ಪೋಷಕರನ್ನು ಕಳೆದುಕೊಂಡಿದ್ದ ಯುವತಿ ಹಣಕ್ಕಾಗಿ ʼಬುಲ್ಲಿ ಬಾಯ್ʼ ಆ್ಯಪ್ ರೂಪಿಸಿದ್ದಳು: ಪೊಲೀಸ್
ಹೊಸದಿಲ್ಲಿ, ಜ. 5: ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು 18 ವರ್ಷದ ಯುವತಿಯೋರ್ವಳನ್ನು ಬಂಧಿಸಿದ ಬಳಿಕ ಹಿರಿಯ ಸಾಹಿತ್ಯ ರಚನೆಕಾರ ಜಾವೇದ್ ಅಖ್ತರ್, ಇತ್ತೀಚೆಗೆ ಕ್ಯಾನ್ಸರ್ ಹಾಗೂ ಕೋವಿಡ್‌ನಿಂದ ತನ್ನ ಹೆತ್ತವರನ್ನು ಕಳೆದುಕೊಂಡ ಯುವತಿಯನ್ನು ಕ್ಷಮಿಸುವಂತೆ ಮನವಿ ಮಾಡಿದ್ದಾರೆ.
‘ಬುಲ್ಲಿ ಬಾಯಿ’ ಪ್ರಕರಣಕ್ಕೆ ಸಂಬಂಧಿಸಿ ತನ್ನ ಅಭಿಪ್ರಾಯವನ್ನು ಸಕ್ರಿಯವಾಗಿ ಶೇರ್ ಮಾಡಿಕೊಳ್ಳುತ್ತಿರುವ ಜಾವೇದ್ ಅಖ್ತರ್, ಬುಧವಾರ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಯುವತಿಯ ಬಗ್ಗೆ ಅನುಕಂಪ ತೋರಿಸುವಂತೆ ಹಾಗೂ ಆಕೆಯನ್ನು ಕ್ಷಮಿಸುವಂತೆ ನೆಟ್ಟಿಗರಲ್ಲಿ ವಿನಂತಿಸಿದ್ದಾರೆ. ಅವರು ಟ್ವೀಟ್‌ನಲ್ಲಿ ‘‘ಇತ್ತೀಚೆಗೆ ಕ್ಯಾನ್ಸರ್ ಹಾಗೂ ಕೊರೋನದಿಂದ ತನ್ನ ಹೆತ್ತವರನ್ನು ಕಳೆದುಕೊಂಡ 18 ವರ್ಷದ ಯುವತಿ ಬುಲ್ಲಿ ಬಾಯಿಯ ರೂವಾರಿಯಾಗಿದ್ದರೆ, ಹಿರಿಯರು ಆಕೆಯನ್ನು ಭೇಟಿಯಾಗಿ ಮಾಡಿದ ತಪ್ಪನ್ನು ಮನವರಿಕೆ ಮಾಡಿಕೊಡಬೇಕು. ಆಕೆಗೆ ಸಹಾನುಭೂತಿ ತೋರಿಸಿ ಹಾಗೂ ಕ್ಷಮಿಸಿ’’ ಎಂದು ಹೇಳಿದ್ದಾರೆ.
ಹಣಕ್ಕಾಗಿ ಆ್ಯಪ್ ರೂಪಿಸಿದ ಯುವತಿ: ಪೊಲೀಸ್
ಪ್ರಕರಣದ ಆರೋಪಿಗಳಲ್ಲಿ ಶ್ವೇತಾ ಸಿಂಗ್ ಅತಿ ಕಿರಿಯಳು. ಈಕೆ ‘ಬುಲ್ಲಿ ಬಾಯಿ’ ಆ್ಯಪ್ ನ ಹಿಂದಿನ ರೂವಾರಿ. ಉತ್ತರಾಖಂಡದ ನಿವಾಸಿಯಾಗಿರುವ ಈಕೆ ‘ಬುಲ್ಲಿ ಬಾಯಿ’ ಹಾಗೂ ಇತರ ಮೂರು ಆ್ಯಪ್ ಗಳನ್ನು ನಿಯಂತ್ರಿಸುತ್ತಿದ್ದಾಳೆ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಆಕೆ ಹಣಕ್ಕಾಗಿ ಈ ಕೃತ್ಯದಲ್ಲಿ ತೊಡಗಿದ್ದಳು ಎಂದು ಉತ್ತರಾಖಂಡ ಪೊಲೀಸರು ತಿಳಿಸಿದ್ದಾರೆ. ಆಕೆಯ ತಂದೆ ಕೋವಿಡ್ನಿಂದ ಹಾಗೂ ತಾಯಿ ಕ್ಯಾನ್ಸರ್ ನಿಂದ ಈ ಹಿಂದೆ ಮೃತಪಟ್ಟಿದ್ದಾರೆ. ‘‘ಬುಲ್ಲಿ ಬಾಯಿ ಆ್ಯಪ್ ಗೆ ಸಂಬಂಧಿಸಿ ಉತ್ತರಾಖಂಡದ ರಾಯಪುರದಿಂದ ಇತ್ತೀಚೆಗೆ ಬಂಧಿಸಲಾಗಿರುವ ಯುವತಿ ತೀರಾ ಬಡ ಕುಟುಂಬಕ್ಕೆ ಸೇರಿದವಳು. ಈಕೆಗೆ ತಾಯಿ ಹಾಗೂ ತಂದೆ ಇಲ್ಲ. ಹಣಕ್ಕಾಗಿ ಈ ಕೃತ್ಯದಲ್ಲಿ ತೊಡಗಿಕೊಂಡಿರಬೇಕು’’ ಎಂದು ಉತ್ತರಾಖಂಡದ ಪೊಲೀಸ್ ವರಿಷ್ಠ ಅಶೋಕ್ ಕುಮಾರ್ ಹೇಳಿದ್ದಾರೆ.