ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಪ್ರವೇಶ ವೀಸಾ ರದ್ದುಪಡಿಸಿದ ಆಸ್ಟ್ರೇಲಿಯಾ !

Update: 2022-01-06 01:46 GMT

ಸಿಡ್ನಿ: ವಿಶ್ವದ ನಂಬರ್ ವನ್ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಅವರ ಪ್ರವೇಶ ವೀಸಾವನ್ನು ರದ್ದುಪಡಿಸಿರುವುದಾಗಿ ಆಸ್ಟ್ರೇಲಿಯಾ ಪ್ರಕಟಿಸಿದೆ. ಸರ್ಕಾರದ ಈ ಮಹತ್ವದ ನಿರ್ಧಾರ ಜೊಕೊವಿಕ್ ಅವರ ಬಂಧನಕ್ಕೆ ಮತ್ತು ದೇಶದಿಂದ ಹೊರಹಾಕಲು ದಾರಿ ಮಾಡಿಕೊಡಲಿದೆ.

ಈ ಸೆರ್ಬಿಯಾ ಆಟಗಾರ ಬುಧವಾರ ಸಂಜೆ ಮೆಲ್ಬೋರ್ನ್‌ಗೆ ಆಗಮಿಸಿದ್ದರು. "ಕೋವಿಡ್-19 ವಿರುದ್ಧ ಸಂಪೂರ್ಣ ಲಸಿಕೆ ಪಡೆದ ಬಗ್ಗೆ ಪುರಾವೆ ಇಲ್ಲದೇ ಕೂಟದಲ್ಲಿ ಪಾಲ್ಗೊಳ್ಳಲು ವೈದ್ಯಕೀಯ ವಿನಾಯ್ತಿ ನೀಡಲಾಗಿದೆ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜೊಕೊವಿಕ್ ಸಂಭ್ರಮಿಸಿದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಎರಡು ವೈದ್ಯಕೀಯ ತಂಡಗಳು ಈ ಸಂಬಂಧ ಜೊಕೊವಿಕ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಬಳಿಕ ಆಸ್ಟ್ರೇಲಿಯನ್ ಓಪನ್ ಕೂಟದ ಆಯೋಜಕರು ಈ ವಿನಾಯಿತಿ ನೀಡಿದ್ದರು. ಎರಡು ವರ್ಷಗಳ ಕೋವಿಡ್-19 ಸಂಬಂಧಿ ಲಾಕ್‌ ಡೌನ್ ಮತ್ತು ನಿರ್ಬಂಧಗಳಿಂದ ಜರ್ಜರಿತವಾಗಿರುವ ಆಸ್ಟ್ರೇಲಿಯನ್ ನಾಗರಿಕರಲ್ಲಿ ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

"ಜೊಕೊವಿಕ್ ಅವರು ಆಸ್ಟ್ರೇಲಿಯಾ ಪ್ರವೇಶಿಸಲು ಅಗತ್ಯವಾದ ಸೂಕ್ತ ಪುರಾವೆಯನ್ನು ಒದಗಿಸಲು ವಿಫಲರಾಗಿದ್ದಾರೆ. ಇದರಿಂದಾಗಿ ಅವರ ವೀಸಾ ರದ್ದುಪಡಿಸಲಾಗಿದೆ" ಎಂದು ಆಸ್ಟ್ರೇಲಿಯಾ ಗಡಿ ಪಡೆ ಹೇಳಿಕೆ ನೀಡಿದೆ. "ಪ್ರವೇಶಕ್ಕಾಗಿ ಅಧಿಕೃತ ವೀಸಾ ಇಲ್ಲದ ಯಾವ ನಾಗರಿಕರಿಗೂ ಅವಕಾಶ ಇಲ್ಲ. ವೀಸಾ ರದ್ದಾದವರನ್ನು ಬಂಧಿಸಿ ದೇಶದಿಂದ ಹೊರಹಾಕಲಾಗುವುದು" ಎಂದು ಸ್ಪಷ್ಟಪಡಿಸಿದೆ.

"ನಮ್ಮ ಕಾನೂನು ಮತ್ತು ಪ್ರವೇಶ ಅಗತ್ಯತೆಗೆ ಬದ್ಧರಾಗುವವರನ್ನು ಮಾತ್ರ ದೇಶ ಪ್ರವೇಶಿಸಲು ಅಗತ್ಯ ಕ್ರಮಗಳನ್ನು ಆಸ್ಟ್ರೇಲಿಯಾದ ಗಡಿ ಪಡೆ ಅವಕಾಶ ನೀಡಲಿದೆ" ಎಂದು ಹೇಳಿದೆ.

ದೇಶದಲ್ಲಿ ಸಾವಿನ ದರವನ್ನು ಕಡಿಮೆ ಪ್ರಮಾಣದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಗಡಿ ನೀತಿಗಳು ಪ್ರಮುಖ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. "ನಿಯಮಗಳು ನಿಯಮಗಳೇ; ಅದರಲ್ಲೂ ಮುಖ್ಯವಾಗಿ ಗಡಿ ವಿಚಾರದಲ್ಲಿ ಯಾರೂ ನಿಯಮಕ್ಕಿಂತ ಮೇಲಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಗಡಿಯನ್ನು ಕಾಯ್ದುಕೊಳ್ಳುವ ಸಂಬಂಧ ಸರ್ಕಾರ "ಕ್ಷಮೆ ಯಾಚಿಸುವುದಿಲ್ಲ" ಎಂದು ಗೃಹ ವ್ಯವಹಾರಗಳ ಸಚಿವ ಕರೇನ್ ಆಂಡ್ರೂಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News