಾ ಮಾನಹಾನಿಕಕಾರಕ ಪೋಸ್ಟ್‌ಗಳನ್ನು ಪ್ರಕಟಿಸುವುದರ ವಿರುದ್ಧ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಹೈದರಾಬಾದ್ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಇಂತಹ ಕೃತ್ಯಗಳಲ್ಲಿ ತೊಡಗುವ ಎನ್‌ಆರ್‌ಐಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು ಹಾಗೂ ಶೋಧನಾ (ಲುಕ್ ಔಟ್) ನೋಟಿಸ್‌ಗಳನ್ನು ಜಾರಿಗೊಳಿಸಲಾಗುವುದೆಂದು ಹೈದರಾಬಾದ್‌ನ ನೂತನ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ತಿಳಿಸಿದ್ದಾರೆ.
‘‘ಜಾಲತಾಣಗಳಲ್ಲಿ ದ್ವೇಷಯುತ ಹಾಗೂ ಮಾನಹಾನಿಕರ ಪೋಸ್ಟ್‌ಗಳನ್ನು ಪ್ರಕಟಿಸುವವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಲಾಗುವುದು ಹಾಗೂ ಕಾನೂನು ನಿಯಮಾವಳಿಗಳ ಪ್ರಕಾರ ಅವರ ವೀಸಾಗಳನ್ನು ಕೂಡಾ ರದ್ದುಪಡಿಸಲಾಗುವುದು’’ ಎಂದವರು ತಿಳಿಸಿದರು. ಹೈದರಾಬಾದ್ ಪೊಲೀಸ್ ಆಯುಕ್ತರಾಗಿಡಿ.25ರಂದು ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳವಾರ ಮೊದಲ ಬಾರಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆನಂದ್ ಅವರು ಈ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಪೊಲೀಸ್ ವರಿಷ್ಠರಿಗೆ, ಅಧಿಕಾರಿಗಳಿಗೆ ಸೂಚನೆ ನೀಡಿದರು. ಫೋಟೋಗಳನ್ನು ತಿರುಚಿ, ನಿಂದನಾತ್ಮಕ ಪದಗಳೊಂದಿಗೆ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಅವರು ಸೂಚನೆ ನೀಡಿದ್ದಾರೆ.
‘ಬುಲ್ಲಿಬಾಯ್’ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ಆಕ್ಷೇಪಕಾರಿ ಛಾಯಾಚಿತ್ರಗಳನ್ನು ಹಾಗೂ ನಿಂದನಾತ್ಮಕ ಪದಗಳನ್ನು ಬಳಸಿದ ಪ್ರಕರಣವು ಭಾರೀ ವಿವಾದದ ಕಿಡಿಯೆಬ್ಬಿಸಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸ್ ವರಿಷ್ಠರು ಈ ಆದೇಶವನ್ನು ನೀಡಿರುವುದು ಹೆಚ್ಚಿನ ಮಹತ್ವ ಪಡೆದಿದೆ.